ADVERTISEMENT

ತಿಕೋಟಾದ ದ್ರಾಕ್ಷಿ ಬೆಳೆಗಾರನ ಶ್ರಮದ ಬದುಕು

ವಿನಾಯಕ ಭಟ್ಟ‌
Published 23 ಮೇ 2017, 6:17 IST
Last Updated 23 ಮೇ 2017, 6:17 IST

ದಾವಣಗೆರೆ: ಇದು ದ್ರಾಕ್ಷಿ ಬೆಳೆದು ಬದುಕು ಕಟ್ಟಿಕೊಂಡ ಶ್ರಮಜೀವಿ ರೈತನ ಕಥೆ. ದಲ್ಲಾಳಿಗಳ ‘ಕಪಿಮುಷ್ಠಿ’ಯಿಂದ ಹೊರ ಬಂದು, ತನ್ನದೇ ಆದ ಮಾರುಕಟ್ಟೆ ಕಂಡುಕೊಂಡು ಕುಟುಂಬ ಸಲಹುತ್ತಿರುವ ಇವರ ಯಶೋಗಾಥೆ ಇತರ ‘ಅನ್ನದಾತ’ರಿಗೂ ಮಾದರಿ.

ದೂರದ ವಿಜಯಪುರ ತಾಲ್ಲೂಕಿನ ತಿಕೋಟಾದ ರೈತ ಬಾಬು ಚವ್ಹಾಣ ನಗರದ ಹಲವು ಸರ್ಕಾರಿ ಕಚೇರಿ, ಕಾಲೇಜುಗಳ ಸಿಬ್ಬಂದಿಗೆ ಚಿರಪರಿಚಿತರು. ಇವರು ತಂದು ಕೊಡುವ ಸಿಹಿಯಾದ ದ್ರಾಕ್ಷಿಯ ರುಚಿಯನ್ನು ಸವಿದವರು, ‘ಬಾಬು ಚವ್ಹಾಣ ಮತ್ತೆ ಯಾವಾಗ ಬಂದಾನು...’ ಎಂದು ದಾರಿ ಕಾಯುತ್ತಿರುತ್ತಾರೆ.

ಚವ್ಹಾಣ ಅವರು ಮೂರ್ನಾಲ್ಕು ತಿಂಗಳಿಗೆ ಒಮ್ಮೆ ತಾವು ಬೆಳೆದ ಒಣ ದ್ರಾಕ್ಷಿಯನ್ನು ವಾಹನದಲ್ಲಿ ಹಾಕಿಕೊಂಡು ದಾವಣಗೆರೆಗೆ ಬರುತ್ತಾರೆ. ಇಲ್ಲಿನ ಲಾಡ್ಜ್‌ ಒಂದರಲ್ಲಿ ಉಳಿದುಕೊಳ್ಳುತ್ತಾರೆ. 20 ಕೆ.ಜಿ. ಬಾಕ್ಸ್‌ಗಳನ್ನು ಪರಿಚಿತ ಸಗಟು ವ್ಯಾಪಾರಿಗಳಿಗೆ ನೀಡುತ್ತಾರೆ. ಉಳಿದ ದ್ರಾಕ್ಷಿಗಳನ್ನು ಅರ್ಧ ಕೆ.ಜಿ. ಪ್ಯಾಕೇಟ್‌ಗಳನ್ನಾಗಿ ಮಾಡಿಕೊಂಡು ನಗರದಲ್ಲಿ ಸುತ್ತಾಡಿ ಮಾಡುತ್ತಾರೆ.

ADVERTISEMENT

ಸೈಕಲ್‌ ಸವಾರಿ: ‘25 ದಿನ ಬಾಡಿಗೆಗೆ ಸೈಕಲ್‌ ಪಡೆದುಕೊಂಡು ಜಿಲ್ಲಾಧಿಕಾರಿ ಕಚೇರಿ, ಎಸ್ಪಿ, ಆರ್‌ಟಿಒ, ಕೋರ್ಟ್‌, ಜಿಲ್ಲಾ ಆಸ್ಪತ್ರೆ, ಕಾಲೇಜುಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ದ್ರಾಕ್ಷಿ ನೀಡುತ್ತೇನೆ. ಅರ್ಧ ಕೆ.ಜಿ ಪ್ಯಾಕೇಟ್‌ ಅನ್ನು ₹ 100ರಿಂದ ₹ 120ರವರೆಗೆ ಮಾರಾಟ ಮಾಡುತ್ತೇನೆ’ ಎಂದು ಚವ್ಹಾಣ ತಾವು ಬೆಳೆದ ದ್ರಾಕ್ಷಿಯ ಮಾರಾಟದ ಗುಟ್ಟಿನ ಕಥೆಯನ್ನು ಆರಂಭಿಸಿದರು.

ಪಾಠ ಕಲಿಸಿದ ಕಹಿ ಅನುಭವ: ‘ಹತ್ತು ವರ್ಷಗಳ ಹಿಂದೆ ತಂಗಿಯ ಹೊಲದಲ್ಲಿ ದ್ರಾಕ್ಷಿ ಬೆಳೆಯಲಾಗಿತ್ತು. ಹೊಲಕ್ಕೆ ಬಂದು ಹಸಿ ದ್ರಾಕ್ಷಿಯನ್ನು ತೆಗೆದುಕೊಂಡು ಹೋದ ಚಿಕ್ಕಮಗಳೂರಿನ ವ್ಯಾಪಾರಿಗಳು ಬಾಕಿ ಹಣ ಕೊಡಲಿಲ್ಲ. ಸ್ಥಳೀಯ ದಲ್ಲಾಳಿಗಳಿಗೆ ಮೂರ್ನಾಲ್ಕು ಲಕ್ಷ ನೀಡಿದರೆ ನಮ್ಮ   ಕೈಗೆ ₹ 20 ಸಾವಿರದಿಂದ ₹ 30 ಸಾವಿರ ಮಾತ್ರ ಕೊಡುತ್ತಾರೆ. ಬಾಕಿ ಹಣ ಕೊಡಲು ನಾಲ್ಕೈದು ತಿಂಗಳು ಸತಾಯಿಸಿದ್ದರು. ಹೀಗಾಗಿ ದಲ್ಲಾಳಿಗಳ ಸಹವಾಸವೇ ಬೇಡ ಎಂದು ನೇರ ವಾಗಿ ದ್ರಾಕ್ಷಿಯನ್ನು ನಗರಗಳಿಗೆ ಒಯ್ದು ಮಾರಲು ನಿರ್ಧರಿಸಿದೆ’ ಎಂದು ವಿವರಿಸಿದರು.

‘ನನ್ನ 16 ಎಕರೆ ಹೊಲದಲ್ಲಿ ಬಿಳಿಜೋಳ, ಗೋಧಿ, ತೊಗರಿ ಬೆಳೆಯುತ್ತಿದ್ದೆ.  ಇದರಿಂದ ಬರುವ ಉತ್ಪನ್ನ ಜೀವನ ನಿರ್ವಹಣೆಗೆ ಮಾತ್ರ ಸಾಕಾಗುತ್ತಿತ್ತು. ಹೀಗಾಗಿ ಎಂಟು ವರ್ಷಗಳ ಹಿಂದೆ ಮೂರು ಎಕರೆಯಲ್ಲಿ ನಾನೂ ದ್ರಾಕ್ಷಿ ಬೆಳೆಯಲು ಆರಂಭಿಸಿದೆ. ‘ಸೋನಾಕಾ’ ತಳಿಯನ್ನು ಹಾಕಿದ್ದೇನೆ. ಇದು ತುಂಬಾ ಸಿಹಿಯಾಗಿರುತ್ತದೆ. ಇದನ್ನು ಒಣಗಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದರಿಂದ ವರ್ಷಕ್ಕೆ ಸರಾಸರಿ ₹ 3 ಲಕ್ಷದವರೆಗೆ ಲಾಭವಾಗುತ್ತಿದೆ.

ಳೀಯ ದಲ್ಲಾಳಿಗಳಿಗೆ ನೀಡದೇ ನಗರಗಳಿಗೆ ಹೋಗಿ ಮಾರಾಟ ಮಾಡುವುದರಿಂದ ತಕ್ಷಣ ಕೈಗೆ ಹಣ ಸಿಗುತ್ತಿದೆ. ನಮ್ಮ ಊರಿನ ಹಲವು ಸಣ್ಣ ರೈತರು ದೊಡ್ಡ ನಗರಗಳಿಗೆ ತಾವೇ ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹೆಚ್ಚು ಪರಿಶ್ರಮ ಪಡಬೇಕಾಗುತ್ತಿದ್ದರೂ ಸಿಗುವ ಲಾಭದ ಪ್ರಮಾಣವೂ ಹೆಚ್ಚು’ ಎಂದು ಚವಾಣ ಮುಗುಳ್ನಕ್ಕರು.

‘ಮಹಾನವಮಿ ಸಮಯದಲ್ಲಿ ದ್ರಾಕ್ಷಿಯನ್ನು ಕೊಯ್ದು 21 ದಿನ ಕಾಲ ನೆರಳಿನಲ್ಲಿ ಒಣಗಿಸುತ್ತೇವೆ. ಬಳಿಕ ಅದನ್ನು ಸಮೀಪದ ಕೋಲ್ಡ್‌ ಸ್ಟೋರೇಜ್‌ಗೆ ತೆಗೆದುಕೊಂಡು ಹೋಗಿ ದಾಸ್ತಾನು ಮಾಡುತ್ತೇವೆ. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ದಾವಣಗೆರೆಗೆ ಒಂದು ಟನ್‌ ದ್ರಾಕ್ಷಿಯನ್ನು ತರುತ್ತೇನೆ. ಎಂಟು– ಹತ್ತು ದಿನಗಳಲ್ಲಿ ಖಾಲಿಯಾಗುತ್ತದೆ’ ಎಂದರು.

‘ಹಿರಿಯ ಮಗ ಪೋಪಟ್‌ ರಾಮ್‌ ಧಾರವಾಡದಲ್ಲಿ ಬಿ.ಎಸ್ಸಿ ಎಗ್ರಿ ಓದುತ್ತಿದ್ದಾನೆ. ಎರಡನೇ ಮಗ ಅನಿಲ್‌ ಹುಬ್ಬಳ್ಳಿಯಲ್ಲಿ ಡಿಪ್ಲೊಮಾ ಮಾಡುತ್ತಿದ್ದಾನೆ. ನಾನು ಅಕ್ಷರ ಕಲಿಯದ್ದಿದ್ದರೂ ಮಕ್ಕಳಿಗೆ ಓದಿಸಿ ಒಳ್ಳೆಯ ನೌಕರಿಗೆ ಸೇರಿಸಬೇಕು ಎಂಬ ಕನಸು ಕಾಣುತ್ತಿದ್ದೇನೆ.

ದ್ರಾಕ್ಷಿಯನ್ನು ಇಲ್ಲಿಗೆ ತರುವ ವೇಳೆ ಮಕ್ಕಳೂ ಜೊತೆಗೆ ಬರುತ್ತಾರೆ. ಕ್ರಿಸ್‌ಮಸ್‌ ಸಮಯದಲ್ಲಿ ಮಕ್ಕಳೇ ಗೋವಾಕ್ಕೆ ಒಣ ದ್ರಾಕ್ಷಿಯನ್ನು ಒಯ್ಯುತ್ತಾರೆ’ ಎಂದು ಮಕ್ಕಳ ಸಹಕಾರವನ್ನು ಸ್ಮರಿಸಲು ಮರೆಯದ ಚವ್ಹಾಣ, ದ್ರಾಕ್ಷಿ ಮಾರಾಟ ಮಾಡಲು ಸೈಕಲ್‌ ಏರಿ ಹೊರಟರು.

* *

ನಾನು ಹೆಬ್ಬೆಟ್ಟಿನವ. ಆದರೆ, ಮಕ್ಕಳಿಗೆ ಕಲಿಸಬೇಕು ಎಂಬ ಜಿದ್ದು ಇತ್ತು. ಅದು ಸಾಕಾರಗೊಳ್ಳುತ್ತಿರುವುದಕ್ಕೆ ಸಂತೃಪ್ತಿ ಇದೆ.
ಬಾಬು ಚವ್ಹಾಣ, ದ್ರಾಕ್ಷಿ ಬೆಳೆಗಾರ, ತಿಕೋಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.