ADVERTISEMENT

ಪಂಡಿತ್ ದೀನದಯಾಳ್‌ ಅನರ್ಘ್ಯ ರತ್ನ

ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 9:11 IST
Last Updated 12 ಫೆಬ್ರುವರಿ 2017, 9:11 IST
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಉದ್ಘಾಟಿಸಿದರು.
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಉದ್ಘಾಟಿಸಿದರು.   

ದಾವಣಗೆರೆ: ‘ಸರಳ ಹಾಗೂ ವಿನಯವಂತಿಕೆಯ ವ್ಯಕ್ತಿತ್ವ ಹೊಂದಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಭಾರತದ ಅನರ್ಘ್ಯ ರತ್ನ’ ಎಂದು ಆರ್‌ಎಸ್‌ಎಸ್‌ ಮುಖಂಡ ಕೆ.ವಿ.ಶಂಕರನಾರಾಯಣ ಬಣ್ಣಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಂಡಿತ್‌ ದೀನದಯಾಳ್‌ ಅವರು 1951ರಲ್ಲಿ ಜನಸಂಘವನ್ನು ಕಟ್ಟಿ, ಪೋಷಿಸಿದ ಮಹಾನ್‌ ಸಂಘಟಕರಾಗಿದ್ದರು. ಅಂದಿನ ಜನಸಂಘವೇ ಇಂದು ಬಿಜೆಪಿಯಾಗಿ ದೇಶದಾದ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಸಂಘಟನೆ ಹಾಗೂ ಸಿದ್ಧಾಂತವನ್ನು ನೋಡಿ ಪಕ್ಷಕ್ಕೆ ಸೇರಿಕೊಂಡಿದ್ದೇವೆ ವಿನಾ ಯಾವುದೇ ವ್ಯಕ್ತಿಯನ್ನು ನೋಡಿ ಅಲ್ಲ’ ಎಂದು ಹೇಳಿದರು.

‘ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತನು, ಮನ, ಧನ ಸೇವೆ ಮಾಡುವ ಮೂಲಕ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಪಕ್ಷದಲ್ಲಿ ಈ ಹಿಂದೆ ಗೊಂದಲಗಳಿದ್ದಿದ್ದು ನಿಜ. ಎಲ್ಲವೂ ಸರಿಹೋಗಿವೆ ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ‘ಬಿಜೆಪಿಯ ಯಾವ ನಾಯಿಯೂ ದೇಶದ ಸ್ವಾತಂತ್ರ್ಯಕ್ಕಾಗಿ ಮೃತಪಟ್ಟಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ಖಂಡನೀಯ. ಜನಸಂಘದ ಇತಿಹಾಸ, ಕಾಶ್ಮೀರಕ್ಕಾಗಿ ಹೋರಾಟ ನಡೆಸಿ ಮೃತಪಟ್ಟವರ ಬಗ್ಗೆ ಓದಿ ತಿಳಿದುಕೊಳ್ಳಬೇಕು’ ಎಂದು ಖರ್ಗೆ ಅವರಿಗೆ ತಿರುಗೇಟು ನೀಡಿದರು.

ಪಕ್ಷದ ಮುಖಂಡ ಎಚ್‌.ಎನ್‌.ಶಿವಕುಮಾರ್‌ ಮಾತನಾಡಿ, ‘ರಾಷ್ಟ್ರ ಸೇವೆಗಾಗಿ ಪಕ್ಷಕ್ಕೆ ಸೇರಿದ್ದೇನೆಯೇ ಹೊರತು ಯಾವುದೇ  ಸಂಪತ್ತು, ಅಧಿಕಾರ ಪಡೆಯಲು ಅಲ್ಲ ಎಂಬ ಮನೋಭಾವ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ಬರಬೇಕು’ ಎಂದರು. ಇದೇ ಸಮಯದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರನ್ನು ಪಕ್ಷದಿಂದ ಸನ್ಮಾನಿಸಲಾಯಿತು.

ಪಕ್ಷದ ಮುಖಂಡರಾದ ಪ್ರೊ.ಲಿಂಗಣ್ಣ, ಅಂಬರ್‌ಕರ್‌ ಜಯಪ್ರಕಾಶ್‌, ರುದ್ರೇಗೌಡ, ಟಿಪ್ಪು ಸುಲ್ತಾನ್‌, ಎಚ್‌.ಆನಂದಪ್ಪ, ಮೆಳ್ಳೆಕಟ್ಟೆ ನಾಗರಜ್‌, ಎಚ್‌.ಎಸ್‌.ಲಿಂಗರಾಜ್‌, ಹೇಮಂತಕುಮಾರ್‌, ಪಾಲಿಕೆ ಸದಸ್ಯ ಡಿ.ಕೆ.ಕುಮಾರ್‌, ವೈ.ಮಲ್ಲೇಶ್‌, ಸಹನಾ ರವಿ, ಮಮತಾ ಮಲ್ಲೇಶಪ್ಪ, ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಮುಖಂಡ ರಾಜಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT