ADVERTISEMENT

ಜೆಸಿಬಿ ರಾಜಕಾರಣ ಕೊನೆಗೊಳಿಸಲು ಮಹಾಮೈತ್ರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:16 IST
Last Updated 23 ಏಪ್ರಿಲ್ 2017, 8:16 IST

ಹೊನ್ನಾಳಿ: ‘ಜನತಾ ದಳ, ಕಾಂಗ್ರೆಸ್ ಮತ್ತು ಬಿಜೆಪಿ (ಜೆ.ಸಿ.ಬಿ.) ದುಷ್ಟ ರಾಜಕಾರಣವನ್ನು ಕೊನೆಗೊಳಿಸಲು ರಾಜ್ಯದಲ್ಲಿ ಜನಾಂದೋಲನಗಳ ಮಹಾಮೈತ್ರಿ ವೇದಿಕೆ ರಚಿಸಲಾಗಿದೆ’ ಎಂದು ಜನ ಪರ್ಯಾಯ ಕಟ್ಟೋಣ ಜಾಥಾ ಸಂಘಟನೆಯ ನಾಯಕ ಚಂದ್ರಶೇಖರ ಮೇಟಿ ಹೇಳಿದರು.ಶನಿವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜನ ಪರ್ಯಾಯ ಕಟ್ಟೋಣ ಜಾಥಾದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಜನಪರ ಚಳವಳಿಗಳನ್ನು ಮುನ್ನಡೆ ಸುತ್ತಿರುವ ಸಂಘಟನೆಗಳ ಜತೆಗೆ ನಾಡು ಕಟ್ಟುವ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಏಕತೆಯ ಜನಾಂದೋಲನಗಳ ಮಹಾಮೈತ್ರಿ ಇದು’ ಎಂದು ಅವರು ಹೇಳಿದರು.‘ಒಂದೇ ಬಗೆಯ ಜನವಿರೋಧಿ ರಾಜಕಾರಣ ಮಾಡುತ್ತ ಬಂದಿರುವ ಜೆಸಿಬಿ ಪಕ್ಷಗಳನ್ನು ತಿರಸ್ಕರಿಸಬೇಕು ಎನ್ನುವ ಆಶಯಗಳನ್ನು ನಮ್ಮ ಮಹಾ ಮೈತ್ರಿ ಇಟ್ಟುಕೊಂಡಿದೆ. ಕೋಮುವಾದಿ ಹಾಗೂ ಜಾತಿವಾದಿ ರಾಜಕಾರಣ ಮಾಡುತ್ತ ಬಂದಿರುವ ಪಕ್ಷಗಳನ್ನು ಬದಲಾವಣೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಆಶಯಗಳು ಈಡೇರಿಲ್ಲ’ ಎಂದರು.

‘ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಿದ್ದರೆ, ನಾಗರಿಕ ಸಮಾಜ ಅವರತ್ತ ತಿರುಗಿ ನೋಡುತ್ತಿಲ್ಲ. ದೇಶದಲ್ಲಿ ಜಾತಿ, ಉಪಜಾತಿ ಅವುಗಳಿಗೊಂದು ಮಠ ಕಟ್ಟುವ ಸಂಸ್ಕೃತಿಯಿಂದಾಗಿ ದೇಶ ಉದ್ಧಾರವಾಗುತ್ತಿಲ್ಲ. ಇದನ್ನೆಲ್ಲಾ ಹೋರಾಟಗಾರರಾದ ಎಸ್.ಆರ್. ಹಿರೇಮಠ, ರಾಘವೇಂದ್ರ ಕುಷ್ಟಗಿ, ದೇವನೂರ ಮಹಾದೇವ, ಕೆ.ಎಸ್. ಪುಟ್ಟಣ್ಣಯ್ಯ, ಚುಕ್ಕಿ ನಂಜುಂಡಸ್ವಾಮಿ ಅವರಂತಹ ಅನೇಕ ಹೋರಾಟಗಾರರು ಸೇರಿ ಏ. 17 ರಂದು ಈ ಜಾಥಾಕ್ಕೆ ಚಾಲನೆ ನೀಡಿದ್ದಾರೆ’ ಎಂದರು.

ADVERTISEMENT

ರವಿಕೃಷ್ಣಾರೆಡ್ಡಿ ಮಾತನಾಡಿ, ‘ಮಂಡ್ಯದಿಂದ ಹೊರಟ ಈ ಜಾಥಾ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಗದಗ, ಬಳ್ಳಾರಿ ಜಿಲ್ಲೆಗಳ ಮೂಲಕ ಹಾದು ಏ. 27 ರಂದು ರಾಯಚೂರಿನಲ್ಲಿ ಸಮಾರೋಪಗೊಳ್ಳಲಿದೆ’ ಎಂದು ಹೇಳಿದರು.‘ಪ್ರಜಾಪ್ರಭುತ್ವವನ್ನು ನೆಲೆಗೊಳಿ ಸುವ, ಜನಪರ ಚಳವಳಿಗಳ ರಾಜಕಾರ ಣಕ್ಕೆ ಒಂದು ರೂಪ ಕೊಡುವ ಉದ್ದೇಶ ದಿಂದ ನಡೆಯುತ್ತಿರುವ ಆಂದೋಲನಕ್ಕೆ ನಾಡಿನ ಪ್ರಜ್ಞಾವಂತರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಜಾಥಾ ಕಾರ್ಯಕ್ರಮದಲ್ಲಿ ರಾಜ್ಯ ರೈತಸಂಘದ ತಾಲ್ಲೂಕು ಘಟಕದಅಧ್ಯಕ್ಷ ಜಗದೀಶ್ ಕಡದಕಟ್ಟೆ, ಗೌರವಾಧ್ಯಕ್ಷ ಬಸವರಾಜಪ್ಪಹಿರೇಮಠ, ಕಾರ್ಯದರ್ಶಿ ನರಸಿಂಹಪ್ಪ ಹಾಗೂ ಜಾಥಾದ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.