ADVERTISEMENT

ವಚನ: ವ್ಯಕ್ತಿತ್ವ ಬದಲಾಯಿಸುವ ಅಸ್ತ್ರ

ದೇವರ ದಾಸಿಮಯ್ಯ ಜಯಂತಿಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:10 IST
Last Updated 23 ಮಾರ್ಚ್ 2018, 10:10 IST

ದಾವಣಗೆರೆ: ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಉಂಟು ಮಾಡಿದ ವೈಚಾರಿಕ ಕ್ರಾಂತಿಯನ್ನು ಪವಾಡ ಎನ್ನಬಹುದು ಎಂದು ಸಾಹಿತಿ ಬಾಗೂರು ಆರ್‌. ನಾಗರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.‌

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರು ಕುರಿತು ಉಪನ್ಯಾಸ ನೀಡಿದರು.

ದೇವರ ದಾಸಿಮಯ್ಯ ಅವರು 11ನೇ ಶತಮಾನದಲ್ಲಿ ಯಾರ ಆಶ್ರಯವನ್ನೂ ಬಯಸದೇ ಸ್ವಾಭಿಮಾನದಿಂದ ಸಮಾಜದ ಸುಧಾರಣೆಗೆ ಸಾವಿರಾರು ವಚನಗಳನ್ನು ರಚಿಸುವ ಮೂಲಕ ವಚನ ದಾಸೋಹವನ್ನೇ ಉಣಬಡಿಸಿದ ಮಹಾನ್‌ ಪುರುಷರಾಗಿದ್ದರು ಎಂದು ಬಣ್ಣಿಸಿದರು.

ADVERTISEMENT

ಇತಿಹಾಸದಲ್ಲಿ ದೊರಕದ ಉತ್ತರ ಜಾನಪದದಲ್ಲಿ ಸಿಗುತ್ತದೆ. ಇತಿಹಾಸದ ತಾಯಿ ಜಾನಪದ. ದೇವರ ದಾಸಿಮಯ್ಯ ಅವರು ಬಸವಣ್ಣರಿಗಿಂತ ಪೂರ್ವಿಕರು ಎಂಬುದು ಬಸವಣ್ಣನವರ ಅನೇಕ ವಚನಗಳಲ್ಲಿ ಕಂಡುಬರುತ್ತದೆ ಎಂದರು.

ಸರ್ಕಾರ ದೇವರ ದಾಸಿಮಯ್ಯ ಅವರ ವಚನಗಳನ್ನು ಮುದ್ರಿಸಿ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರು, ‘ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಾಯಿಸಬಲ್ಲ ಪರಿಣಾಮಕಾರಿ ಅಸ್ತ್ರ ವಚನಗಳು. ವಚನಗಳನ್ನು ಕೇಳುವುದೆಂದರೆ ತಲೆಗೆ ಬಾಣ ಬಿಟ್ಟುಕೊಂಡಂತೆ. ನಮ್ಮ ಆಲೋಚನೆಗಳನ್ನೇ ಪರಿಣಾಮಕಾರಿಯಾಗಿ ಬದಲಾಯಿಸುವ ಶಕ್ತಿ ವಚನ ಸಾಹಿತ್ಯಕ್ಕಿದೆ’ ಎಂದರು.

‘ನಾವು ಎಲ್ಲರೂ ಒಪ್ಪುವಂತೆ ಮಾತನಾಡಲು ಯತ್ನಿಸುತ್ತೇವೆ. ಆದರೆ, ವಚನಕಾರರು ಯಾರು ಒಪ್ಪಲಿ, ಬಿಡಲಿ ತಮ್ಮ ಅನುಭಾವದಿಂದ ಬಂದ ನುಡಿಗಳನ್ನು ಸಮಾಜದ ಉದ್ಧಾರಕ್ಕಾಗಿ ಆಡಿದ್ದಾರೆ. ಸಮಾಜ ಸುಧಾರಣೆಗಾಗಿ ಕ್ರಾಂತಿಯ ಹೆಜ್ಜೆಗಳನ್ನು ಇಟ್ಟಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಅವರು, ‘ಎಲ್ಲಾ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆ ಅಡಿಯಲ್ಲಿ ಆಚರಿಸಿದರೆ ಉತ್ತಮ ಎನ್ನಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದರು.

ಸೂರ್ಯಕಾಂತ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿ ತನುಶ್ರೀ ಹೊಸಮನಿ ಭರತನಾಟ್ಯ ಪ್ರದರ್ಶಿಸಿದರು.

ಪಾಲಿಕೆ ಸದಸ್ಯೆ ಪುಷ್ಪಾ ಆರ್. ಜಗನ್ನಾಥ್, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ ಕೋಟಿ, ಜಿಲ್ಲಾ ಪದ್ಮಸಾಲಿ ಸಮಾಜದ ಅಧ್ಯಕ್ಷ ಪಿ.ಎಸ್. ನಾಗರಾಜ್, ಜಿಲ್ಲಾ ಪಟ್ಟಸಾಲಿ ಸಮಾಜದ ಅಧ್ಯಕ್ಷ ಡಿ.ಸಿ. ಶ್ರೀನಿವಾಸ ಚಿನ್ನಿಕಟ್ಟೆ, ಜಿಲ್ಲಾ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಆರ್.ಎಚ್. ನಾಗಭೂಷಣ್, ಜಿಲ್ಲಾ ಸ್ವಕುಳಿ ಸಮಾಜದ ಅಧ್ಯಕ್ಷ ಮೋಹನ, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ಸಫಾರೆ ಅವರೂ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಗುಬ್ಬಿ ವಂದಿಸಿದರು. ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.