ADVERTISEMENT

ಜೀವ ಉಳಿಸುವ ಕೊಡಗನೂರು ಕೆರೆ

ಬಿರು ಬಿಸಿನಲ್ಲೂ ಕೆರೆಯ ಹೊಂಡದಲ್ಲಿ ನಿಂತ ನೀರು, ವಲಸೆ ಕುರಿಗಳಿಗೆ ಇದುವೇ ‘ಜೀವಜಲ’

ವಿನಾಯಕ ಭಟ್ಟ‌
Published 24 ಮಾರ್ಚ್ 2017, 5:39 IST
Last Updated 24 ಮಾರ್ಚ್ 2017, 5:39 IST
ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯ ಹೊಂಡದಲ್ಲಿರುವ ನೀರನ್ನು ಕುಡಿದು ದಣಿವಾರಿಸಿಕೊಳ್ಳುತ್ತಿರುವ ಜಾನುವಾರು.
ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯ ಹೊಂಡದಲ್ಲಿರುವ ನೀರನ್ನು ಕುಡಿದು ದಣಿವಾರಿಸಿಕೊಳ್ಳುತ್ತಿರುವ ಜಾನುವಾರು.   

ಕೊಡಗನೂರು (ದಾವಣಗೆರೆ): ಕೊಡಗನೂರು ಕೆರೆಯಲ್ಲಿ ನೀರು ಕಾಣುತ್ತಿದ್ದಂತೆ ಮೇವವನ್ನು ಅರಸಿ ಬಹುದೂರದಿಂದ ದಣಿದು ಬಂದಿದ್ದ ಕುರಿಗಳಲ್ಲಿ ಸಂಭ್ರಮ ಮೂಡಿತು. ನೆತ್ತಿ ಸುಡುವ ಬಿಸಿಲಿನ ತಾಪದಿಂದ ಬಳಲಿದ್ದ ನೂರಾರು ಕುರಿಗಳಿಗೆ ಮರುಭೂಮಿಯಲ್ಲಿ ‘ಓಯಸಿಸ್‌’ ಸಿಕ್ಕಂತಾಯಿತು! ಒಂದು ಕ್ಷಣವೂ ತಡ ಮಾಡದೇ ಕುರಿಗಳ ಹಿಂಡು ದೂಳೆಬ್ಬಿಸುತ್ತ ಕೆರೆಯ ಒಡಲಿಗೆ ಇಳಿಯಿತು. ಮನಸೋಇಚ್ಛೆ ನೀರು ಕುಡಿದು ಜೀವ ಉಳಿಸಿಕೊಂಡಿತು...

ಸತತ ಬರದಿಂದಾಗಿ ಕೆರೆಗಳ ಒಡಲು ಬರಿದಾಗುತ್ತಿವೆ. ಕುಡಿಯುವ ನೀರಿಗಾಗಿ ಜಾನುವಾರುಗಳು  ಪರದಾಡುತ್ತಿವೆ. ಇದರ ನಡುವೆಯೇ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯ ಹೊಂಡಗಳಲ್ಲಿ ಇನ್ನೂ ಅಲ್ಪ–ಸ್ವಲ್ಪ ನೀರು ನಿಂತಿದೆ. ವಲಸೆ ಬಂದ ಜಾನುವಾರು  ಪಾಲಿಗೆ ಈಗ ಇದುವೇ ‘ಜೀವಜಲ’.

22 ಕೆರೆ ತುಂಬಿಸುವ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಕೊಡಗನೂರು ಕೆರೆಯೂ ಸೇರಿದೆ. ಮಳೆಗಾಲದಲ್ಲಿ ತುಂಗಭದ್ರಾ ನದಿಯಿಂದ ಕೆಲ ದಿನ ಈ ಕೆರೆಗೆ ನೀರು ಹರಿಸಲಾಗಿತ್ತು. ಹೀಗಾಗಿಯೇ ಬಿರು ಬಿಸಿಲಿನಲ್ಲೂ ಹೊಂಡದಲ್ಲಿ ಇನ್ನೂ ಅಲ್ಪ–ಸ್ವಲ್ಪ ನೀರು ನಿಂತುಕೊಂಡಿದೆ. ಈ ನೀರೇ ಈಗ ಜಾನುವಾರಿನ ಜೀವ ಉಳಿಸುತ್ತಿದೆ.

ಕುರಿಗಾಹಿಗಳ ಸಂಕಟ: ‘ಈ ಬಾರಿ ಮಳೆಯಾಗದೇ ಇರುವುದರಿಂದ ಕುರಿಗೆ ಮೇವು ಸಿಗದೇ ಚಳ್ಳಕೆರೆ ತಾಲ್ಲೂಕಿನ ಹನುಮಂತನಹಳ್ಳಿ ಗ್ರಾಮದಿಂದ ನಾವು ಕುರಿಯೊಂದಿಗೆ ವಲಸೆ ಬಂದಿದ್ದೇವೆ. 15 ಜನ ತಲಾ 100 ಕುರಿಗಳೊಂದಿಗೆ ಆರು ತಿಂಗಳಿಂದ ಊರೂರು ಸುತ್ತುತ್ತಿದ್ದೇವೆ. ಜಾನುವಾರಿಗೆ ಮೇವು, ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ’ ಎಂದು ಕುರಿಗಾಹಿ ಮಹೇಶ್‌ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಈ ಮೊದಲು ದಾವಣಗೆರೆಯ ಅಣಬೇರು ಗ್ರಾಮಕ್ಕೆ ಬಂದು ನೆಲೆಸಿದ್ದೆವು. ಅಲ್ಲಿನ ಕೆರೆಯೂ ಬತ್ತಿರುವುದರಿಂದ ಕುರಿಗಳಿಗೆ ನೀರು ಕುಡಿಯಲು ಸಿಗಲಿಲ್ಲ. ಹೀಗಾಗಿ ಕೊಡಗನೂರು ಕೆರೆಯತ್ತ ಬಂದಿದ್ದೇವೆ. ಕೆಲ ದಿನಗಳ ಕಾಲ ಈ ಗ್ರಾಮದ ಬಳಿ ತಂಗುತ್ತೇವೆ. ಮಳೆಗಾಲ ಆರಂಭಗೊಳ್ಳುವ ವೇಳೆಗೆ ಪುನಃ ಊರು ಸೇರಿಕೊಳ್ಳುತ್ತೇವೆ’ ಎಂದು ಕುರಿಗಾಹಿ ಲೇಪಾಕ್ಷಿ ಹೇಳಿದರು.

ನೀರಿಗಾಗಿ ಕುರಿ ಕೊಡಬೇಕು: ‘ಮಳೆಯಾಗದೇ ಇರುವುದರಿಂದ ರೈತರೂ ತಮ್ಮ ಹೊಲಗಳಲ್ಲಿ ಕುರಿಯನ್ನು ಉಳಿಸಿಕೊಳ್ಳುತ್ತಿಲ್ಲ. ಕುಡಿಯಲು ಸರಿಯಾಗಿ ನೀರು ಸಿಗದಿರುವುದರಿಂದ 10 ಕುರಿಗಳು ಸತ್ತು ಹೋಗಿವೆ. ಕೆಲವು ಕಡೆ ಕೊಳವೆಬಾವಿ ಮಾಲೀಕರಿಗೆ ಒಂದು ಕುರಿಯನ್ನು ಕೊಟ್ಟು, ಉಳಿದ ಕುರಿಗಳಿಗೆ ನೀರನ್ನು ಕುಡಿಸಿದ್ದೇವೆ. ಸದ್ಯ ಈ ಕೆರೆಯ ನೀರು ನಮ್ಮ ಕುರಿಗಳ ಜೀವವನ್ನು ಉಳಿಸುತ್ತಿದೆ’ ಎಂದು ಹೇಳಿದ ಮಹೇಶ್‌ ಅವರು, ಕೆರೆಯಂಗಳದಲ್ಲಿ ಕುರಿಯನ್ನು ಮೇಯಿಸಲು ಹೊರಟರು.

ಮಳೆ ಬಂದರೆ ಜೀವ ಉಳಿದೀತು: ‘ಕೊಡಗನೂರು ಕೆರೆಯ ಹೊಂಡಲ್ಲಿ ನಿಂತಿರುವ ನೀರು 20 ದಿನಗಳ ಒಳಗೆ ಬತ್ತುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಯುಗಾದಿ ವೇಳೆ ಮಳೆಯಾಗುತ್ತದೆ. ಈ ಬಾರಿ ಒಂದೆರಡು ದೊಡ್ಡ ಮಳೆ ಬಂದರೆ ಮಾತ್ರ ಬೇಸಿಗೆಯಲ್ಲಿ ಜಾನುವಾರಿಗೆ ಕುಡಿಯಲು ನೀರು ಸಿಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಬಹಳ ಕಷ್ಟ’ ಎನ್ನುತ್ತಾರೆ ಗಂಗನಕಟ್ಟೆ ಗ್ರಾಮದ ರೈತ ನಾಗರಾಜಪ್ಪ.

‘ನಮ್ಮ ಹೊಲದಲ್ಲಿರುವ 6 ಕೊಳವೆಬಾವಿಗಳ ಪೈಕಿ ಕೇವಲ ಒಂದರಲ್ಲಿ ಅಲ್ಪ ಪ್ರಮಾಣದ ನೀರು ಬರುತ್ತಿದೆ. ಹೀಗಾಗಿ ದನಕರುಗಳನ್ನು ಮೇಯಿಸಲು ಹಾಗೂ ನೀರು ಕುಡಿಸಲು ಈ ಕೆರೆಗೆ ಬರುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಕೊಡಗನೂರು ಕೆರೆಯು 220 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 175 ಹೆಕ್ಟೇರ್‌ ಪ್ರದೇಶದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಕೆರೆ ಭರ್ತಿಯಾದರೆ ಸುಮಾರು ಒಂದು ಕೋಟಿ ಚದರ ಅಡಿ ನೀರು ಸಂಗ್ರಹಗೊಳ್ಳುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈ ಬಾರಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಈ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಸಲು ಸಾಧ್ಯವಾಗಿಲ್ಲ. ಕೆರೆಯ ಮುಂಭಾಗದಲ್ಲಿ ಮಾತ್ರ ಸ್ವಲ್ಪ ನೀರು ಇದೆ. ನೀರು ಇಲ್ಲದ ಕೆರೆಯ ಹಿಂಭಾಗದಲ್ಲಿ  ನರೇಗಾ ಯೋಜನೆಯಡಿ ಹೂಳೆತ್ತುವ ಕಾಮಗಾರಿಯನ್ನು ಒಂದು ವಾರದಿಂದ ಕೈಗೊಳ್ಳಲಾಗುತ್ತಿದೆ. 35 ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಕೆರೆಯ ಹೂಳೆತ್ತಬೇಕಾಗಿದ್ದು, ಸಣ್ಣ ನೀರಾವರಿ ಇಲಾಖೆಯೇ ಆ ಕಾಮಗಾರಿಯನ್ನು ಕೈಗೊಳ್ಳಬೇಕು’ ಎಂದು ಕೊಡಗನೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಗದೀಶ ತಿಳಿಸಿದರು.

*
ಕೊಡಗನೂರು ಕೆರೆಯ ಹೂಳೆತ್ತಿ ಮಳೆಗಾಲದಲ್ಲಿ ನೀರು ತುಂಬಿಸಿದರೆ ಬೇಸಿಗೆಯಲ್ಲಿ ಪ್ರಾಣಿ–ಪಕ್ಷಿಗಳಿಗೆ ಅನುಕೂಲವಾಗಲಿದೆ.
– ನಾಗರಾಜಪ್ಪ,
ರೈತ, ಗಂಗನಕಟ್ಟೆ ಗ್ರಾಮ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.