ADVERTISEMENT

ಜಾಕ್‌ವೆಲ್‌ ಬಳಿ ತುರ್ತು ಕಾಮಗಾರಿ ಅಗತ್ಯ

ತುಂಗಭದ್ರಾ ನದಿಗೆ ಹರಿಸಿದ ನೀರು ಹರಿಹರ ನಗರದ ಜನರ ದಾಹ ತಣಿಸಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:00 IST
Last Updated 20 ಮಾರ್ಚ್ 2017, 6:00 IST

ಹರಿಹರ: ‘ದೇವರು ವರವನ್ನು ಕೊಟ್ಟರೂ, ಪೂಜಾರಿ ಕೊಡಲಿಲ್ಲ’ ಎಂಬ ಗಾದೆ ಮಾತಿನಂತೆ ಸರ್ಕಾರ ಕುಡಿಯುವ ನೀರಿಗೆ ಬವಣೆ ನೀಗಿಸಲು ತುಂಗಭದ್ರಾ ನದಿಗೆ ನೀರು ಹರಿಸುವ ನಿರ್ಧಾರ ಕೈಗೊಂಡರೂ, ನಗರಸಭೆ ಅಧಿಕಾರಿ ಗಳು ಮಾತ್ರ ನಗರಕ್ಕೆ ನೀರು ಸರಬರಾಜು ಮಾಡುವ ಜಾಕ್‌ವೆಲ್‌ ಬಳಿ ನೀರು ಸಂಗ್ರಹಕ್ಕೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ.

ಅನಾವೃಷ್ಟಿಯಿಂದ ಉಂಟಾಗಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ, ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮಾರ್ಚ್‌ 20ರಿಂದ ನಿರಂತರವಾಗಿ 10 ದಿನಗಳ ಕಾಲ 1.6 ಟಿಎಂಸಿ ನೀರು ಹರಿಸಲು ತೀರ್ಮಾನ ಕೈಗೊಂಡಿದೆ. ಆದರೆ ಅಧಿಕಾರಿಗಳು ಮಾತ್ರ ನೀರು ಸಂಗ್ರಹಕ್ಕೆ ಯಾವುದೇ ಮುಂಜಾಗ್ರತಾ ಕ್ರಮ ಜರುಗಿಸಿಲ್ಲ ಎಂಬುದು ಸಾರ್ವಜನಿಕರ ದೂರು.

ನಗರ ತುಂಗಭದ್ರಾ ನದಿ ಪಾತ್ರದಲ್ಲಿ ದ್ದರೂ, ಕಳೆದು ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿ ಸಿದೆ. ನದಿಯ ಒಳ ಹರಿವು ಕಡಿಮೆಯಾ ಗಿದ್ದು, ನದಿ ಪಾತ್ರ ಬಹುತೇಕ ಬತ್ತಿ ಹೋಗಿದೆ. ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತಿದ್ದರೂ, ಕುಡಿಯಲು ಯೋಗ್ಯವಾಗಿಲ್ಲ.

ನಗರಕ್ಕೆ ನೀರು ಸರಬರಾಜು ಮಾಡಲು ಕವಲೆತ್ತು ಗ್ರಾಮದಲ್ಲಿ ನಗರಸಭೆ ಜಾಕ್ವೆಲ್ ನಿರ್ಮಿಸಿದೆ. ಪ್ರತಿ ಬೇಸಿಗೆಯಲ್ಲೂ ನದಿ ನೀರು ಜಾಕ್ವೆಲ್ ಕಿಟಕಿಗಳಿಗೆ ದೊರೆಯುವಂತೆ ಮಾಡಲು ನಗರಸಭೆಯಿಂದ ಮರಳಿನ ಚೀಲಗಳ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ಜಾರಿಗೆ ಬಂದಿದೆ.

ಕಳೆದ ತಿಂಗಳು ಕೂಡ ನದಿ ಪಾತ್ರದಲ್ಲಿ ಮರಳಿನ ಚೀಲದ ತಡೆ ಗೋಡೆ ನಿರ್ಮಿಸಿದೆ. ಆದರೆ, ತಡೆಗೋಡೆ ಶಿಥಿಲಗೊಂಡಿದೆ. ಕೂಡಲೇ ತಡೆಗೋಡೆ ಯನ್ನು ದುರಸ್ತಿಗೊಳಿಸಿ, ಜಾಕ್ವೆಲ್‌ ಬಳಿ ಸ್ವಚ್ಛತಾ ಕಾಮಗಾರಿ ಕೈಗೊಂಡರೆ ತಿಂಗಳ ಕಾಲ ನಗರಕ್ಕೆ ನೀರು ಸರಬರಾಜು ಮಾಡಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ನಗರಕ್ಕೆ ನೀರು ಸರಬರಾಜು ಮಾಡುವ ಜಾಕ್ವೆಲ್‌ ಸುತ್ತಲಿನ ಪ್ರದೇಶದಲ್ಲಿ ಗುಂಡಿ ನಿರ್ಮಿಸುವ ಜತೆಗೆ ಸಮಯದ ಮಿತಿಯೊಳಗೆ ವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಬೇಸರ ಮೂಡಿಸಿದೆ ಎನ್ನುತ್ತಾರೆ ನಗರಸಭೆ ಸದಸ್ಯ ರಾಜು ಎಂ. ರೋಖಡೆ.

ಭದ್ರಾ ಜಲಾಶಯದಿಂದ ನಗರಕ್ಕೆ ನೀರು ಹರಿದು ಬರಲು ಮೂರ್ನಾಲ್ಕು ದಿನ ಬೇಕು. ಜಾಕ್ವೆಲ್ ಬಳಿಯ ನದಿಪಾತ್ರದ ಆಳವನ್ನು ಹೆಚ್ಚಿಸಿ, ಆ ಮಣ್ಣನ್ನು ತಾತ್ಕಾಲಿಕ ಮರಳಿನ ತಡೆಗೋಡೆ ಬಳಿ ಹಾಕುವ ಮೂಲಕ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
– ಆರ್. ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT