ADVERTISEMENT

ಲಾರಿ ಮಾಲೀಕರ ರಾಜ್ಯ ಸಮ್ಮೇಳನ ನಾಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 4:31 IST
Last Updated 15 ಜುಲೈ 2017, 4:31 IST

ದಾವಣಗೆರೆ:  ಕರ್ನಾಟಕ ಲಾರಿ ಮಾಲೀಕರ ಸಂಘದ ಸಹಯೋಗದಲ್ಲಿ  ರಾಜ್ಯ ಸಮ್ಮೇಳನ ವನ್ನು ಇಲ್ಲಿನ ತ್ರಿಶೂಲ್‌ ಕಲಾಭವನದಲ್ಲಿ ಜುಲೈ 16ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನನ್ನೂ ಸಾಬ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ  ಲಾರಿ ಮಾಲೀಕರ ಈ ಸಮ್ಮೇಳವನ್ನು ಉದ್ಘಾಟಿಸುವರು. ಸಂಘದ ರಾಜ್ಯ ಅಧ್ಯಕ್ಷ ಬಿ.ಚನ್ನಾರೆಡ್ಡಿ ಅಧ್ಯಕ್ಷತೆ ವಹಿಸುವರು. ಶಾಸಕ ಶಾಮನೂರು ಶಿವ ಶಂಕರಪ್ಪ, ಐಜಿಪಿ ಡಾ.ಎಂ.ಎ.ಸಲೀಂ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾ ಶಂಕರ ಎಸ್.ಗುಳೇದ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ಉಪಸ್ಥಿತರಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರ ಸಂಘ ಆರಂಭ:  ಲಾರಿ ಮಾಲೀಕರ ಸಂಘದ ಅಡಿಯಲ್ಲಿ ಕರ್ನಾಟಕ ಸಾರಿಗೆ ಮೂಲಭೂತ ಸೌಕರ್ಯಗಳ ಸಹಕಾರ ಸಂಘವನ್ನು ಆರಂಭಿಸಲಾಗಿದೆ. ಸಹಕಾರ ಸಂಘದ ಮೂಲಕ ಬಡಾವಣೆಗಳನ್ನು ನಿರ್ಮಿಸಿ, ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಹಾಗೂ ಸಿಬ್ಬಂದಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೇ ಟ್ರಕ್‌ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗುವುದು. ಅತ್ಯಾಧುನಿಕ ಗ್ಯಾರೇಜ್‌ಗಳನ್ನು ನಿರ್ಮಿಸುವ, ಪೆಟ್ರೋಲ್‌ ಬಂಕ್‌ಗಳನ್ನು ಆರಂಭಿಸಲು ಯೋಚನೆ  ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಈಗಾಗಲೇ ಜಿಲ್ಲೆಯ 200 ಮಂದಿ ಸೇರಿ ರಾಜ್ಯದಲ್ಲಿ ಒಟ್ಟು 1,000 ಜನ ಸಹಕಾರ ಸಂಘದ ಸದಸ್ಯತ್ವ ಪಡೆದಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಿಸಿ, ಚಟುವಟಕೆಗಳನ್ನು ಚುರುಕು ಗೊಳಿಸಲಾಗುವುದು ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಸುಭಾಷ್, ಓಂಪ್ರಕಾಶ್, ವಿ.ಬಸವರಾಜ್, ಎನ್‌.ಬಾಬು, ಸೈಯದ್‌, ಎಂ.ಜಿ.ಅತಾವುಲ್ಲಾ, ಕೆ.ಬಾಬು ಸಾಹೇಬ್, ಟಿ.ಬಸವರಾಜ್, ದಿನೇಶ್, ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.