ADVERTISEMENT

ದುಂದುವೆಚ್ಚಕ್ಕೆ ಕಡಿವಾಣ: ಸಾಮೂಹಿಕ ವಿವಾಹ

ಮಲೇಬೆನ್ನೂರು: ಜೋಡಿ ಆಂಜನೇಯ ಸ್ವಾಮಿ ಹೂವಿನ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:38 IST
Last Updated 20 ಏಪ್ರಿಲ್ 2018, 6:38 IST
ಮಲೇಬೆನ್ನೂರಿನ ಜೋಡಿ ಆಂಜನೇಯ ದೇವಾಲಯ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಗುರುಹಿರಿಯರು ಆಶೀರ್ವದಿಸಿದರು
ಮಲೇಬೆನ್ನೂರಿನ ಜೋಡಿ ಆಂಜನೇಯ ದೇವಾಲಯ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಗುರುಹಿರಿಯರು ಆಶೀರ್ವದಿಸಿದರು   

ಮಲೇಬೆನ್ನೂರು: ‘ಇಂದು ಎಲ್ಲೆಡೆ ಸಾಮೂಹಿಕ ವಿವಾಹ ಏರ್ಪಡಿಸುತ್ತಿರುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ’ ಎಂದು ಮಡಿವಾಳ ಮಹಾ ಸಂಸ್ಥಾನದ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಜೋಡಿ ಆಂಜನೇಯ ದೇವಾಲಯ ಸಮಿತಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು. ದೇವಾಲಯ ಸಮಿತಿ ಸಮಾಜಮುಖಿ ಸೇವೆ ಸಲ್ಲಿಸಿ ಸಮಾಜ ಸುಧಾರಣೆ ಮಾಡುತ್ತಿದೆ ಎಂದರು.

ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ‘ನೂತನ ದಂಪತಿಗಳು ಆದರ್ಶ ಜೀವನ ಸಾಗಿಸಬೇಕು. ಮಕ್ಕಳಿಗೆ ಸಂಸ್ಕಾರ ನೀಡಿ ಸಮಾಜಮುಖಿಗಳನ್ನಾಗಿಸ ಬೇಕು. ದುಶ್ಚಟಗಳಿಂದ ದೂರವಿರಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ಸಮಾಜ ಸುಧಾರಣೆ ಮಾಡಿದ ಮಹಾನ್ ಸುಧಾರಕನ ನೆನಪಿನಲ್ಲಿ ನಡೆಸುತ್ತಿರುವ ಸಮಾಜ ಸೇವೆ ಸ್ಮರಣೀಯ ಎಂದು ಗೊಲ್ಲಗಿರಿ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ ಬಣ್ಣಿಸಿದರು.

‘ಸರಳ ಸಾಮೂಹಿಕ ವಿವಾಹ ಹೆಚ್ಚಿನ ಸಂಖ್ಯೆ ಗುರುಹಿರಿಯರ ಆಶೀರ್ವಾದ ಸಿಕ್ಕಿದೆ. ನೂತನ ದಂಪತಿಗಳು ಮಾದರಿ ಜೀವನ ನಡೆಸಿ’ ಎಂದು ಆದಿಚುಂಚನಗಿರಿ ಸಂಸ್ಥಾನದ ಅಡಳಿತಾಧಿಕಾರಿ ರಾಮಕೃಷ್ಣೆಗೌಡ ಹೇಳಿದರು.

ಶಿಶುನಾಳ ಷರೀಪ್ ಸಾಹೇಬರ ವಂಶಜರಾದ ಹುಸೇನ್ ಸಾಹೇಬ್ ತತ್ವಪದ ಹಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಕಣ್ಣಾಳ ಧರ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಕೆ.ಪಿ. ಸಿದ್ದಬಸಪ್ಪ, ಪೂಜಾರ ಗಂಗೇನಳ್ಳಪ್ಪ, ಜಿಗಳಿ ಆನಂದ್, ಜಿ. ಮಂಜುನಾಥ್ ಪಟೇಲ್, ಪೂಜಾರ್ ಗಂಗಾಧರ, ಪಿ.ಎಸ್. ನಿಜಲಿಂಗಪ್ಪ, ಜಯದೇವಯ್ಯ, ದೇವಾಲಯ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ದೇವಾಲಯ ಸಮಿತಿ ಅನ್ನ ಸಂತರ್ಪಣೆ ಏರ್ಪಡಿಸಿತ್ತು. 24 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ಕರಿಬಸಪ್ಪ ವಂದಿಸಿದರು.

ಬಸವ ಜಯಂತಿ ಪ್ರಯುಕ್ತ ನಡೆದ ಶೃಂಗರಿಸಿದ ಜೋಡೆತ್ತಿನ ಮೆರವಣಿಗೆ ಜನಮನ ಸೂರೆಗೊಂಡಿತು. ಪಟ್ಟಣದ ವಿಶ್ವಕರ್ಮ ಸಮಾಜದವರು ಕಾಳಿಕಾದೇವಿ ಉತ್ಸವ ಹಮ್ಮಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.