ADVERTISEMENT

ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆಗಸ್ಟ್‌ನಲ್ಲಿ ಆರಂಭ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 17 ಜುಲೈ 2017, 7:49 IST
Last Updated 17 ಜುಲೈ 2017, 7:49 IST

ದಾವಣಗೆರೆ: ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಆರಂಭಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಕಂಪ್ಯೂಟರ್‌, ಸ್ಕ್ಯಾನರ್‌ ಸೇರಿದಂತೆ ಕೆಲ ತಾಂತ್ರಿಕ ಉಪಕರಣಗಳ ಜೋಡಣೆಯ ಕಾರ್ಯ ಮಾತ್ರ ಬಾಕಿ ಉಳಿದಿದೆ. ದಾವಣಗೆರೆಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಅದು ಈಡೇರಲಿದೆ.

ದೇಶದ ಸಾಮಾನ್ಯ ನಾಗರಿಕನಿಗೂ ಸರಳವಾಗಿ ಪಾಸ್‌ಪೋರ್ಟ್‌ ದೊರೆಯಬೇಕು ಎಂಬ ಉದ್ದೇಶದಿಂದ ವಿದೇಶಾಂಗ ಸಚಿವಾಲಯವು ರಾಷ್ಟ್ರದ ಪ್ರಮುಖ ಜಿಲ್ಲೆಗಳ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯುವುದಾಗಿ ಘೋಷಣೆ ಮಾಡಿತ್ತು. ಯೋಜನೆಯ ಅಂಗವಾಗಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಈಗಾಗಲೇ ಸಿದ್ಧತೆ ನಡೆದಿದ್ದು, ಶೀಘ್ರ ಜನರ ಸೇವೆಗೆ ಲಭ್ಯ ವಾಗಲಿದೆ ಎನ್ನುತ್ತಾರೆ ಸಂಸದ ಜಿ.ಎಂ.ಸಿದ್ದೇಶ್ವರ.

ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರು ಪಾಸ್‌ಪೋರ್ಟ್‌ ಮಾಡಿಸಲು ಅಥವಾ ದಾಖಲೆಗಳ ಪರಿಶೀಲನೆಗಾಗಿ ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿರುವ ಸೇವಾ ಕೇಂದ್ರಕ್ಕೆ ಹೋಗಬೇಕಿತ್ತು. ನಗರ ದಲ್ಲಿಯೇ ಸೇವಾ ಕೇಂದ್ರ ಆರಂಭ ವಾಗುವುದರಿಂದ ಈ ಜಿಲ್ಲೆಗಳ ಜನರ ಸಮಯ, ಹಣ  ಉಳಿತಾಯವಾಗಲಿದೆ ಎನ್ನುತ್ತಾರೆ ಅವರು.

ADVERTISEMENT

‘ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕಾಗಿಯೇ ಅಂಚೆ ಕಚೇರಿಯಲ್ಲಿ ವಿಶಾಲವಾದ ಸ್ಥಳವನ್ನು ಮೀಸಲಿಡಲಾಗಿದ್ದು, ಆ ಕೇಂದ್ರದಲ್ಲಿ ಈಗಾಗಲೇ ಅಗತ್ಯ ಟೇಬಲ್‌, ಕುರ್ಚಿಗಳನ್ನು ಹಾಕಲಾಗಿದೆ. ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಿಂದ ಕಂಪ್ಯೂಟರ್‌, ಸ್ಕ್ಯಾನರ್‌ ಸೇರಿದಂತೆ ಕೆಲ ತಾಂತ್ರಿಕ ಉಪಕರಣಗಳ ಜೋಡಣೆ ಕಾರ್ಯ ನಡೆಯಬೇಕಿದೆ. ಜೊತೆಗೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡಬೇಕಿದೆ’ ಎನ್ನುತ್ತಾರೆ ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಗೋವಿಂದಪ್ಪ.

ಆಗಸ್ಟ್‌ನಲ್ಲಿ ಕಾರ್ಯಾರಂಭ:  ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಅಗತ್ಯವಿರುವ ತಾಂತ್ರಿಕ ಉಪಕರಣ ಗಳನ್ನು ಇ– ಮಾರ್ಕೆಟ್‌ ಮೂಲಕವೇ ಖರೀದಿಸಬೇಕಿದ್ದು, ಕೆಲ ಆಡಳಿತಾತ್ಮಕ ಕಾರಣಗಳಿಂದ ತಡವಾಗಿದೆ. ಆಗಸ್ಟ್‌ ಅಂತ್ಯದಲ್ಲಿ ಸೇವಾ ಕೇಂದ್ರ ಆರಂಭಿಸಲಾಗುವುದು ಎನ್ನುತ್ತಾರೆ ವಲಯ ಪಾಸ್‌ಪೋರ್ಟ್‌ ಕಚೇರಿಯ ಅಧಿಕಾರಿ ಭರತ್‌ಕುಮಾರ್‌ ಕುತಾಟಿ. ನಂತರ ಬಳ್ಳಾರಿ, ಬೀದರ್‌, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯ ಪುರ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಒತ್ತಡ ಕಡಿಮೆ ಸಾಧ್ಯತೆ:  ಹುಬ್ಬಳ್ಳಿ ಸೇವಾ ಕೇಂದ್ರದಲ್ಲಿ ನಿತ್ಯ 500 ಜನರು ದಾಖಲೆಗಳ ಪರಿಶೀಲನೆಗಾಗಿ ಬರುತ್ತಿದ್ದರು. ದಾವಣಗೆರೆಯಲ್ಲಿ ಕೇಂದ್ರ ಆರಂಭವಾಗುವುದರಿಂದ ಹುಬ್ಬಳ್ಳಿಯ ಕೇಂದ್ರದ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ ಎಂದು ಹುಬ್ಬಳ್ಳಿ ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿ, ಈಚೆಗೆ ಮಧ್ಯಪ್ರದೇಶದ ಭೋಪಾಲ್‌ಗೆ ವರ್ಗಾವಣೆಯಾಗಿರುವ ಅಧಿಕಾರಿ ಶರಣಪ್ಪ ತಳವಾರ ಮಾಹಿತಿ ನೀಡಿದರು.

ನಗರದಲ್ಲಿ ಪಾಸ್‌ಪೋರ್ಟ್‌ ಕೇಂದ್ರ ತೆರೆಯುವುದರಿಂದ ಇಲ್ಲಿನ ಉದ್ಯಮಿ ಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಉಪನ್ಯಾಸಕ ಶಿವಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.