ADVERTISEMENT

ನವೆಂಬರ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ?

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:14 IST
Last Updated 16 ಮೇ 2017, 5:14 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಕುರಿತು ಸಭೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಕುರಿತು ಸಭೆ ನಡೆಯಿತು.   

ದಾವಣಗೆರೆ: ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಮೂರನೇ ವಿಶ್ವ ಕನ್ನಡ ಸಮ್ಮೇಳನ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸೋಮವಾರ ನಡೆದ ಸಾಹಿತಿ ಹಾಗೂ ಸಾಹಿತ್ಯಾಸ್ತಕರ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆದವು.

ನವೆಂಬರ್‌ನಲ್ಲಿ ಹಮ್ಮಿಕೊಳ್ಳುವುದರಿಂದ ಸಮ್ಮೇಳನ ಸಿದ್ಧತೆಗೆ ಸಾಕಷ್ಟು ಸಮಯ ಸಿಗುತ್ತದೆ. ಮಳೆಗಾಲವೂ ಮುಗಿದಿರುತ್ತದೆ ಎಂದು ಸಭೆಯಲ್ಲಿ ದ್ದವರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಸಾಹಿತಿ ಹಾಗೂ ಅಧಿಕಾರಿಗಳ ಅಭಿಪ್ರಾಯ ಆಲಿಸಿದ ಸಚಿವ ಮಲ್ಲಿಕಾರ್ಜುನ ಮಾತನಾಡಿ, ‘ಎಲ್ಲರ ಅಭಿಪ್ರಾಯ ಪಡೆದು ದಿನಾಂಕವನ್ನು ಸರ್ಕಾರ ನಿರ್ಧರಿಸುತ್ತದೆ. ಸಮ್ಮೇಳನದ ಸಿದ್ಧತೆ ಕೈಗೊಳ್ಳಲು ಹಿರಿಯ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

ADVERTISEMENT

ಬಜೆಟ್‌ನಲ್ಲಿ ಸರ್ಕಾರ ₹35 ಕೋಟಿ ಮೀಸಲಿಟ್ಟಿದೆ. ಹೆಚ್ಚುವರಿಯಾಗಿ ₹10 ಕೋಟಿ ಅಗತ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವ ಸಲ್ಲಿಸಬೇಕಾಗಿದೆ’ ಎಂದರು.
‘ಸಮ್ಮೇಳನ ನಡೆಸಲು ದಾವಣಗೆರೆ ಎಲ್ಲಾ ರೀತಿಯಲ್ಲೂ ಸೂಕ್ತ ಸ್ಥಳವಾಗಿದೆ. ಮೂಲಸೌಕರ್ಯಗಳು, ವೇದಿಕೆಗಳು ಚೆನ್ನಾಗಿವೆ.

ವ್ಯವಸ್ಥೆ ಸುಗಮವಾಗಿ ಸಾಗಲು ಸಮಿತಿಗಳನ್ನು ರಚಿಸಬೇಕಾಗಿದೆ. ಈ ಸಮಿತಿಗಳು ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಿ ಚರ್ಚಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಮಾತನಾಡಿ, ‘ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಎಲ್ಲೆಲ್ಲಿ ಮಾಡಬಹುದು ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿಗಳ ಒಂದು ತಂಡ ಸ್ಥಳಗಳಿಗೆ ತೆರಳಿ ಈಗಾಗಲೇ ಮಾಹಿತಿ ಕಲೆ ಹಾಕಿದೆ. ಬೆಳಗಾವಿಗೂ ಒಂದು ತಂಡ ಹೋಗಿ ಬಂದಿದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಂಜುನಾಥ ಕುರ್ಕಿ ಮಾತನಾಡಿ, ‘ಸಮ್ಮೇಳನ ಕುರಿತಂತೆ ಮುಖ್ಯಮಂತ್ರಿ ಅವರಿಂದ ಅಧಿಕೃತ ಘೋಷಣೆಯಾಗಬೇಕು. ಸಮ್ಮೇಳನದ ಮಾಹಿತಿ ಮತ್ತಿತರ ವಿಷಯಗಳ ಕುರಿತಂತೆ ಚರ್ಚಿಸಲು, ಮಾಹಿತಿ ಪಡೆಯಲು ಕಚೇರಿ ತೆರೆಯಬೇಕು. ಕೆಎಎಸ್‌ ಶ್ರೇಣಿಯ ಅಧಿಕಾರಿ ನಿಯೋ ಜಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ನಿತ್ಯ 50ರಿಂದ 60ಸಾವಿರ ಜನರಿಗೆ ವಸತಿ, ನಗರದ 10ರಿಂದ 15 ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಬೇಕು. ಎಲ್ಲಿಯೂ ಗದ್ದಲ, ಗೊಂದಲಗಳಿಗೆ ಆಸ್ಪದವಾಗಬಾರದು’ ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಎಚ್ಚರಿಕೆ ನೀಡಿದರು.

ಹಿಂದಿನ ಸಮ್ಮೇಳನಗಳನ್ನು ಆಯೋಜಿಸಿದ ಅನುಭವಗಳ ಮೇಲೆ ಈ ಸಮ್ಮೇಳನವನ್ನು ಆಕರ್ಷಕಗೊಳಿಸಬೇಕು ಎಂಬ ಸಲಹೆಯನ್ನು ಲೇಖಕ ಬಾ.ಮ.ಬಸವರಾಜಯ್ಯ ನೀಡಿದರು.

‘ಅನಿವಾಸಿ ಭಾರತೀಯರು ಹಾಗೂ ಅಲ್ಲಿನ ಕನ್ನಡ ಕೂಟಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸ ಬೇಕು. ಈ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಕು. ಆಹಾರ ಹಾಗೂ ಪ್ರಚಾರ ಸಮಿತಿ ರಚಿಸುವಾಗ ಮುತುವರ್ಜಿ ವಹಿಸಬೇಕು’ ಎಂದು ಪತ್ರಕರ್ತ ಬಿ.ಎನ್‌.ಮಲ್ಲೇಶ್ ಹೇಳಿದರು.

ಸಮ್ಮೇಳನದ ನೆನಪಿಗೆ ಭವನ ನಿರ್ಮಿಸಬೇಕು ಎಂದು ದಾವಣಗೆರೆ ತಾಲ್ಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ, ಜನಪದ, ಸುಗಮ ಸಂಗೀತಕ್ಕೆ ಆದ್ಯತೆ ನೀಡಬೇಕೆಂದು ಸಾಲಿಗ್ರಾಮ ಗಣೇಶ ಶೆಣೈ ಒತ್ತಾಯಿ ಸಿದರು. ಸಭೆಯಲ್ಲಿ ಎ.ಆರ್‌.ಉಜ್ಜನಪ್ಪ, ಗುಂಡಗತ್ತಿ ರಾಜಶೇಖರ್, ನಾಗಭೂಷಣ್, ಗಂಗಾಧರಪ್ಪ, ರೇವಣ್ಣ ಅಂಗಡಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ, ಮೇಯರ್ ಅನಿತಾಬಾಯಿ, ಉಪ ಮೇಯರ್‌ ಮಂಜಮ್ಮ, ಎಡಿಸಿ ಪದ್ಮಾ ಬಸವಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ  ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು.

ಅನುಷ್ಕಾ ಅಥವಾ ದೀಪಿಕಾ!
ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಯಾರನ್ನು ಆಹ್ವಾನಿಸಬೇಕೆಂಬ ಬಗ್ಗೆ  ಸ್ವಾರಸ್ಯಕರ ಚರ್ಚೆ ನಡೆಯಿತು.‘ಬಾಹುಬಲಿ’ ಚಿತ್ರದ ನಾಯಕಿ ಕನ್ನಡತಿ ಅನುಷ್ಕಾ ಶೆಟ್ಟಿ, ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಹೆಸರು ಪ್ರಸ್ತಾಪವಾದವು.

ಬೆಳಗಾವಿಯಲ್ಲಿ ನಡೆದ 2ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷವಾಗಿ ಅತಿಥಿಯಾಗಿ ಬಂದಿದ್ದ ನಟಿ ಐಶ್ವರ್ಯಾ ರೈ ಚಚ್ಚನ್ ಕನ್ನಡದಲ್ಲಿ ನಮಸ್ಕಾರ ಎಂದು ಒಂದು ಪದ ಹೇಳಿದ್ದು ಬಿಟ್ಟರೆ ಭಾಷಣದಲ್ಲಿ ಎಲ್ಲಿಯೂ ಕನ್ನಡ ಬಳಸಲಿಲ್ಲ.

ಈ ಪರಿಸ್ಥಿತಿ ಈ ಬಾರಿ ಎದುರಾಗಬಾರದು. ಜನಾಕರ್ಷಣೆ ಜತೆಗೆ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅರಿವು ಇರುವವರನ್ನು ಅತಿಥಿಗಳನ್ನಾಗಿ ಕರೆಸಬೇಕು ಎಂದು ಸಭೆಯಲ್ಲಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು ಸಲಹೆ ನೀಡಿದರು.

*

ಮಧ್ಯಕರ್ನಾಟಕದಲ್ಲಿ ಸಮ್ಮೇಳನ ನಡೆಯುತ್ತಿರು ವುದರಿಂದ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಳ್ಳುತ್ತಾರೆ. ಊಟ, ವಸತಿ ವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು.
ಡಾ.ಎಂ.ಜಿ.ಈಶ್ವರಪ್ಪ
ಜನಪದ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.