ADVERTISEMENT

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕರುಣಾಕರ ರೆಡ್ಡಿ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:33 IST
Last Updated 8 ಸೆಪ್ಟೆಂಬರ್ 2017, 9:33 IST

ಹರಪನಹಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಕರುಣಾಕರ ರೆಡ್ಡಿ ಅವರು ಟೀಕಿಸಿದರು. ಪಟ್ಟಣದ ರಾಮದೇವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕರ್ತರು ಶಾಂತಿಯಿಂದ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಕಾರ್ಯಕ್ರಮ ಹತ್ತಿಕ್ಕಲು ಸರ್ಕಾರ ವಿಫಲ ಯತ್ನ ಮಾಡುತ್ತಿದೆ. ಚಳವಳಿ ಮಾಡುವ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡುತ್ತಿದೆ. ಕ್ಷೇತ್ರದ ಶಾಸಕರು ನಾಲ್ಕು ವರ್ಷ ಕಾಲಹರಣ ಮಾಡಿ ಶೂನ್ಯ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ನೇಮಿರಾಜ್‌ ತಾಲ್ಲೂಕಿನಲ್ಲಿ ವಿಸ್ತಾರಕರಾಗಿ 15 ದಿನಗಳ ಕಾಲ ಬೂತ್‌ ಮಟ್ಟದ ಕಾರ್ಯಕರ್ತರೊಂದಿಗೆ ತಾಲ್ಲೂಕಿನಲ್ಲಿ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮಗಳಿಗೆ ತಲುಪಿಸಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ADVERTISEMENT

ಪುರಸಭೆ ಅಧ್ಯಕ್ಷ ಎಚ್‌.ಕೆ.ಹಾಲೇಶ್‌ ಮಾತನಾಡಿ, ‘ಸೆ.5ರಂದು ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಂ.ಪಿ.ರವೀಂದ್ರ ಬದಲಿಸಿ ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ. ಶಾಸಕರಿಗೆ ಸಮಯ ಪ್ರಜ್ಞೆ ಇಲ್ಲ. ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಟೀಕಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಕರುಣಾಕರ ರೆಡ್ಡಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್‌.ಜಯಶೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಕಲಬುರ್ಗಿ ಮಾತನಾಡಿದರು. ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಮಂಜ್ಯಾನಾಯ್ಕ, ಕಣಿವೆಹಳ್ಳಿ ಮಂಜುನಾಥ್‌, ಎಂ.ವೆಂಕಟೇಶ್‌, ಪ್ರೇಮ ಐರಣಿ, ಸತ್ಯನಾರಾಯಣ, ಮೆಹಬೂಬ್‌ ಸಾಬ್‌ ಉಪಸ್ಥಿತರಿದ್ದರು. ಕೊಟ್ರಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.