ADVERTISEMENT

ಬತ್ತಿದ ನದಿ, ನಾಲೆ: ನೀರಿನ ಸಮಸ್ಯೆ ಉಲ್ಬಣ

ನಲ್ಲಿಗೆ ಹೋಸ್ ಪೈಪ್ ಅಳವಡಿಸಿದರೆ ಸಂಪರ್ಕ ಬಂದ್–ಪಾಲಿಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:25 IST
Last Updated 19 ಏಪ್ರಿಲ್ 2017, 3:25 IST
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮತ್ತು ಭದ್ರಾ ನಾಲೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ನಗರದಲ್ಲಿ ನೀರಿನ ಸರಬರಾಜಿನಲ್ಲಿ ಇನ್ನಷ್ಟು ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
 
ಎರಡನೇ ಹಂತದ ನೀರು ಸರಬರಾಜು ಕೇಂದ್ರದ ರಾಜನಹಳ್ಳಿ ಜಾಕ್‌ವೆಲ್‌ನಲ್ಲಿ ತುಂಗಭದ್ರಾ ನದಿ ಏಪ್ರಿಲ್ 13ರಂದೇ ಬತ್ತಿಹೋಗಿದೆ. ಇದರಿಂದ ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ. 1ರಿಂದ 16, 18, 23ರ ಪ್ರದೇಶಗಳಲ್ಲಿ ಹಾಗೂ ವಾರ್ಡ್‌ ನಂ. 19, 20,21, 22, 24, 25, 29ರ ಭಾಗಶಃ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
 
ಅದೇ ರೀತಿ ಭದ್ರಾ ಬಲದಂಡೆ ನಾಲೆಗೆ ಏಪ್ರಿಲ್ 4ರಂದೇ ನೀರು ಸಂಪೂರ್ಣವಾಗಿ ನಿಲುಗಡೆಯಾಗಿದೆ. ಸದ್ಯ ಸಮಗ್ರ ನೀರು ಸರಬರಾಜು ಕೇಂದ್ರ (ಟಿ.ವಿ ಸ್ಟೇಷನ್)ದ ಕೆರೆಯಲ್ಲಿ ಕೇವಲ 3 ಮೀಟರ್ ನೀರು ಸಂಗ್ರಹ ಇದೆ. ಇದರಲ್ಲಿ 0.80 ಡೆಡ್‌ ಸ್ಟೋರೇಜ್ ಆಗುತ್ತದೆ. ಆದ್ದರಿಂದ ಕೇವಲ 2.20 ಮೀಟರ್‌ ನೀರನ್ನು ನಗರಕ್ಕೆ ಸರಬರಾಜು ಮಾಡ ಬಹುದಾಗಿದೆ. ದಿನಕ್ಕೆ 20 ಎಂಎಲ್‌ಡಿಯಂತೆ 9 ದಿನ ಸರಬರಾಜು ಮಾಡಬಹುದು.
 
ಭದ್ರಾ ನಾಲೆಗೆ ಮೇ 4ರಂದು ನೀರು ಹರಿಸಲಿದ್ದು, ಅದು ಮೇ 7ರಂದು ನಗರಕ್ಕೆ ತಲುಪುವ ನಿರೀಕ್ಷೆ ಇದೆ. ನಾಲೆಯಲ್ಲಿ ನೀರು ಹರಿದು ಬರುವ ತನಕ ಸಮಗ್ರ ನೀರು ಸರಬರಾಜು ಕೇಂದ್ರ (ಟಿ.ವಿ.ಸ್ಟೇಷನ್)ದಿಂದ ನೀರು ವಿತರಣೆ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಪ್ರತಿಯೊಂದು ವಾಲ್ವ್‌ಗೆ 30 ನಿಮಿಷ ಮಾತ್ರ ನೀರನ್ನು ಸರಬರಾಜು ಮಾಡಲು ಸೂಚಿಸಲಾಗಿದೆ.
 
ಈ ನೀರನ್ನು ಸಾರ್ವಜನಿಕರು ಕುಡಿಯುವುದಕ್ಕೆ ಮಾತ್ರ ಬಳಸಬೇಕು. ನಿತ್ಯಕ್ರಿಯೆಗಳಿಗೆ ಬೋರ್‌ವೆಲ್‌ ನೀರು ಬಳಸಬೇಕು ಎಂದು ತಿಳಿಸಿದೆ.
ಬೋರ್‌ವೆಲ್‌ ಲೈನ್‌ನಿಂದ ಅಳವಡಿಸಿರುವ ನಲ್ಲಿಗಳಿಗೆ ಹೋಸ್ ಪೈಪ್ ಹಚ್ಚಿ ಮನೆಗಳ ತೊಟ್ಟಿಗೆ ನೀರನ್ನು ಪೂರೈಸಿಕೊಳ್ಳುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದೆ. ಇಂತಹ ಮನೆಗಳ ನೀರಿನ ಸಂಪರ್ಕ ಬಂದ್ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.