ADVERTISEMENT

ಬರ: ಅಡಿಕೆ ಮರ ಕಡಿಯುತ್ತಿರುವ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:23 IST
Last Updated 23 ಮಾರ್ಚ್ 2017, 5:23 IST
ತ್ಯಾವಣಿಗೆಯ ದೊಡ್ಡಘಟ್ಟ ಗ್ರಾಮದ ರೈತ ವಿಜಯಕುಮಾರ್ ಅವರ ತೋಟದಲ್ಲಿ ನೀರಿಲ್ಲದೆ ಅಡಿಕೆ ಮರಗಳು ಒಣಗಿ ಹೋಗಿದ್ದು, ಅವುಗಳನ್ನು ಕಡಿದು ಹಾಕುತ್ತಿದ್ದಾರೆ.
ತ್ಯಾವಣಿಗೆಯ ದೊಡ್ಡಘಟ್ಟ ಗ್ರಾಮದ ರೈತ ವಿಜಯಕುಮಾರ್ ಅವರ ತೋಟದಲ್ಲಿ ನೀರಿಲ್ಲದೆ ಅಡಿಕೆ ಮರಗಳು ಒಣಗಿ ಹೋಗಿದ್ದು, ಅವುಗಳನ್ನು ಕಡಿದು ಹಾಕುತ್ತಿದ್ದಾರೆ.   

ತ್ಯಾವಣಿಗೆ: ಸೂಳೆಕೆರೆ ಸಿದ್ದನನಾಲಾದಲ್ಲಿ ನೀರು ಹರಿಯುವುದು ನಿಂತು ಹೋಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೂರಾರು ಎಕರೆ ಅಡಿಕೆ ತೋಟಗಳು ಒಣಗುತ್ತಿದೆ.

ಸಮೀಪದ ದೊಡ್ಡಘಟ್ಟ ಗ್ರಾಮದ ಸುಮಾರು 400 ಎಕರೆ ಜಮೀನಿನಲ್ಲಿ ರೈತರು ಸೂಳೆಕೆರೆ ಸಿದ್ದನನಾಲಾದಿಂದ ಹರಿದು ಬರುವ ನೀರನ್ನು ನಂಬಿಕೊಂಡು ಬೆಳೆಸಿದ್ದ ಅಡಿಕೆ ಮತ್ತು ತೆಂಗಿನ ತೋಟಗಳ ಸ್ಥಿತಿ ಇದು.

ತೋಟಗಳನ್ನು ಉಳಿಸಿಕೊಳ್ಳಲು ಸಾಲ ಮಾಡಿ ಕೆಲವು ರೈತರು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ಕಡಿಮೆ ನೀರು. ಇನ್ನು ಕೆಲವು ರೈತರು ಹಣವಿಲ್ಲದೆ ಕೊಳವೆ ಬಾವಿಗಳನ್ನು ಕೊರೆಸಲು ಸಾಧ್ಯವಾಗದೇ ತೋಟಗಳನ್ನು ಕಳೆದುಕೊಳ್ಳುವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರಿಗೆ ಅಲ್ಪಾವಧಿ ಭತ್ತದ ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ, ದೀರ್ಘಾವಧಿ ಬೆಳೆಗಳಿಗೆ ತಿಂಗಳಿಗೊಮ್ಮೆ ನೀರು ಹರಿಸಲಾಗುವುದು ಎಂದು ಹೇಳುತ್ತಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳು ಸಿದ್ದನನಾಲಾದಲ್ಲಿ ತಿಂಗಳಿಗೊಮ್ಮೆಯೂ ನೀರು ಹರಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

‘ಇಲಾಖೆಯವರು ಎಚ್ಚೆತ್ತುಕೊಂಡು ತಿಂಗಳಿಗೊಮ್ಮೆ ದೊಡ್ಡಘಟ್ಟದವರೆಗೆ ನೀರು ಹರಿಸಿದರೆ ನಾವು ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ದೊಡ್ಡಘಟ್ಟದ ರೈತ ಹಾಗೂ ನವಿಲೇ ಹಾಳ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಬಸಪ್ಪ, ಮೃತ್ಯುಂಜಯ, ಚನ್ನಬಸಯ್ಯ, ಶಿವಣ್ಣ ಜೋಗಿ, ಉಮಾಪತಿ,  ನಾಗರಾಜ್, ಹರೀಶ್.

‘ಸಿದ್ದನಾನಾಲಾದಲ್ಲಿ ನೀರು ಹರಿಯುತ್ತಿಲ್ಲ. ಫಲ ನೀಡುತ್ತಿರುವ ತೋಟವನ್ನು ಉಳಿಸಿಕೊಳ್ಳಲು ಸಾಲ ಮಾಡಿ ಆರು ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ, 600 ಅಡಿ ಆಳಕ್ಕೆ ಕೊರೆಸಿದರೂ ನೀರು ಸಿಗುತ್ತಿಲ್ಲ. ಸಿಗುವ ನೀರು ಒಂದು ಗಂಟೆ ಮಾತ್ರ  ಬರುತ್ತದೆ. ನೀರಿಲ್ಲದೆ ಒಣಗುತ್ತಿರುವ ತೋಟವನ್ನು ನೋಡಲಾಗದೇ ಕಡಿಸುತ್ತಿದ್ದೇನೆ’ ಎನ್ನುತ್ತಾರೆ ಎಪಿಎಂಸಿ ಉಪಾಧ್ಯಕ್ಷರೂ ಆಗಿರುವ ರೈತ ವಿಜಯಕುಮಾರ್.

‘ಕೆರೆಯ ನೀರನ್ನು ನಂಬಿಕೊಂಡು ಅಡಿಕೆ ತೋಟವನ್ನು ಕಷ್ಟಪಟ್ಟು ಬೆಳೆಸಿದೆ, ಫಲ ಪಡೆಯುತ್ತಿದ್ದೆ. ಇಲ್ಲಿಯವರೆಗೆ ನೀರಿನ ಸಮಸ್ಯೆಯಾಗಿರಲಿಲ್ಲ. ಈ ವರ್ಷ ನೀರಿಲ್ಲದೆ ತೋಟ ಒಣಗುತ್ತಿದೆ. ಕೊಳವೆ ಬಾವಿ ಕೊರೆಸಲು ಹಣವಿಲ್ಲ’ ಎನ್ನುತ್ತಾರೆ ರೈತ ಎಂ.ಎಚ್.ರಾಜ ಶೇಖರಪ್ಪ.
–ರಾಜು ಆರ್. ತ್ಯಾವಣಿಗೆ

*
ನೀರಿಲ್ಲದೆ ತೋಟ ಒಣಗುತ್ತಿದೆ. ಬಿಸಿಲಿನ ತಾಪಕ್ಕೆ ತೋಟದ ಬಣ್ಣವೇ ಬದಲಾಗುತ್ತಿದೆ. ಅದನ್ನು ನೋಡಲಾಗುತ್ತಿಲ್ಲ. ಅದಕ್ಕಾಗಿ ಕಡಿಸುತ್ತಿದ್ದೇನೆ.
–ವಿಜಯಕುಮಾರ್,
ರೈತ ಹಾಗೂ ಎಪಿಎಂಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT