ADVERTISEMENT

ತೆಂಗಿನಕಾಯಿ ಬೆಲೆ ₹ 20 ನಿಗದಿಯಾಗಲಿ

ವೈಜ್ಞಾನಿಕ ಬೆಲೆಗಾಗಿ ಪಕ್ಷಾತೀತ ಹೋರಾಟ ಅಗತ್ಯ: ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:16 IST
Last Updated 18 ಜನವರಿ 2017, 5:16 IST
ತೆಂಗಿನಕಾಯಿ ಬೆಲೆ ₹ 20 ನಿಗದಿಯಾಗಲಿ
ತೆಂಗಿನಕಾಯಿ ಬೆಲೆ ₹ 20 ನಿಗದಿಯಾಗಲಿ   

ಮಾಯಕೊಂಡ: ‘ರೈತರ ಬೆಳೆಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಒದಗಿಸಲು ಸಂಸದರು ಮತ್ತು ಶಾಸಕರು ಪಕ್ಷಭೇದ ಮರೆತು ಹೋರಾಡಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಸಮೀಪದ ಅಣಬೇರಿನಲ್ಲಿ ‘ಕಲ್ಪತರು ರೈತ ತೆಂಗು ಬೆಳೆಗಾರರ ಸಂಘ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂತರ್ಜಲ ಪ್ರಮಾಣ ಸಂಪೂರ್ಣ ಕುಸಿದು, ತೋಟಗಳು ಒಣಗುತ್ತಿವೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ತತ್ವಾರವಾಗಿದೆ. ತೆಂಗು ಬೆಳೆದವರನ್ನು ಈ ಮೊದಲು ಶ್ರೀಮಂತರು ಎನ್ನುತ್ತಿದ್ದರು. ಈಗ ಒಂದು ತೆಂಗಿನಕಾಯಿಗೆ ₹ 5 ಬೆಲೆಯೂ ಸಿಗುತ್ತಿಲ್ಲ. ಒಂದು ತೆಂಗಿನಕಾಯಿಗೆ ₹ 20 ಬೆಂಬಲ ಬೆಲೆ ನಿಗದಿಪಡಿಸಲು ಹೋರಾಟ ನಡೆಸಲಾಗಿದೆ. ಅಡಿಕೆಗೆ ಬೆಂಬಲ ಬೆಲೆ ಘೋಷಿಸಲು ಕೃಷಿ ಸಚಿವರಿಗೆ ಮನವಿ ಮಾಡಲಾಗಿದ್ದು, ಇನ್ನೂ ಅನುಷ್ಠಾನಗೊಂಡಿಲ್ಲ’ ಎಂದು ಅವರು ಹೇಳಿದರು.

‘ಸಿರಿಗೆರೆ ಶ್ರೀಗಳು ರೈತರ ಪಹಣಿಗಳಿಗೆ ಆಧಾರ್ ಸಂಯೋಜನೆ ಮಾಡಿ, ಬೆಳೆಹಾನಿಗೆ ಪರಿಹಾರ ಮತ್ತಿತರ ಸೌಲಭ್ಯ ಒದಗಿಸಲು ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ’ ಎಂದು ಪ್ರಶಂಸಿಸಿದರು.

ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್, ‘ಯಾವುದೇ ಸಂಘ ಬೆಳೆಯಲು ಸದಸ್ಯರು ನಿಸ್ವಾರ್ಥವಾಗಿ ಕೆಲಸ ಮಾಡಬೇಕು. ಮಳೆ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದ್ದರೂ, ಭೀಮಸಮುದ್ರದಲ್ಲಿ ಬೆಳೆಯುತ್ತಾರೆ ಎಂದು ಪ್ರೇರಣೆಗೊಂಡು, ಇಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆದು ರೈತರು ಹಾಳಾಗಿದ್ದಾರೆ. ಇಂದು ನೀರಿಗೆ ಹಾಹಾಕಾರ ಎದ್ದಿದೆ. ಹಲಸು, ಮಾವು, ಸಪೋಟ ಬೆಳೆದರೆ ಕಡಿಮೆ ಮಳೆಯಲ್ಲೂ ಹಣಗಳಿಸಬಹುದು’ ಎಂದು ಹೇಳಿದರು.

ಶಾಸಕ ಕೆ. ಶಿವಮೂರ್ತಿ ಮಾತನಾಡಿ, ‘ತೆಂಗು ಬಹುಪಯೋಗಿ ಬೆಳೆ. ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ತೆಂಗಿನ ಉಪ ಉತ್ಪನ್ನ ಬಳಕೆಗೆ ಕೈಗಾರಿಕೆ ಸ್ಥಾಪಿಸಬೇಕು. ತೆಂಗು ಕಡಿದು ನೀಲಗಿರಿ ಬೆಳೆದ ಕಾರಣ ಪ್ರಾಕೃತಿಕ ಅಸಮತೋಲನವುಂಟಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಮಾಯಕೊಂಡದಲ್ಲಿ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳಿಗೂ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಂಸದರನ್ನು ಕೋರಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ‘ಕೇಂದ್ರ, ರಾಜ್ಯ ಮತ್ತು ಎಪಿಎಂಸಿಗಳ ಮೇಲೆ ಅವಲಂಬಿತ ರಾಗದೇ ತಮ್ಮ ಬೆಳೆಗೆ ಬೆಲೆ ದೊರಕಿಸಿ ಕೊಳ್ಳಲು ತಮ್ಮ ಪಾತ್ರದ ಕುರಿತು ರೈತರೇ ಚಿಂತಿಸಬೇಕು. ರೈತರ ಬೆಳೆಗೆ ಬೆಲೆಯಿಲ್ಲದಿದ್ದರೆ ರೈತನಿಗೂ ಸಮಾಜ ದಲ್ಲಿ ಗೌರವ ಇರುವುದಿಲ್ಲ’ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ‘ರೈತರಿಗೆ ಇಂದಿಗೂ ಬರ ಪರಿಹಾರ ಸಿಕ್ಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶೈಲಜಾ ಬಸವರಾಜ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಮಂಜುಳಾ ಶಿವಮೂರ್ತಿ, ಲೀಡ್ ಬ್ಯಾಂಕ್ ಪ್ರಬಂಧಕ ಎರ್ರಿಸ್ವಾಮಿ ಮಾತನಾಡಿದರು. ವಿಜ್ಞಾನಿಗಳಾದ ಬಸವನಗೌಡ, ದೇವರಾಜ್, ಚಿರಂತನ್, ಕೃಷಿ ಅಧಿಕಾರಿ ಉಮೇಶ್ ತಾಂತ್ರಿಕ ಮಾಹಿತಿ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಗಮ್ಮ, ಸದಸ್ಯ ಶಿವಮೂರ್ತಿ, ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಉಪಾಧ್ಯಕ್ಷ ಅನಿಲ್ ಕುಮಾರ್ ಮತ್ತು ಮುಖಂಡರಾದ ಕೆ.ಎಸ್. ಶಿವಮೂರ್ತಿ, ಸಮೀವುಲ್ಲಾ, ಜಾಫರ್ ಷರೀಫ್, ಶಿವಮೂರ್ತಿ, ಶಿವಣ್ಣ, ರಾಜಣ್ಣ, ಅಧಿಕಾರಿಗಳಾದ ಅರುಣ್ ಕುಮಾರ್, ರವಿಕುಮಾರ್ ವಿದ್ಯಾರ್ಥಿ ಗಳು ರೈತಗೀತೆ ಹಾಡಿದರು. ಹುಚ್ಚವ್ವ ನಹಳ್ಳಿ ಮೂರ್ತಿ ನಿರೂಪಿಸಿದರು.

ಶಾಸಕರು ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಗ್ರಾಮದ ಕುಮಾರಸ್ವಾಮಿ, ‘ಬೆಂಬಲ ಬೆಲೆ ಒಂದು ನಾಟಕ. ಯಾರು ಉತ್ಪನ್ನವನ್ನು ಮಾರಾಟ ಮಾಡಿ, ಅಧಿಕೃತ ಬಿಲ್‌ ಸಲ್ಲಿಸುತ್ತಾರೋ ಅವರ ಬ್ಯಾಂಕ್ ಖಾತೆಗೆ ಬೆಂಬಲ ಬೆಲೆಯ ಹಣ ಹಾಕಿದರೆ ಮಾತ್ರ ನ್ಯಾಯ ಸಿಗುತ್ತದೆ. ಮೊದಲು ಆ ಕೆಲಸ ಮಾಡಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.