ADVERTISEMENT

ನರೇಗಾ: ನಿಗದಿತ ಕೂಲಿ ಹಣ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:02 IST
Last Updated 8 ಫೆಬ್ರುವರಿ 2017, 6:02 IST

ಬಸವಾಪಟ್ಟಣ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂದು ಸಮೀಪದ ದಾಗಿನಕಟ್ಟೆಯ ನೋಂದಾಯಿತ ಕೂಲಿಕಾರರು ಮಂಗಳವಾರ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಸರ್ಕಾರ ಈ ಯೋಜನೆಯ ಕೂಲಿಕಾರರಿಗೆ ದಿನವೊಂದಕ್ಕೆ ₹ 224 ದರ ನಿಗದಿ ಪಡಿಸಿದೆ. ಅದರಂತೆ ಈ ವರೆಗೆ ನಮಗೆ ಕೂಲಿ ಹಣ ನೀಡಲಾಗಿದೆ. ಆದರೆ, ಈ ದಿನದ ಕಾಮಗಾರಿಯಲ್ಲಿ ದರವನ್ನು ಕಡಿತಗೊಳಿಸಲಾಗಿದ್ದು, ಈಗ ದಿನವೊಂದಕ್ಕೆ ₹ 130 ರಿಂದ ₹ 150 ನೀಡಲಾಗುತ್ತಿದ್ದು, ನಮಗೆ ತುಂಬಾ ನಷ್ಟವಾಗುತ್ತಿದೆ’ ಎಂಬುದು ಕೂಲಿಕಾರರ ನಿಲುವು.

‘ನಾವು ಒಟ್ಟು ₹ 6 ಲಕ್ಷ ವೆಚ್ಚದ ಕಾಮಗಾರಿಯನ್ನು ಆರಂಭಿಸಿದ್ದು, ಇದರಲ್ಲಿ ಕೇವಲ ₹ 2 ಲಕ್ಷ ಮೊತ್ತದ ಕಾಮಗಾರಿ ಮಾತ್ರ ಆಗಿದೆ. ನಿಗದಿತ ಮೊತ್ತವನ್ನು ನೀಡಲು ಅಸಾಧ್ಯ’ ಎಂಬುದು ಅಧಿಕಾರಿಗಳ ನಿರ್ಧಾರ.

‘ಬರಗಾಲದ ನಿಮಿತ್ತ ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ನಿಗದಿಪಡಿಸಲಾಗಿದ್ದ 100 ದಿನಗಳ ಕಾಮಗಾರಿಯನ್ನು 150 ದಿನಕ್ಕೆ ಹೆಚ್ಚಿಸಲಾಗಿದ್ದು, ದಾಗಿನಕಟ್ಟೆಯ ರಂಗನಾಥಸ್ವಾಮಿ ದೇವಾಲಯದಿಂದ ಚಿಕ್ಕಗುಡ್ಡದಮ್ಮನ ದೇಗುಲದವರೆಗೆ ಸುಮಾರು 3 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರಲ್ಲಿ ನಿರೀಕ್ಷಿತ ಕೆಲಸ ಆಗಿಲ್ಲ.

ಹಿಂದೆ ಕೈಗೊಂಡಿದ್ದ ಕಾಮಗಾರಿಯಲ್ಲಿ  ಹೆಚ್ಚಿನ ಹಣವನ್ನು ಕೂಲಿಕಾರರಿಗೆ ನೀಡಲಾಗಿದೆ ಎಂದು ಗ್ರಾಮ ಪಂಚಾಯ್ತಿ ಆಡಿಟ್‌ನಲ್ಲಿ ತಿಳಿಸಲಾಗಿದ್ದು, ಸರ್ಕಾರ ನಿಗದಿ ಪಡಿಸಿದ ಅಳತೆಯಲ್ಲಿ ಕಾಮಗಾರಿಯನ್ನು ನಿರೀಕ್ಷಿಸಲಾಗಿದ್ದು, ಅಳತೆಯ ಪ್ರಕಾರ ಹಣವನ್ನು ನೀಡಲಾಗುತ್ತಿದೆ. ಒಂದುವೇಳೆ ಕೂಲಿಕಾರರಿಗೆ ಅನ್ಯಾಯವಾಗಿದ್ದರೆ ಸರಿಪಡಿ ಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಜಿ.ಸಿ.ಬಸವರಾಜಪ್ಪ ತಿಳಿಸಿದರು.

‘ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 600 ಕೂಲಿಕಾರರು ಈ ಯೋಜನೆಯಲ್ಲಿ ನೊಂದಾಯಿತರಾಗಿದ್ದು, ಸರ್ಕಾರದ ಆದೇಶದಂತೆ ಅವರಿಗೆ ಕೆಲಸ ನೀಡುತ್ತಿದ್ದೇವೆ. ಪ್ರತಿದಿನ ಅವರು ಮಾಡಿರುವ ಕಾಮಗಾರಿಯನ್ನು ಅಳತೆಯ ಮೂಲಕ ಗುರುತಿಸಲಾಗುತ್ತಿದ್ದು, ಇದರಲ್ಲಿ ವ್ಯತ್ಯಾಸವಾಗಿದ್ದಲ್ಲಿ ಅಧಿಕಾರಿಗಳ ಸೂಚನೆಯಂತೆ ನ್ಯಾಯ ಒದಗಿಸಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಾಲಮ್ಮ ಮಹೇಶ್ವರಪ್ಪ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.