ADVERTISEMENT

ನೋಟು ಅಮಾನ್ಯ: ರೈತರು, ಜನಸಾಮಾನ್ಯರಿಗೆ ಹೊರೆ

ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:37 IST
Last Updated 31 ಜನವರಿ 2017, 6:37 IST
ಹೊನ್ನಾಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆರಂಭವಾಯಿತು ಎಂದು ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. 
 
ಭಾನುವಾರ ಪಟ್ಟಣದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಗುರುಪಾದಯ್ಯ ಮಠದ್‌ ಹಾಗೂ ಅವರ ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
 
ದೆಹಲಿಯಲ್ಲಿ ಇತ್ತೀಚೆಗೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಮಧ್ಯೆ ರಾಜಿ ಸಂಧಾನ ಮಾಡಿದ ಅಮಿತ್ ಷಾ,  ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ, ಹಾಗೂ ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಹೇಳಿರುವುದನ್ನು ಕೇಳಿ ದಿಗ್ಭ್ರಮೆಯಾಯಿತು ಎಂದರು. 
 
ಸಿದ್ದರಾಮಯ್ಯ ಮೊದಲು  ಸಹಕಾರ  ಬ್ಯಾಂಕ್ ಸಾಲ ಮನ್ನಾ ಮಾಡಬೇಕು,  ನಂತರ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಬಹುದು ಎಂದರು.
 
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯಿಂದ ಸರ್ಕಾರಕ್ಕೆ ಎಷ್ಟು ಕಪ್ಪು ಹಣ ಹರಿದು ಬಂದಿದೆ ಎಂಬುದು  ಗೊತ್ತಿಲ್ಲ. ಆದರೆ, ಇದರ ನೋವು ಮಾತ್ರ ಸಾಮಾನ್ಯ ರೈತರು, ಕೂಲಿಕಾರ್ಮಿಕರು ಅನುಭವಿಸುವಂತಾಗಿದೆ ಎಂದರು.
 
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ₹ 39 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದರು. 
 
ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಮಾತನಾಡಿ, ‘ಹೊನ್ನಾಳಿ ತಾಲ್ಲೂಕಿನ ಜನರು ತಂದೆ ಬಂಗಾರಪ್ಪ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್‌ ಪಕ್ಷ ಕಟ್ಟಿದಾಗ ಹೊನ್ನಾಳಿಯಿಂದ ಎಚ್.ಬಿ. ಕೃಷ್ಣಮೂರ್ತಿ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್‌ ನೀಡಿದ್ದರು. ಆಗ ಜನ ಅವರನ್ನು ಆಯ್ಕೆಮಾಡಿ ಅಭಿಮಾನ ಮೆರೆದರು. ಅದೇ ರೀತಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ನೀಡಿದರು.
 
ಗುರುಪಾದಯ್ಯ ಮಠದ್‌ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ‘ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಇಲ್ಲಿನ ಮಾಜಿ ಸಚಿವರು ಚುನಾವಣೆ ನೀತಿಸಂಹಿತೆ ಹೆಸರಿನಲ್ಲಿ ನನ್ನ ಮೇಲೆ ಕೇಸು ಹಾಕಿಸಿದರು. ನಂತರ ರಾಜ್ಯದ ಪೊಲೀಸರ ಬೇಡಿಕೆ ಈಡೇರಿಸುವಂತೆ ಹೋರಾಟ ಮಾಡಿದ್ದಕ್ಕೆ ನನ್ನನ್ನು ರಾಜದ್ರೋಹದ ಹೆಸರಿನಲ್ಲಿ 3 ತಿಂಗಳು ಜೈಲಿಗೆ ಕಳಿಸಿದ್ದರು ಎಂದರು. 
 
ಕಷ್ಟದ ಸಂದರ್ಭ ಸಂಪೂರ್ಣ ಬೆಂಬಲವಾಗಿ ನಿಂತವರು ಕುಮಾರಣ್ಣ. ಆದ್ದರಿಂದ ರಾಜ್ಯಕ್ಕೆ ಕುಮಾರಸ್ವಾಮಿ ಅವರಿಂದ ಮಾತ್ರ ನ್ಯಾಯ ಕೊಡಿಸಲು ಸಾಧ್ಯ ಎಂದು ತಿಳಿದು ಜೆಡಿಎಸ್ ಸೇರಿರುವುದಾಗಿ ಹೇಳಿದರು. 
 
ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ಕಾರ್ಯಕರ್ತರು, ಹಾಗೂ ರೈತ ಮುಖಂಡರು ಜೆಡಿಎಸ್ ಸೇರಿದರು. ಮುಖಂಡರಾದ ವನಜಾಕ್ಷಮ್ಮ, ಶೀಲಾ ಕುಮಾರ್, ರಾಜು ಕಡಗಣ್ಣಾರ್, ಎಂ.ವಾಸಪ್ಪ,  ತಾಲ್ಲೂಕು ಜೆಡಿಎಸ್ ಅಧ್ಯಕ್ಷ  ರಮೇಶ್ ಇತರರು ಮಾತನಾಡಿದರು. 
 
ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಯುವ ಘಟಕದ ಅಧ್ಯಕ್ಷ ಅಮಾನುಲ್ಲಾ ಖಾನ್, ಜಿ.ಪಂ. ಸದಸ್ಯ ಫಕೀರಪ್ಪ, ಮುಖಂಡರಾದ ಹೊದಿಗೆರೆ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.