ADVERTISEMENT

ಮಳೆ ಬಂದರೂ ವಿಮೆ ಹಣ ಸಿಗುತ್ತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:38 IST
Last Updated 14 ಜುಲೈ 2017, 5:38 IST

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಸಿದಿದ್ದು, ಶೇ 29ರಷ್ಟು ಮಾತ್ರ ಬಿತ್ತನೆಯಾಗಿದೆ. ಹಾಗಾಗಿ, ರೈತರು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಮಳೆ ಬರಲಿ, ಬಾರದಿರಲಿ ತಮ್ಮ ಪಾಲಿನ ವಿಮಾ ಪಡೆಯಲು ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ರೈತರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ 222.2 ಮಿ.ಮೀ ವಾಡಿಕೆ ಮಳೆಯಾಗಿದ್ದು, ಇದುವರೆಗೂ 147.8 ಮಿ.ಮೀ ಮಳೆಯಾಗಿದ್ದು, ಶೇ 33ರಷ್ಟು ಕೊರತೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೈತರು ಈ ಬಾರಿ ಸಾಂಪ್ರದಾಯಿಕ ಬೆಳೆಗಳಿಗೆ ಮೊರೆಹೋಗದೆ ಅತ್ಯಲ್ಪ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕು. ಈ ಬೆಳೆಗಳಿಗೆ ಸಂಬಂಧಿಸಿ ದಂತೆ ಬಿತ್ತನೆ ಬೀಜ ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ದಾಸ್ತಾ ನಿದೆ ಎಂದರು.

ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ ಯೋಜನೆಯಡಿಯಲ್ಲಿ ಆಹಾರ, ಎಣ್ಣೆಕಾಳು ಮತ್ತು ವಾರ್ಷಿಕ ವಾಣಿಜ್ಯ ಬೆಳೆ) 2017ರ ಮುಂಗಾರು ಹಂಗಾಮಿಗೆ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಅಳವಡಿಸಿ, ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಶೇ 25ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಬೆಳೆ ವಿಮೆ ಪರಿಹಾರಕ್ಕೆ ರೈತರು ಅರ್ಹರಾಗುತ್ತಾರೆ. ರೈತರು, ಬೆಳೆ ಹಾನಿ ಬಗ್ಗೆ 48 ಗಂಟೆಯ ಒಳಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಉದಾಹರಣೆಗೆ ಮೆಕ್ಕೆಜೋಳ ಬೆಳೆಗೆ ಎಕರೆಗೆ ₹1 ಸಾವಿರ ವಂತಿಗೆ ಪಾವತಿಸಿದ ರೈತರಿಗೆ, ಮಳೆ ಬಾರದೆ ಬೆಳೆ ನಷ್ಟವಾದರೆ ವಿಮಾ ಕಂಪೆನಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಲಿದೆ ಎಂದರು.

ರೈತರ ಖಾತೆಗೆ ಜಮೆಯಾದ ಪರಿಹಾರ ಮೊತ್ತವನ್ನು ಬ್ಯಾಂಕ್‌ಗಳು ಯಾವುದೇ ಹಳೆಯ ಬಾಕಿಗೆ ಮುರಿದುಕೊಳ್ಳುವಂತಿಲ್ಲ. ಈ ಕುರಿತು ದೂರುಗಳಿದ್ದರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಅಥವಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರನ್ನು ಖುದ್ದಾಗಿ ಭೇಟಿ ಮಾಡಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ, ತೋಟ ಗಾರಿಕೆ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.