ADVERTISEMENT

ನೀರಿನ ಹರಿವಿನ ಪ್ರಮಾಣ ಹೆಚ್ಚಳ

ಕೊನೆಭಾಗಗಳ ಜಮೀನುಗಳತ್ತ ಭದ್ರಾ ನಾಲೆಯ ನೀರು: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 9:39 IST
Last Updated 22 ಮಾರ್ಚ್ 2018, 9:39 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಬಳಿ ಭದ್ರಾನಾಲೆಯಲ್ಲಿ ಬುಧವಾರ 5 ಅಡಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಬಳಿ ಭದ್ರಾನಾಲೆಯಲ್ಲಿ ಬುಧವಾರ 5 ಅಡಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.   

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಮೊದಲ ಬಾರಿಗೆ ಮಲೇಬೆನ್ನೂರು ಶಾಖಾ ಭದ್ರಾನಾಲೆ ಯಲ್ಲಿ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೊನೆಭಾಗಗಳ ಜಮೀನುಗಳತ್ತ ಹಾಯತೊಡಗಿದೆ.

ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಎರಡನೇ ತಿಂಗಳ ಮೂರನೇ ವಾರದಲ್ಲಿ 5 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಇದೇ ಮೊದಲು.

ಮೇಲ್ಭಾಗದಲ್ಲಿ ಮಳೆ ಬರುತ್ತಿರುವುದು ನೀರಿನ ಹರಿವು ಹೆಚ್ಚಾಗಲು ಕಾರಣವಾಗಿದೆ ಎಂದು ಎಂಜಿನಿಯರ್‌ ಹರ್ಷ ವ್ಯಕ್ತಪಡಿಸಿದರು.

ADVERTISEMENT

ಎರಡು ಮೂರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಕೊನೆಭಾಗದ ತೋಟಗಳಿಗೆ ನೀರು ಹಾಯುತ್ತಿದೆ ಎಂದು ರೈತ ಹೊಳೆಸಿರಿಗೆರೆ ಫಾಲಾಕ್ಷಪ್ಪ ತಿಳಿಸಿದರು.

ಒಂದು ತಿಂಗಳ ಹಿಂದೆ ನಾಲೆ ನೀರು ಸಿಕ್ಕಿದ್ದರೆ ತೆಂಗು ಹಾಗೂ ಅಡಿಕೆ ತೋಟ ಒಣಗುತ್ತಿರಲಿಲ್ಲ. ಕಾಯಿ ಕಟ್ಟುತ್ತಿದ್ದವು. ಬೆಳೆ ಉಳಿಯುತ್ತಿತ್ತು.
ಈಗ ನೀರು ಹರಿದುಬಂದ ಕಾರಣ ಬೆಳೆ ಉಸಿರು ಹಿಡಿದಿವೆ. ತೆಂಗು, ಅಡಿಕೆ ಫಸಲು ಬರುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯಲವಟ್ಟಿ, ಭಾನುವಳ್ಳಿ, ಕಾಮಾಲಪುರ, ಕಡಾರ ನಾಯ್ಕನಹಳ್ಳಿ, ಕೊಕ್ಕನೂರು, ಹಿಂಡಸಗಟ್ಟೆ ಭಾಗದಲ್ಲಿ ಭತ್ತದ ಬೆಳೆ ನೀರಿಲ್ಲದೆ ಒಣಗುತ್ತಿತ್ತು. ನಾಲೆ ನೀರು ಬೆಳೆ ಕಾಪಾಡಿದೆ ಎಂದು ರೈತರಾದ ಹಿಂಡಸಗಟ್ಟೆ ಹನಮಗೌಡ, ರಾಜು ಮಾಹಿತಿ ನೀಡಿದರು.

ಸಕಾಲಕ್ಕೆ ನೀರು ಸಿಕ್ಕಿದ್ದರೆ ಖುಷ್ಕಿ ಬೆಳೆ ಜೋಳ ಬೆಳೆಯ ಬಹುದಿತ್ತು. ಈಗ ನೀರು ಸಿಕ್ಕರೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗವಾದ ಭಾನುವಳ್ಳಿ ಕಡೆ ಯಾವುದೆ ಬೆಳೆ ಬೆಳೆಯುವುದು ಕಷ್ಟ ಎನ್ನುವುದು ರೈತರಾದ ಭೀರಪ್ಪ, ಕೊತ್ತಂಬರಿ ಕರಿಯಪ್ಪ ಅವರ ಅಳಲು.

ಬೇಸಿಗೆ ತಿಂಗಳಾದ ವೈಶಾಖದಲ್ಲಿ ಬಿಸಿಲಿನ ಕಾವು ಹೆಚ್ಚಾಗಿದೆ. ಭೂಮಿ ಹೆಚ್ಚು ನೀರು ಬೇಡುತ್ತಿದೆ. ಈಗಾಗಲೇ ಹಚ್ಚಿರುವ ಭತ್ತದ ನಾಟಿಗೆ ನೀರಿನ ಅವಶ್ಯಕತೆ ಇತ್ತು. ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ನಾಲೆ ನೀರು ಸಮಸ್ಯೆಯನ್ನು ತಾತ್ಕಾಲಿಕವಾಗಿ ನೀಗಿಸಿದೆ ಎನ್ನುತ್ತಾರೆ ಕೊನೆಭಾಗದ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.