ADVERTISEMENT

‘ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಬೇಡ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:10 IST
Last Updated 11 ನವೆಂಬರ್ 2017, 6:10 IST

ಹರಿಹರ: ಜಯಂತ್ಯುತ್ಸವಗಳು ಸಮುದಾಯದ ಭಾವನೆಯ ಪ್ರತೀಕ. ಇಂಥ ಕಾರ್ಯಕ್ರಮಗಳ ವಿಚಾರದಲ್ಲಿ ರಾಜಕೀಯ ಕೂಡದು ಎಂದು ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು. ನಗರದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ಅಂಜುಮನ್-ಎ-ಇಸ್ಲಾಮಿಯಾ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟಿಪ್ಪು ಜಯಂತ್ಯುತ್ಸವದ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳು ಸಮಾಜದ ಒಡಕಿಗೆ ಕಾರಣವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಟಿಪ್ಪು ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿ. ಅವನ ಸಾಧನೆಗಳು ಕೊಡುಗೆಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ನಮೂದಾಗಿವೆ. ಆದರೆ, ಕೆಲ ಸಮಾಜಘಾತುಕ ಶಕ್ತಿಗಳು ಇತಿಹಾಸವನ್ನು ತಿರುಚಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಖಂಡನಾರ್ಹ. ರಾಜ್ಯ ಕೋಮು ಸೌಹಾರ್ದದ ರಕ್ಷಣೆಗಾಗಿ ಟಿಪ್ಪು ಜಯಂತ್ಯುತ್ಸವದ ಮೆರವಣಿಗೆಯನ್ನು ಸರ್ಕಾರ ರದ್ದುಗೊಳಿಸಿ, ಒಳಾಂಗಣ ಕಾರ್ಯಕ್ರಮವಾಗಿ ರೂಪಿಸಿದೆ ಎಂದರು.

ತಾಲ್ಲೂಕಿನಲ್ಲಿ ಸಂಘ-ಸಂಸ್ಥೆಗಳು ಟಿಪ್ಪು ಜಯಂತ್ಯುತ್ಸವ ನಡೆಸಲು ಅಗತ್ಯವಾದ ಮೆರವಣಿಗೆ ಹಾಗೂ ಬಹಿರಂಗ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿ ಅನುಮತಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ADVERTISEMENT

ಉಪನ್ಯಾಸ ನೀಡಿದ ದಾವಣಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ. ಮಂಜಣ್ಣ, ‘ರಾಜಪ್ರಭುತ್ವದ ಕಾಲಘಟ್ಟದ ಸಾಮ್ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ನಡೆದ ಕೆಲ ಅಹಿತರ ಘಟನೆಗಳಿಗೆ ಬಣ್ಣ ಹಚ್ಚುವ ಮೂಲಕ ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿ ಸೌಹರ್ದ ಕದಡುವ ಯತ್ನ ನಡೆಸುತ್ತಿವೆ’ ಎಂದು ಆಪಾದಿಸಿದರು

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಪ್ರಜಾಪೀಡಕರಾಗಿದ್ದ 200ಕ್ಕೂ ಹೆಚ್ಚು ಪಾಳೇಗಾರರು ಹಾಗೂ ಭೂಮಾಲೀಕರನ್ನು ಹತ್ತಿಕ್ಕಿಲು ಟಿಪ್ಪು ಕೆಲ ಕಠಿಣ ಕ್ರಮಗಳನ್ನು ಜರುಗಿಸಬೇಕಾಯಿತು. ಭೂ ಮಾಲೀಕರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿದ್ದ ರೈತರನ್ನು ಮಕ್ತಿಗೊಳಿಸಿ ಅವರಿಗೆ ಭೂಮಿ ನೀಡಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ ಎಂದರು.
ಟಿಪ್ಪುವಿನ ವಂಶಸ್ಥರು ಕೋಲ್ಕತ್ತದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸರ್ಕಾರ, ಅವರ ವಂಶಸ್ಥರಿಗೆ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.

ಅಂಜುಮನ್-ಎ-ಇಸ್ಲಾಮಿಯಾ ಸಂಸ್ಥೆಯ ಅಧ್ಯಕ್ಷ ಬಿ.ಕೆ. ಸೈಯದ್ ರೆಹಮಾನ್ ಮಾತನಾಡಿ, ‘ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಸರಳವಾಗಿ ಟಿಪ್ಪು ಜಯಂತ್ಯುತ್ಸವನ್ನು ಆಚರಿಸುತ್ತಿದ್ದೇವೆ. ನ. 23ರಂದು ಜಿಲ್ಲಾಡಳಿತದ ಅನುಮತಿ ಪಡೆದು ನಗರದ ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಿಸುತ್ತೇವೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ. ಶ್ರೀದೇವಿ, ನಗರಸಭೆ ಅಧ್ಯಕ್ಷೆ ಎಂ. ಆಶಾ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷೀ ಮಹಾಂತೇಶ್, ಇಒ ಕೆ. ನೀಲಗಿರಿಯಪ್ಪ, ತಹಶೀಲ್ದಾರ್ ರೆಹಾನ್‌ ಪಾಷಾ, ಬಿಇಒ ಡಿ. ನರಸಿಂಹಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.