ADVERTISEMENT

‘ರೌಡಿ ಶೀಟರ್‌ ಸೇರ್ಪಡೆ ಕಾನೂನುಬಾಹಿರ’

ಯೋಗೇಶ್‌ ಮಾಸ್ಟರ್‌ಗೆ ಮಸಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:53 IST
Last Updated 20 ಮಾರ್ಚ್ 2017, 5:53 IST

ದಾವಣಗೆರೆ: ರಾಜಕೀಯ ಪ್ರಭಾವಕ್ಕೆ ಮಣಿದ ಪೊಲೀಸ್‌ ಇಲಾಖೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ರೌಡಿ ಶೀಟರ್‌ಗೆ ಸೇರಿಸಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ಎಸ್‌.ಟಿ.ವೀರೇಶ್ ಆರೋಪಿಸಿದರು.

ಪೊಲೀಸ್‌ ಸ್ಟೇಷನ್‌ನಲ್ಲೇ ಬೇಲ್‌ ನೀಡಬಹುದಾದ ಪ್ರಕರಣದ ಆರೋಪಿ ಗಳನ್ನು ರೌಡಿ ಶೀಟರ್‌ಗೆ ಸೇರಿಸಿರುವುದು ಕಾನೂನುಬಾಹಿರ. ಅಲ್ಲದೇ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಾದ ಶಿವಪ್ರಸಾದ್‌ ಮತ್ತು ಚೇತನ್‌ ಅವರನ್ನು ಬಂಧಿಸುವಾಗ ಅವರ ಕುಟುಂಬದವರನ್ನು ಅವಾಚ್ಯವಾಗಿ ನಿಂದಿಸಲಾಗಿದೆ. ಹಲ್ಲೆ ಮಾಡಲಾಗಿದೆ.

ಹೀಗಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದ ಪ್ರಕರಣ ನಡೆಯಲು ಪೊಲೀಸ್‌ ಇಲಾಖೆಯ ವೈಫಲ್ಯವೇ ಕಾರಣ. ಅವರ ವಿರುದ್ಧ ಹಲವು ಠಾಣೆಗಳಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಪಿಗಳು ಎಂದು ಬಂಧಿಸಿರುವ ಚೇತನ್ ಮತ್ತು ಶಿವಪ್ರಸಾದ್ ಅವರನ್ನು ಯೋಗೇಶ್‌ ಮಾಸ್ಟರ್‌ ಗುರುತಿಸಿಯೇ ಇಲ್ಲ. ಹೀಗಿದ್ದರೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಸುಳ್ಳು ಪ್ರಕರಣ ಗಳಿಂದ ಹಿಂದೂ ಸಂಘಟನೆಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಕಾರ್ಯಕರ್ತರ ಹೋರಾಟವನ್ನು ನಿಲ್ಲಿಸಲು ಆಗುವುದಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿಗಳಾದ ಸತೀಶ್‌ ಪೂಜಾರಿ, ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.