ADVERTISEMENT

ಲೋಕೋಪಯೋಗಿ ಕಾರ್ಯದರ್ಶಿ ಪರಿಶೀಲನೆ

ಪಿ.ಬಿ.ರಸ್ತೆ ವಿಸ್ತರಣೆ: ತ್ವರಿತ ಕಾಮಗಾರಿ ಪೂರ್ಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:06 IST
Last Updated 25 ಅಕ್ಟೋಬರ್ 2014, 6:06 IST
ದಾವಣಗೆರೆಯ ಪಿ.ಬಿ.ರಸ್ತೆ ವಿಸ್ತರಣಾ ಕಾರ್ಯದ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ.ಚಿಕ್ಕರಾಯಪ್ಪ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆಯ ಪಿ.ಬಿ.ರಸ್ತೆ ವಿಸ್ತರಣಾ ಕಾರ್ಯದ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ.ಚಿಕ್ಕರಾಯಪ್ಪ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ದಾವಣಗೆರೆ: ಪಿ.ಬಿ.ರಸ್ತೆ ವಿಸ್ತರಣಾ ಕಾರ್ಯದ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಿ.ಚಿಕ್ಕರಾಯಪ್ಪ ಅವರು ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ವಿಸ್ತರಣಾ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಅಭಿವೃದ್ಧಿ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

ಸಮಿತಿಯ ಉಪಾಧ್ಯಕ್ಷ ಕೆ.ಟಿ.ಗೋಪಾಲಗೌಡ ಮಾತನಾಡಿ, ದಾವಣಗೆರೆಯಲ್ಲಿ ಹಾದುಹೋಗಿರುವ ಪಿ.ಬಿ.ರಸ್ತೆಯನ್ನು ತ್ವರಿತವಾಗಿ ಕಾನೂನು ಪ್ರಕಾರ ವಿಸ್ತರಣೆ ಮಾಡಬೇಕು. ವಿಸ್ತರಣೆಯ ಕಾರ್ಯ  ವಿಳಂಬ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕೇವಲ ಪಿ.ಬಿ.ರಸ್ತೆ ಅಷ್ಟೆ ಅಲ್ಲದೇ ಇಲಾಖೆಯ ವ್ಯಾಪ್ತಿಯಲ್ಲಿರುವ ನಗರದ ಎಲ್ಲ ರಸ್ತೆಗಳನ್ನು ಕಾನೂನು ಪ್ರಕಾರ ವಿಸ್ತರಣೆ ಮಾಡಿ, ಅಭಿವೃದ್ಧಿ ಮಾಡಬೇಕು. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ರಸ್ತೆಗಳು ಕಿರಿದಾದಷ್ಟು ನಾಗರಿಕರಿಗೆ ಸುಗಮ ಸಂಚಾರ ಸಾಧ್ಯವಾಗುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಪಿ.ಬಿ.ರಸ್ತೆಯಲ್ಲಿಯೂ ಸಾಕಷ್ಟು ಅಪಘಾತ ಆಗಿವೆ. ರಸ್ತೆಗಳ ವಿಸ್ತರಣೆಗೆ ಇಲಾಖೆಯು ಹೆಚ್ಚಿನ ಆದ್ಯತೆ ನೀಡಬೇಕು. ಬಾಹ್ಯ ಒತ್ತಡಗಳ ನಡುವೆಯೂ ನಾಗರಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ರಸ್ತೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು. 

ಅನುದಾನ ಕೊರತೆ ಉಂಟಾಗಿ ಬಹುಪಾಲು ರಸ್ತೆ ವಿಸ್ತರಣೆ ಕಾರ್ಯ ಕುಂಟುತ್ತಾ ಸಾಗುತ್ತದೆ. ಪಿ.ಬಿ.ರಸ್ತೆಯ ವಿಸ್ತರಣೆಯೂ ಅನುದಾನವಿಲ್ಲದೇ ಸ್ಥಗಿತಗೊಳ್ಳಬಾರದು. ಲೋಕೋ ಪಯೋಗಿ ಸಚಿವರ ಜತೆ ಚರ್ಚೆ ನಡೆಸಿ, ಈ ರಸ್ತೆಯನ್ನು ಅಭಿವೃದ್ಧಿ
ಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಎಂ.ಜಿ.ಶ್ರೀಕಾಂತ, ಟಿ.ವಿ.ಸ್ಟೇಷನ್‌ ಕೆರೆಗೆ ಸೂಕ್ತವಾದ ತಡೆಗೋಡೆ ನಿರ್ಮಾಣ ಮಾಡಬೇಕು. ತಡೆಗೋಡೆ ಇಲ್ಲದೇ ಹಲವು ಅಪಘಾತಗಳು ಸಂಭವಿಸುತ್ತಿವೆ. ಈ ಕಾರ್ಯ ಆದಷ್ಟು ಬೇಗ ಜರುಗಬೇಕು ಎಂದು ಒತ್ತಾಯಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಎಸ್‌.ದೇವರಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಿ.ಚಿಕ್ಕರಾಯಪ್ಪ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ ಕುಮಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.