ADVERTISEMENT

ತೋಟಕ್ಕೆ ಟ್ಯಾಂಕರ್‌ ನೀರು ಬಳಕೆ

ಬಾಡುತ್ತಿರುವ ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:14 IST
Last Updated 18 ಜನವರಿ 2017, 5:14 IST
ತೋಟಕ್ಕೆ ಟ್ಯಾಂಕರ್‌ ನೀರು ಬಳಕೆ
ತೋಟಕ್ಕೆ ಟ್ಯಾಂಕರ್‌ ನೀರು ಬಳಕೆ   

ಮಾಯಕೊಂಡ: ಬಿಸಿಲಿನ ತೀವ್ರತೆಗೆ ದಿನದಿಂದ ದಿನಕ್ಕೆ ಹೆಚ್ಚು ಒಣಗುತ್ತಿರುವ ಅಡಿಕೆ ತೋಟಗಳು ರೈತರನ್ನು ಕಂಗಾಲು ಮಾಡಿದೆ. ನಿತ್ಯವೂ ರೈತರ ಬಾಯಲ್ಲಿ ಕೊಳವೆಬಾವಿ ವಿಫಲಗೊಂಡ ಮಾತುಗಳೇ ಹರಿದಾಡುತ್ತಿವೆ. ಏಕಾಏಕಿ ಸ್ತಬ್ಧಗೊಳ್ಳುತ್ತಿರುವ ಕೊಳವೆಬಾವಿಗಳು ರೈತರ ಕಣ್ಣಲ್ಲಿಯೇ ನೀರು ತರಿಸಿವೆ. ಬಿಸಿಲಿಗೆ ತತ್ತರಿಸಿ ಒಣಗಲಾರಂಭಿಸಿದ ಅಡಿಕೆ ತೋಟಗಳನ್ನು ಮಳೆಗಾಲದವರೆಗೆ ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.

ಕೊಳವೆಬಾವಿ ಕೊರೆಯುವ ಲಾರಿಗಳು ಊರಿಗೆ ಬಂದರೆ, ಒಂದು ವಾರವಿಡೀ ಕೊಳವೆಬಾವಿ ಕೊರೆಯಿಸುವಷ್ಟು ಬೇಡಿಕೆ ಬರುತ್ತಿದೆ. ನಾ ಮುಂದು, ತಾ ಮುಂದು  ಎಂದು ರೈತರು ಮುಗಿಬೀಳುತ್ತಿದ್ದಾರೆ. ಹತ್ತು ಕೊಳವೆಬಾವಿ ಕೊರೆಸಿದರೆ ಒಂದೆರಡು ಕೊಳವೆಬಾವಿಗಳಲ್ಲೂ ನೀರು ಸಿಗುವುದಿಲ್ಲ. ಕೆಲವೆಡೆ ನೀರು ಸಿಕ್ಕರೂ, ಎಂಟತ್ತು ದಿನ ಮಾತ್ರ ಬರುತ್ತದೆ. ಆ ಬಳಿಕ ನೀರು ಬರುವುದಿಲ್ಲ. ಬಸವಾಪುರದ ರೈತರೊಬ್ಬರು 1,050 ಅಡಿ ಆಳ ಕೊರೆಸಿದರೂ 2 ಇಂಚು ನೀರು ಸಿಕ್ಕಿಲ್ಲ! ಕೊಳವೆಬಾವಿ ಕೊರೆಸಿ ಕೈಸೋತ ರೈತರು ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಟ್ಯಾಂಕರ್‌ಗಳಿಗೆ ಮೊರೆ: ದಾರಿ ಕಾಣದಂತಾದ ರೈತರು ಇದೀಗ ಟ್ಯಾಂಕರ್ ಮೊರೆಹೋಗಿದ್ದಾರೆ. ಅಡಿಕೆ ತೋಟಗಳಿಗೆ ನೀರು ಹಾಯಿಸಲೆಂದೇ
₹ 1.50 ಲಕ್ಷ ಖರ್ಚು ಮಾಡುತ್ತಿದ್ದಾರೆ. ಹೋಬಳಿಯಲ್ಲಿ ಇದಕ್ಕಾಗಿ ನೂರಕ್ಕೂ ಹೆಚ್ಚು ಟ್ಯಾಂಕರ್‌ ತರಿಸಲಾಗಿದೆ. ಕೆಲವರು ಇದೇ ಸಮಯದಲ್ಲಿ ದುಡಿಯಲೆಂದೇ ಟ್ಯಾಂಕರ್ ಬಾಡಿಗೆಗೆ  ನೀಡುತ್ತಿದ್ದಾರೆ.

ಒಂದು ಬಾರಿ ಟ್ಯಾಂಕರ್‌ ನೀರನ್ನು ತರಿಸಿದರೆ, ₹ 400ರಿಂದ ₹ 500 ನೀಡಬೇಕು. ಲಾರಿಯ ಟ್ಯಾಂಕರ್‌ಗೆ ₹ 1,500 ರಿಂದ ₹ 2,000 ಬಾಡಿಗೆ ನೀಡಲಾಗುತ್ತಿದೆ. ಈ ಹಿಂದೆ ಟ್ಯಾಂಕರ್‌ಗಳಿಗೆ ನೀಡಲಾಗುತ್ತಿದ್ದ ಸಹಾಯಧನವನ್ನೂ ಸರ್ಕಾರ ನಿಲ್ಲಿಸಿರುವುದರಿಂದ ಸಾಲ ಮಾಡಿ ಟ್ಯಾಂಕರ್ ಮಾಡಿಸಿಕೊಳ್ಳುತ್ತಿದ್ದಾರೆ. ಭದ್ರಾ ಕಾಲುವೆಯಿಂದ 1 ಟ್ರ್ಯಾಕ್ಟರ್‌ ಟ್ಯಾಂಕ್‌ನಿಂದ ದಿನಕ್ಕೆ 7–8 ಬಾರಿ ನೀರು ಸಾಗಿಸಿ, ತೋಟಗಳಿಗೆ ಹರಿಸಲಾಗುತ್ತಿದೆ. ಹಗಲು, ರಾತ್ರಿ ಟ್ರ್ಯಾಕ್ಟರ್‌ಗಳ ಸದ್ದು ಹೋಬಳಿಯಾದ್ಯಂತ ಕೇಳಿಬರುತ್ತದೆ.

ಹೊಂಡಗಳಲ್ಲಿ ನೀರು ಸಂಗ್ರಹಣೆ: ಭದ್ರಾ ಕಾಲುವೆಯಲ್ಲಿ 10 ದಿನದ ನಂತರ ನೀರಿನ ಹರಿವು ನಿಲ್ಲಲಿರುವುದನ್ನು ಅರಿತ ರೈತರು ದೊಡ್ಡ ದೊಡ್ಡ ಹೊಂಡ ನಿರ್ಮಿಸಿ, ನೀರು ಸಂಗ್ರಹಿಸುತ್ತಿದ್ದಾರೆ. ಕೃಷಿ ಹೊಂಡಕ್ಕಿಂತ ದೊಡ್ಡ ಹೊಂಡ ತೆಗೆದು ಅದರ ಸುತ್ತ ತಾಡಪಾಲು ಹೊದಿಸಿ, ನೀರನ್ನು ಸಂಗ್ರಹಿಸಿ ಅಡಿಕೆ ಗಿಡಗಳಿಗೆ ಹನಿಸಿ, ಬದುಕಿಸಿಕೊಳ್ಳಲು ಹೆಣಗಾಡುತ್ತಿರುವ ದೃಶ್ಯ ಹೋಬಳಿಯ ಎಲ್ಲೆಡೆ  ಕಂಡುಬರುತ್ತಿದೆ.

‘ಒಂದೂವರೆ ಲಕ್ಷ  ರೂಪಾಯಿ ಸುರಿದು ಟ್ಯಾಂಕರ್‌ ತಂದಿದ್ದೇವೆ. ಡೀಸೆಲ್‌ ಖರ್ಚು ಸೇರಿ  ದಿನ ₹ 2000 ಖರ್ಚು ಬರುತ್ತೆ. ನೀರು ಸಂಗ್ರಹ ಮಾಡಲಿಕ್ಕೆ ₹ 2 ಲಕ್ಷ ಖರ್ಚು ಮಾಡಿ ಹೊಂಡ ನಿರ್ಮಿಸಿದ್ದೇವೆ. ಅಡಿಕೆ ತೋಟ ಬೆಳೆದು ನಿಂತಿದೆ. ಕಳೆದುಕೊಂಡರೆ ಮತ್ತೆ ಬೆಳೆಸಲು 10 ವರ್ಷ ಹಿಡಿಯುತ್ತೆ. ಇರೋದೆ 2 ಎಕರೆ ಅಷ್ಟರಲ್ಲೂ ಅಡಿಕೆ ಮರ ಬೆಳೆಸಿದ್ದೇವೆ. ಆರು ಕೊಳವೆಬಾವಿ ಕೊರೆಸಿದರೂ, ನೀರು ಬರಲಿಲ್ಲ’ ಎಂದು ರೈತರು ನಿಟ್ಟುಸಿರು ಬಿಡುತ್ತಾರೆ.

ಸಹಾಯಧನ ನೀಡಲಿ:  ‘ಎರಡು– ಮೂರು ಎಕರೆ ತೋಟಕ್ಕೆ ಏಳೆಂಟು ಕೊಳವೆಬಾವಿ ಕೊರೆಸಿ ಐದಾರು ಲಕ್ಷ ರೂಪಾಯಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಸರ್ಕಾರ ಅಡಿಕೆ ಬೆಳೆಗಾರರಿಗೆ ಸಹಾಯಧನ ನೀಡಿ ಒಣಗುತ್ತಿರುವ ಅಡಿಕೆ ತೋಟ ಉಳಿಸಿಕೊಳ್ಳಲು ನೆರವಾಗಬೇಕು.

ಕೊಳವೆಬಾವಿ ಕೊರೆಸಲು ರಿಯಾಯ್ತಿ ಬಡ್ಡಿ ದರದಲ್ಲಿ ಸಾಲ ನೀಡಬೇಕು’ ಎಂದು ರೈತ ಮುಖಂಡ ಮಲ್ಲಾಪುರ ದೇವರಾಜ್, ಅಣಬೇರು ಅನಿಲ್ ಕುಮಾರ್‌, ಮಾಯಕೊಂಡದ ಗೌಡ್ರ ನಟರಾಜ್, ಜಿ.ಬಿ. ಮಲ್ಲೇಶ್, ಸಹಕಾರ ಸಂಘದ ಅಧ್ಯಕ್ಷ ಪೊರಕೆ ಮಾಲತೇಶ, ಆನಗೋಡು ರವಿ, ಕರಿಬಸಪ್ಪ ಮುಡೇನಹಳ್ಳಿ ಶಿವುಕುಮಾರ ಅವರು ಒತ್ತಾಯಿಸಿದ್ದಾರೆ.
– ಜಿ. ಜಗದೀಶ, ಮಾಯಕೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT