ADVERTISEMENT

ಬರ ನಿರ್ವಹಣೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ

ತಾಲ್ಲೂಕು ಪಂಚಾಯ್ತಿ ತ್ರೈ ಮಾಸಿಕ ಕೆಡಿಪಿ ಸಭೆ: ಅಧಿಕಾರಿಗಳ ವಿರುದ್ಧ ಶಾಸಕ ರಾಜೇಶ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:27 IST
Last Updated 19 ಏಪ್ರಿಲ್ 2017, 3:27 IST
ಜಗಳೂರು: ‘ತಾಲ್ಲೂಕಿನಲ್ಲಿ  ತೀವ್ರ ಬರಗಾಲ ಎದುರಾಗಿದ್ದು, ಅಧಿಕಾರಿಗಳು  ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಇಷ್ಟವಿಲ್ಲದವರು ತಾಲ್ಲೂಕಿನಿಂದ ಹೊರಹೋಗಿ’ ಎಂದು ಶಾಸಕ ಎಚ್‌.ಪಿ.ರಾಜೇಶ್‌ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.
 
ಪಟ್ಟಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.‘ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಸರ್ಕಾರದಿಂದ ಜಾನುವಾರಿಗೆ ಮೇವು ಬ್ಯಾಂಕ್‌ ತೆರೆಯಲಾಗಿದೆ. ಆದರೆ, ಅಧಿಕಾರಿಗಳು ರೈತರಿಗೆ ಇದುವರೆಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕೆಲಸವಿಲ್ಲದ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ’ ಎಂದು ದೂರಿದರು.
 
‘ಸಮಸ್ಯೆ ಇರುವ ಹಳ್ಳಿಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಆದರೆ, 3 ತಿಂಗಳಾದರೂ ಟ್ಯಾಂಕರ್‌ ಮಾಲೀಕರಿಗೆ ಹಣ ಪಾವತಿ ಮಾಡಿಲ್ಲ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಏನು ಮಾಡುತ್ತಿದ್ದೀರಿ.
 
ನಿಮಗೆ ಆಸಕ್ತಿ ಇಲ್ಲದಿದ್ದರೆ ಕರ್ತವ್ಯದಿಂದ ಬಿಡುಗಡೆ ಹೊಂದಿ. ಜನರು  ಸಮಸ್ಯೆಗಳ ಬಗ್ಗೆ ನನ್ನನ್ನು ಬಂದು ಕೇಳುತ್ತಾರೆ. ನಾನು ಏನು ಉತ್ತರ ನೀಡಬೇಕು? ನಿಮ್ಮ ಬೇಜವಾಬ್ದಾರಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
 
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಕೆ.ಮಂಜುನಾಥ್‌ ಮಾತನಾಡಿ, ‘ತಾಲ್ಲೂಕಿನಲ್ಲಿ ಹತ್ತಿ, ಮೆಕ್ಕೆಜೋಳದ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಬಿತ್ತನೆ ನಂತರ ಮೊಳಕೆ ಬರುತ್ತಿಲ್ಲ. ನಕಲಿ ಬೀಜ ಮಾರಾಟ ತಡೆಯುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿದರು.
 
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಉಮಾ ವೆಂಕಟೇಶ್‌, ಸವಿತಾ ಕಲ್ಲೇಶಪ್ಪ, ಶಾಂತಕುಮಾರಿ, ತಹಶೀಲ್ದಾರ್‌ ಶ್ರೀಧರ ಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.