ADVERTISEMENT

ತೋಟದ ಮಾಲೀಕರೇ ಮಾರಾಟಗಾರರು!

ಪ್ರಕಾಶ ಕುಗ್ವೆ
Published 15 ಮೇ 2017, 4:10 IST
Last Updated 15 ಮೇ 2017, 4:10 IST
ತೋಟದ ಮಾಲೀಕರೇ ಮಾರಾಟಗಾರರು!
ತೋಟದ ಮಾಲೀಕರೇ ಮಾರಾಟಗಾರರು!   
ದಾವಣಗೆರೆ: ಕುಂಠಿತವಾದ ಫಸಲು, ಕುಸಿತ ಕಂಡ ಬೆಲೆ, ಪರಿಸ್ಥಿತಿ ವಿಷಮವಾಗಿದ್ದರೂ ಈ ಮಾವು ಬೆಳೆಗಾರರು ಎದೆಗುಂದಲಿಲ್ಲ. ತಾವೇ ಧೈರ್ಯ ತೆಗೆದುಕೊಂಡರು. ರಸ್ತೆ ಪಕ್ಕ ಅಂಗಡಿ ಹಾಕಿದರು. ಮಾರಾಟಕ್ಕೂ ಕುಳಿತರು.
 
ಬಿಸಿಲ ತಾಪದಿಂದಾಗಿ ಫಸಲು ಉದುರಿ ಹೋಯಿತು. ಖೇಣಿ ಪಡೆದವರು ಕಣ್ಮರೆಯಾದರು. ಅಲ್ಪಸ್ವಲ್ಪ ಮಾವನ್ನು ಪುಣೆಗೆ ತೆಗೆದುಕೊಂಡು ಹೋದರೆ ಅಲ್ಲಿ ಕೇಳುವವರೇ ಇರಲಿಲ್ಲ. ಲಾರಿ ಬಾಡಿಗೆ ಕಟ್ಟಲೂ ಪರದಾಡುವ ಸ್ಥಿತಿ ಬಂತು. ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಭಾಗದ ಕೆರೆಬಿಳಚಿ, ಹೊಸೂರು ಮಾವಿನ ತೋಟದ ಮಾಲೀಕರು ಇದಕ್ಕೊಂದು ಪರಿಹಾರ ಕಂಡುಕೊಂಡರು. ಮಾವು ಇಟ್ಟು ತಾವೇ ವ್ಯಾಪಾರ ಆರಂಭಿಸಿದರು. 
 
ದಾವಣಗೆರೆ–ಚನ್ನಗಿರಿ ಹೆದ್ದಾರಿಯ ಕೆರೆಬಿಳಚಿ ಹಾಗೂ ಹೊಸೂರು ಗ್ರಾಮಗಳ ಅಕ್ಕ–ಪಕ್ಕದ ರಸ್ತೆಯಲ್ಲಿ ಈಗ ಮಾವು ಮಾರಾಟ ಅಂಗಡಿಗಳು ಎದ್ದು ನಿಂತಿವೆ. 
 
ತೋತಾಪುರಿ, ರಸಪುರಿ, ಬಾದಾಮ್, ಸಿಂಧೂರ, ಅಲ್ಫೊನ್ಸೊ, ನೀಲಂ ಮಾವಿನ ತಳಿ ಹಣ್ಣುಗಳು ಇಲ್ಲಿ ಸಿಗುತ್ತವೆ. ಇವೆಲ್ಲ ಸಹಜ ರೀತಿಯಲ್ಲೇ ಹಣ್ಣಾಗಿವೆ. ಕೃತಕ ಬಣ್ಣ, ರಾಸಾಯನಿಕ ಬಳಸಿಲ್ಲ. ದರವೂ ಕಡಿಮೆ.
 
‘ಎರಡು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಫಸಲು ಇಲ್ಲ, ಬೆಲೆಯೂ ಇಲ್ಲ. ಜೀವನಕ್ಕೆ ಬೇರೆ ದಾರಿಯೂ ಇಲ್ಲ. ಹಾಗಾಗಿ, ಇದ್ದ ಅಲ್ಪಸ್ವಲ್ಪ ಮಾವು ಮಾರಲು ಅಂಗಡಿ ತೆಗೆಯುವುದು ಅನಿವಾರ್ಯವಾಯಿತು. ಅಂಗಡಿಯಲ್ಲಿ ನಾನೇ ಕುಳಿತುಕೊಳ್ಳುತ್ತೇನೆ. ಪ್ರತಿ ದಿವಸ ಸರಾಸರಿ ₹3ಸಾವಿರ ವ್ಯಾಪಾರ ಆಗುತ್ತೆ. ಈಗ ಸ್ವಲ್ಪ ಆದಾಯ ಬರುತ್ತಿದೆ’ ಎಂದು ಹೇಳುತ್ತಾರೆ ಮಾವು ತೋಟದ ಮಾಲೀಕ ಅಜ್ಗರ್‌ ಆಲಿ.
 
ಅಜ್ಗರ್ ಊರು ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ. ತೋಟ ಇರುವುದು ಪಕ್ಕದ ಹೊಸೂರಿನಲ್ಲಿ. ಎರಡು ಎಕರೆ ತೋಟದಲ್ಲಿ ವಿವಿಧ ತಳಿಯ ಮಾವು ಕೃಷಿ ಮಾಡಿದ್ದಾರೆ. ಫಸಲು ಖೇಣಿಗೆ ಕೊಡಲಿಲ್ಲ. ಈಗಾಗಲೇ ಮೂರು ಕೊಯ್ಲು ಮಾಡಿದ್ದಾರೆ. ಎರಡು ಕೊಯ್ಲಿನ ಫಸಲನ್ನು ಪುಣೆಗೆ ಕಳುಹಿಸಿ
ದ್ದರು. ಅಲ್ಲಿ ಬೆಲೆ ಸಿಗದೆ ನಷ್ಟ ಅನುಭವಿಸಿದರು.
 
‘48 ಹಣ್ಣುಗಳಿರುವ ಒಂದು ಕ್ರೇಟ್‌ಗೆ ₹1,000 ಬೆಲೆ ಸಿಕ್ಕರೆ  ಪುಣೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದಕ್ಕೆ ನಷ್ಟ ಆಗಲ್ಲ. ಇಲ್ಲದಿದ್ದರೆ ಲಾರಿ ಬಾಡಿಗೆ, ಕೂಲಿ ದರಕ್ಕೂ ಸಮನಾಗಲ್ಲ’ ಎನ್ನುತ್ತಾರೆ ಅಜ್ಗರ್.
 
‘16 ವರ್ಷದ ತೋಟ ಇದು. ಕಳೆದ ಎರಡು ವರ್ಷದಿಂದಲೂ ಪರಿಸ್ಥಿತಿ ಬದಲಾಗಿಲ್ಲ. ಆದರೆ, ಈ ಬಾರಿ ಅಂಗಡಿ ಹಾಕಿದ್ದಕ್ಕೆ ಸ್ವಲ್ಪ ಚೇತರಿಸಿಕೊಂಡಂತಾ
ಗಿದೆ. ಹಣ್ಣು ಖರೀದಿಸಲು ಈ ರಸ್ತೆಯಲ್ಲಿ ಓಡಾಡುವವರಷ್ಟೇ ಅಲ್ಲ, ಚನ್ನಗಿರಿ, ದಾವಣಗೆರೆಯಿಂದಲೂ ಗ್ರಾಹಕರು ಬರುತ್ತಾರೆ.
 
ರಸಾಯನಿಕ ಹಾಕದಿರುವುದರಿಂದ ಹಣ್ಣು ಚೆನ್ನಾಗಿದೆ ಎಂದು ಹೇಳಿಯೇ ಡಾಕ್ಟರ್‌ಗಳು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ.
 
‘ತಿಂಗಳಿನಿಂದ ವ್ಯಾಪಾರ ಮಾಡುತ್ತಿದ್ದೇನೆ. ದರದಲ್ಲಿ ಹೆಚ್ಚಿನ ಚೌಕಾಸಿ ಮಾಡಲ್ಲ. ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ನೀಡುತ್ತೇನೆ. ನನಗೂ ಅಂತಹ ನಷ್ಟ ಆಗಲ್ಲ’ ಎನ್ನುತ್ತಾರೆ ಅಜ್ಗರ್.
 
ಜಿಲ್ಲಾ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಪ್ರತಿ ವರ್ಷ ಮಾವು ಮೇಳ ನಡೆಯುತ್ತಿತ್ತು. ಇದರಿಂದ ಮಾರುಕಟ್ಟೆ ಸಿಗುತ್ತಿತ್ತು. ಈ ವರ್ಷ ಇಲಾಖೆ ಮೇಳ ಆಯೋಜಿಸಿಲ್ಲ ಎಂದು ಹೊಸೂರಿನ ಮಾವು ಬೆಳೆಗಾರರು ಆಕ್ಷೇಪಿಸಿದರು. ಸರ್ಕಾರ ಮಾವಿಗೆ ಶಾಶ್ವತ ಮಾರುಕಟ್ಟೆ ಒದಗಿಸಬೇಕು. ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಬೇಕು ಎಂಬುದು ಬೆಳೆಗಾರರ ಒಕ್ಕೊರಲ ಒತ್ತಾಯ.
*****
ಈ ವರ್ಷ ಶೇ 20 ಬೆಳೆ ನಷ್ಟ
ಜಿಲ್ಲೆಯಲ್ಲಿ ಈ ವರ್ಷ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಬಿಸಿಲಿನ ತಾಪದಿಂದ ಶೇ 20ರಷ್ಟು ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಿ.ವೇದಮೂರ್ತಿ ತಿಳಿಸಿದರು.

ಜಿಲ್ಲೆಯ ಚನ್ನಗಿರಿಯ ಸಂತೇಬೆನ್ನೂರು, ತ್ಯಾವಣಿಗೆ ಭಾಗದಲ್ಲಿ ಹೆಚ್ಚಿನ ತೋಟಗಳಿವೆ. ಈ ಭಾಗದಲ್ಲಿ ನೀರಿನ ಕೊರತೆ ನಡುವೆಯೂ ರೈತರು ತೋಟ ಉಳಿಸಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.