ADVERTISEMENT

ತುಮಕೂರು ಚಲೋ ಬೆಂಬಲಿಸಿ ಸಭೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:11 IST
Last Updated 16 ಫೆಬ್ರುವರಿ 2017, 5:11 IST

ದಾವಣಗೆರೆ: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ಈಚೆಗೆ ನಡೆದ ದಲಿತ ಯುವಕನ ಮೇಲಿನ ಹಲ್ಲೆ ಅಮಾನವೀಯ ಕೃತ್ಯ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಗೌರವಾಧ್ಯಕ್ಷ ಅನಿಸ್ ಪಾಷಾ ಖಂಡಿಸಿದರು.

ತುಮಕೂರು ಚಲೊ ಮಾನವತಾ ಸಮಾವೇಶಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಈಚೆಗೆ ಮುಸ್ಲಿಮರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಧರ್ಮ, ಜಾತಿಗಳ ಮಧ್ಯೆ ದ್ವೇಷ, ಅಸೂಯೆ ಬಿತ್ತುವ ಕಾರ್ಯ ನಡೆಯುತ್ತಿದ್ದು, ರಾಜಕಾರಣಿಗಳು ಇದರ ಲಾಭ ಪಡೆಯುತ್ತಿದ್ದಾರೆ.
ಮೂಲಭೂತ ವಾದಿಗಳು ಪ್ರಬಲರಾಗುತ್ತಿದ್ದು, ಪ್ರಗತಿಪರರು, ಹೋರಾಟಗಾರರು ಒಗ್ಗೂಡಬೇಕಾದ ಅನಿವಾರ್ಯತೆ ಇದೆ’ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ‘ರಾಜ್ಯದ ಹಲವೆಡೆ ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದು, ದಲಿತ ಹಾಗೂ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು.   ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಸದಸ್ಯರು ಭಾಗವಹಿಸುವ ಮೂಲಕ ತುಮಕೂರು ಚಲೊ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಐರಣಿ ಚಂದ್ರು ಕ್ರಾಂತಿಗೀತೆ ಹಾಡಿದರು. ಆವರಗೆರೆ ವಾಸು, ಹನೀಫ್‌ ಸಾಬ್‌ ಮಾತನಾಡಿದರು.

ಕೋಮು ಸೌಹಾರ್ದ ವೇದಿಕೆಯ ಅಬ್ದುಲ್ ಸಮದ್, ಅಬ್ದುಲ್ ಸತ್ತಾರ್, ಗೌಸ್‌ಖಾನ್, ಅಬ್ದುಲ್ ಮಜೀದ್, ಇಬ್ರಾಹಿಂ, ಕರಿಬಸಪ್ಪ, ಅಸಾದುಲ್ಲಾ, ಕರ್ನಾಟಕ ಜನಶಕ್ತಿಯ ಉಷಾ, ಸತೀಶ್ ಅರವಿಂದ್, ಮಾನವ ಬಂಧುತ್ವ ವೇದಿಕೆಯ ರಘು ದೊಡ್ಮನಿ, ದಲಿತ ಸಂಘರ್ಷ ಸಮಿತಿಯ ಮೈಲಪ್ಪ, ಗುಮ್ಮನೂರು ರಾಮಚಂದ್ರಪ್ಪ, ಹಳಗವಾಡಿ ಬಾಬು, ಹಳಗವಾಡಿ ನಿಂಗರಾಜ್, ಬಸವರಾಜ್, ಟಿಪ್ಪು ಸುಲ್ತಾನ್ ಟ್ರಸ್ಟ್‌ನ ಆದಿಲ್‌ಖಾನ್, ನೆರಳು ಬೀಡಿ ಕಾರ್ಮಿಕರ ಯುನಿಯನ್‌ನ ಜಬೀನಾಖಾನಂ, ಶಿರಿನ್ ಬಾನು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.