ADVERTISEMENT

ವಾರ್ಡಿನಷ್ಟೇ ಸಮಸ್ಯೆಯೂ ದೊಡ್ಡದು

ಕುಡಿಯುವ ನೀರಿಗೆ ತತ್ವಾರ l ಖಾಲಿ ಜಾಗದಲ್ಲಿ ಕಸದ ರಾಶಿ l ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ನಿವಾಸಿಗಳು l ಚರಂಡಿ ವ್ಯವಸ್ಥೆ ಸರಿಯಾಗಿಲ್ಲ l ಉಪನಾಲೆಗೆ ಹರಿಯುತ್ತಿರುವ ಕೊಳಚೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:03 IST
Last Updated 7 ಮಾರ್ಚ್ 2017, 5:03 IST
ಪಿ.ಎಚ್‌. ಬಾಲಕೃಷ್ಣ
ದಾವಣಗೆರೆ: ಮಹಾನಗರ ಪಾಲಿಕೆಯ ಅತಿ ದೊಡ್ಡ ವಾರ್ಡ್‌ಗಳಲ್ಲಿ ಇದೂ ಒಂದು ಎಂಬುದು 41ನೇ ವಾರ್ಡ್‌ಗೆ ಹೆಮ್ಮೆಯ ಜೊತೆಗೆ ಸಮಸ್ಯೆಯೂ ಆಗಿದೆ. ಒಂದು ಕಡೆ ಅಭಿವೃದ್ಧಿಯಾದರೆ, ಇನ್ನೊಂದು ಕಡೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ವಾರ್ಡ್‌ ಅನ್ನು ವಿಭ ಜಿಸಿದರಷ್ಟೇ ಸಮಸ್ಯೆಗಳು ಕಡಿಮೆಯಾಗಬಹುದು ಎಂಬ ಮಾತುಗಳು ಇಲ್ಲಿ ಸುತ್ತಾಡಿದಾಗ ಕೇಳಿಬರುತ್ತಿವೆ. 
 
ಸುಮಾರು 15 ಸಾವಿರ ಮನೆಗಳು, ಅಂದಾಜು 40 ಸಾವಿರ ಜನಸಂಖ್ಯೆ ಇರುವ ಈ ವಾರ್ಡ್‌ ಬಾಡಾ ಕ್ರಾಸ್‌, ಆಂಜನೇಯ ಕಾಟನ್‌ ಮಿಲ್‌, ದೋಬಿ ಘಾಟ್‌, ಲೋಕಿಕೆರೆ ರಸ್ತೆ, ಸಿದ್ನಳ್ಳಿ ರಸ್ತೆಯವರೆಗೆ ಹರಡಿಕೊಂಡಿದೆ.

ವಿಮಾನ್‌ ಮಟ್ಟಿ, ಸುಬ್ರಹ್ಮಣ್ಯ ನಗರ, ಕೈಗಾರಿಕಾ ವಲಯ, ಬುದ್ಧ ಬಸವ ಭೀಮನಗರ, ಬೆಂಕಿನಗರ, ಎಸ್‌ಒಜಿ (ಸ್ಪೆಷಲ್‌ವರ್ಕರ್‌ ಓರಿಯಂಟೆಡ್‌ ಗ್ರೂಪ್‌) ಕಾಲೊನಿ, ಆಂಜನೇಯ ಕಾಟನ್‌ ಮಿಲ್‌ ಕ್ವಾರ್ಟರ್ಸ್‌ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಗೆ ಒಳಪಟ್ಟಿವೆ. ಸುಮಾರು 40–45 ವರ್ಷದ ಹಿಂದೆ ರಾಜ್ಯದ ವಿವಿಧ ಕಡೆಗಳಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಬಂದಿದ್ದ ವೃತ್ತಿಪರ ಕಾರ್ಮಿಕರು ಈಗ ಇಲ್ಲಿನವರೇ ಆಗಿದ್ದಾರೆ. ಎ, ಬಿ, ಸಿ ಎಂದು ಮೂರು ಬ್ಲಾಕ್‌ಗಳನ್ನು ಹೊಂದಿರುವ ಎಸ್‌ಒಜಿ ಕಾಲೊನಿಯಲ್ಲಿ ಒಂದೂವರೆ ಸಾವಿರ ಮನೆಗಳಿವೆ. ಇಲ್ಲಿನ ಬಹುತೇಕ ಮನೆಗಳ ಮಹಿಳೆ ಯರು ಕೆಲಸಕ್ಕೆ ಹೋಗುತ್ತಿದ್ದಾರೆ. ಹುಡುಗರು ಕೆಲಸ ಹುಡುಕಿ ಬೆಂಗಳೂರಿನಂಥ ನಗರಗಳ ಕಡೆಗೆ ಮುಖ ಮಾಡುತ್ತಿದ್ದಾರೆ.
 
ಕಾಲುವೆಗೆ ಕೊಳಚೆ: ಭದ್ರಾ ಜಲಾಶ ಯದ ಕಾಲುವೆಯಿಂದ ಈ ಪ್ರದೇಶಗಳಲ್ಲಿ ಉಪನಾಲೆ ಹಾದು ಹೋಗಿದೆ. ಈ ನಾಲೆಯಲ್ಲಿ ನೀರಿನ ಜತೆ ಈ ಪ್ರದೇಶದ ಕೊಳಚೆ ನೀರೂ ಹರಿಯು ತ್ತಿದೆ. ಬೆಂಕಿನಗರ ಸೇರಿದಂತೆ ಸುತ್ತಲಿನ ಮನೆಗಳ ದ್ರವ ತ್ಯಾಜ್ಯ ನಾಲೆ ಸೇರುತ್ತಿದೆ. ಜೊತೆಗೆ ಪೆಟ್ರೋಲ್‌ ಬಂಕ್‌, ಅಕ್ಕಿ ಮಿಲ್‌ಗಳ ಕೊಳಚೆ ನೀರನ್ನೂ ನಾಲೆಗೆ ಹರಿಬಿಡಲಾಗುತ್ತಿದೆ. ಇದು ನಾಲೆಯ ಮೂಲಕ ಆವರಗೆರೆ ಕೆರೆ ಸೇರುತ್ತಿದೆ.
 
ಶಾಲೆ ಬಳಿ ಕಸ: ಕಸ ಒಯ್ಯಲು ಟ್ರ್ಯಾಕ್ಟರ್‌ ಬರುತ್ತಿದ್ದರೂ ಜನರು ಖಾಲಿ ಜಾಗದಲ್ಲಿ ಕಸ ಎಸೆಯುತ್ತಿದ್ದಾರೆ. ಎಸ್‌ಒಜಿ ಕಾಲೊನಿ ಬಳಿಯ ನಿಸರ್ಗ ಶಾಲೆಯ ಸುತ್ತಮುತ್ತ ಕಸದ ರಾಶಿ ಬಿದ್ದಿದೆ. ಹೈಟೆಕ್‌ ಆಸ್ಪತ್ರೆಯ ಸುತ್ತಮುತ್ತಲೂ ಇದೇ ರೀತಿ ಕಸ ಇದೆ. ಮೊದಲು ಕಸದ ತೊಟ್ಟಿಗಳು ಇದ್ದವು. ಪ್ರತಿದಿನ ಕಸ ಸಂಗ್ರಹಿಸುವ ವ್ಯವಸ್ಥೆ ಬಂದ ಬಳಿಕ ತೊಟ್ಟಿಗಳನ್ನು ತೆಗೆಸಲಾಗಿದೆ. ಆದರೆ, ಖಾಲಿ ಜಾಗದಲ್ಲಿ ಕಸ ಬಂದು ಬೀಳುವುದು ನಿಂತಿಲ್ಲ. 
 
ಕುಡಿಯುವ ನೀರಿನ ಸಮಸ್ಯೆ: ಕುಡಿ ಯುವ ನೀರು 10 ದಿನಗಳಿಗೆ ಒಮ್ಮೆ ಬರುತ್ತಿದೆ. ನೀರು ಬರುವ ದಿನ ಕೊಡ ಗಳ ಸಾಲು ಇರುತ್ತವೆ. ಎಲ್ಲರಿಗೂ ಸಾಕಾ ಗುವಷ್ಟು ನೀರು ಸಿಗುವುದಿಲ್ಲ. ಕೊಳವೆ ಬಾವಿ ನೀರನ್ನೇ ಆಶ್ರಯಿಸಿಕೊಳ್ಳಬೇ ಕಾದ ಅನಿವಾರ್ಯತೆ ಇದೆ. ಆಂಜ ನೇಯ ಕಾಟನ್‌ ಮಿಲ್‌ ಕ್ವಾರ್ಟರ್ಸ್‌ ಸೇರಿ ಎಲ್ಲ ಕಡೆ ಇದೇ ಸಮಸ್ಯೆ. ಈ ವಾರ್ಡ್‌ಗೆ ಮೂರು ಶುದ್ಧ ಕುಡಿಯುವ ನೀರಿನ ಘಟಕ ಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಒಂದಕ್ಕೆ ಮಾತ್ರ ಅನುಮೋದನೆ ಸಿಕ್ಕಿದೆ. ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊ ಳ್ಳುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಬರಲಿದೆ ಎಂಬ ನಿರೀಕ್ಷೆ ಇಟ್ಟು ಕೊಂಡಿದ್ದ ಆಂಜನೇಯ ಕಾಟನ್‌ ಮಿಲ್‌ ಕ್ವಾರ್ಟರ್ಸ್‌ ಮತ್ತು ಎಸ್‌ಒಜಿ ಕಾಲೊನಿ ನಿವಾಸಿಗಳಿಗೆ ನಿರಾಸೆಯಾಗಿದೆ. 
 
ಸಿಗದ ಹಕ್ಕುಪತ್ರ: ಸುಬ್ರಹ್ಮಣ್ಯ ನಗರದಲ್ಲಿ ಕಳೆದ 40 ವರ್ಷಗಳಿಂದ ವಾಸುತ್ತಿರು ವವರಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ. ಸಿಗುವ ಲಕ್ಷಣವೂ ಕಾಣಿಸುತ್ತಿಲ್ಲ. ಗೋಮಾಳಕ್ಕೆ ಸೇರಿದ ಈ ಪ್ರದೇಶದಲ್ಲಿ 70 ಮನೆಗಳಿದ್ದವು. ರಸ್ತೆ ವಿಸ್ತರಣೆ ಮಾಡುವಾಗ 30 ಮನೆಗಳು ಹೋಗಿವೆ. ಈಗ 40 ಮನೆಗಳಿವೆ. ಹಕ್ಕುಪತ್ರ ಸಿಗ ಬಹುದು ಎಂದು ಆಸೆ ಇಟ್ಟುಕೊಂಡು ಇಲ್ಲಿನ ಜನರು ಬದುಕುತ್ತಿದ್ದಾರೆ. ಇತರ ಕಡೆಗಳಲ್ಲೂ ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅವರಿಗೆ ಅತಿ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆಯಾಗ ಲಿದೆ ಎನ್ನಲಾಗುತ್ತಿದೆ. 

ರಸ್ತೆ, ಚರಂಡಿ, ಪಾರ್ಕ್‌ ಸಮಸ್ಯೆ: ಬಹು ತೇಕ ಒಳರಸ್ತೆಗಳು ಅಭಿವೃದ್ಧಿಯಾಗಿ ದ್ದರೂ, ಹೈಟೆಕ್‌ ಆಸ್ಪತ್ರೆ– ಪಾಮನಹಳ್ಳಿ ಮುಖ್ಯ ರಸ್ತೆಯೇ ಅಭಿವೃದ್ಧಿಯಾಗಿಲ್ಲ. ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ. 
 
ವಾರ್ಡ್‌ ವ್ಯಾಪ್ತಿಯಲ್ಲಿ ನಾಲ್ಕೈದು ಉದ್ಯಾನಗಳಿವೆ. ಆವರಣ ಗೋಡೆ ಬಿಟ್ಟರೆ ಮತ್ತೇನೂ ಇಲ್ಲ. ಪಾರ್ಕ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯಾಗಬೇ ಕಿದೆ. ಇಕ್ಕಟ್ಟಾದ ಚರಂಡಿಗಳು ಮನೆಗಳ ನಡುವೆಯೇ ಹಾದುಹೋಗುತ್ತಿವೆ. ಚರಂಡಿಯಲ್ಲಿ ಕೊಳಚೆ ಹರಿದು ಹೋಗದೆ ತುಂಬಿಹೋಗಿರುವುದರಿಂದ ವಾಸನೆ ಜೊತೆ  ಸೊಳ್ಳೆಗಳು ವಿಪರೀತ ವಾಗಿವೆ. ವಿಮಾನ್‌ಮಟ್ಟಿ ಜನರಿಗೆ ಚರಂಡಿಯೇ ದೊಡ್ಡ ಸಮಸ್ಯೆಯಾಗಿದೆ. ಚರಂಡಿ ಅಗಲ ಮಾಡಲೂ ಆಗದ ಸ್ಥಿತಿ ಇದೆ. ಈ ಚರಂಡಿ ಮುಚ್ಚಿ ಪ್ರತ್ಯೇಕ ಚರಂಡಿ ಮಾಡಿದರಷ್ಟೇ ಸಮಸ್ಯೆ ಬಗೆಹರಿಯಲಿದೆ.
 
ಆಸ್ಪತ್ರೆ, ಬ್ಯಾಂಕ್‌ಗಳಿಲ್ಲ: ಬಹುತೇಕ ಕಾರ್ಮಿಕರೇ ನಿವಾಸಿಗಳಾಗಿರುವ ಈ ವಾರ್ಡ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಆರೋಗ್ಯ ಸಮಸ್ಯೆ ಉಂಟಾದರೆ ನಗರದ ಸಿ.ಜಿ. ಆಸ್ಪತ್ರೆಗೆ ಬರಬೇಕು. ಇಲ್ಲವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚ ಭರಿಸ ಬೇಕು. ಇಲ್ಲಿ ಯಾವುದೇ ಬ್ಯಾಂಕ್‌ಗಳ ಶಾಖೆ ಇಲ್ಲ. ಉಳಿತಾಯ ಮಾಡಲು ಬಯಸುವವರು ನಗರಕ್ಕೇ ಬರಬೇಕು ಎಂದು ಬಟ್ಟೆಯಂಗಡಿ ಜ್ಯೋತಿ ಹೇಳುತ್ತಾರೆ.
 
ಹಲವು ಪ್ರಮುಖ ಸಮಸ್ಯೆಗಳ ಹೊರತಾಗಿಯೂ ವೇಗವಾಗಿ ಅಭಿವೃದ್ಧಿ ಆಗುತ್ತಿರುವುದು ಈ ವಾರ್ಡ್‌ನ ಸಕಾರಾತ್ಮಕ ಅಂಶವಾಗಿದೆ. ‘ಸಮಸ್ಯೆ ಇದೆ ಅಂದರೆ ವಾರ್ಡ್‌ನ ಸದಸ್ಯರು ಓಡಿ ಬರುತ್ತಾರೆ. ಅವ ರಿಂದಾದ ಪ್ರಯತ್ನ ಮಾಡುತ್ತಾರೆ. ಆದರೆ ವಾರ್ಡ್‌ ದೊಡ್ಡದಾಗಿರುವುದ ರಿಂದ ಅನುದಾನ ಸಾಕಾಗುತ್ತಿಲ್ಲ. ವಾರ್ಡ್‌ ಸಣ್ಣದಾದರೆ ಸಮಸ್ಯೆ ಪರಿಹರಿ ಸುವುದು ಸುಲಭವಾಗಲಿದೆ’ ಎಂಬುದು ಪೇಂಟರ್‌ ಲಕ್ಷ್ಮಣ್ ಅಭಿಪ್ರಾಯ. 
 
ವಾರ್ಡ್‌ ಸದಸ್ಯರು ಏನಂತಾರೆ ?
ಸುವ್ಯವಸ್ಥಿತ ಒಳಚರಂಡಿ  ವ್ಯವಸ್ಥೆ ಮಾಡಿದ್ದೇವೆ.  ಆಂಜನೇಯ ಕಾಟನ್‌ ಮಿಲ್‌  ಕ್ವಾರ್ಟರ್ಸ್‌ ಹತ್ತಿರ ಸ್ವಲ್ಪ  ಕೆಲಸ ಬಾಕಿ ಇದೆ. ಒಳ  ರಸ್ತೆಗಳನ್ನು ಅಭಿವೃದ್ಧಿ  ಮಾಡಲಾಗಿದೆ. ಪಾಮನಹಳ್ಳಿ  ರಸ್ತೆ ಮತ್ತು ಶಶಿ ಸೋಪ್‌ ಫ್ಯಾಕ್ಟರಿ ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ₹ 5 ಕೋಟಿ ಮೀಸಲಿಡಲಾಗಿದೆ. ಅದು ಅನುಷ್ಠಾನಗೊಂಡರೆ ರಸ್ತೆ ಸಮಸ್ಯೆ ನಿವಾರಣೆಯಾಗಲಿದೆ.

ವಾರ್ಡ್‌ ಎರಡು ವಿಭಾಗ ಮಾಡು ವಂತೆ ಚುನಾವಣೆ ಆಯೋಗಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಹೈಟೆಕ್‌ ಆಸ್ಪತ್ರೆ, ಎಸ್‌ಒಜಿ ಕಾಲೊನಿ, ಆಂಜನೇಯ  ಕಾಟನ್‌ ಮಿಲ್‌ವರೆಗೆ  ಒಂದು ಭಾಗ, ಲೋಕಿಕೆರೆ ರಸ್ತೆಯಿಂದ ಸಿದ್ನಳ್ಳಿ ರಸ್ತೆ ವರೆಗೆ ಇನ್ನೊಂದು ಭಾಗವ ನ್ನಾಗಿ ಮಾಡಲಾ ಗಿದೆ. ಇದು ಅನುಷ್ಠಾನಕ್ಕೆ ಬಂದರೆ ವಾರ್ಡ್‌ ಅಭಿವೃದ್ಧಿ ಸುಲಭ.  ಬಸ್‌ ನಿಲ್ದಾಣ, ತರಕಾರಿ ಮಾರುಕಟ್ಟೆ ಮಾಡಿ ಮಿನಿ ನಗರವನ್ನಾಗಿ ಮಾಡುವ ಯೋಜನೆ ಇದೆ.

ಉದ್ಯಾನ ಅಭಿವೃದ್ಧಿ ಗೊಳಿಸಲು ಉದ್ದೇಶಿಸಿದ್ದೇನೆ. ಕೊಳಚೆ ನೀರು ಸೇರುವುದನ್ನು ತಡೆಯಲು ಸುಮಾರು 3 ಕಿ.ಮೀ. ಕಾಲುವೆ ಅಭಿವೃದ್ಧಿಯಾಗ ಬೇಕು. ಇದಕ್ಕೆ ಕನಿಷ್ಠ ₹ 4 ಕೋಟಿ ಅನುದಾನ ಅಗತ್ಯವಿದೆ. ಕುಡಿಯುವ ನೀರಿಗಾಗಿ ಇನ್ನೂ 10 ಕೊಳವೆ ಬಾವಿ ಕೊರೆಸಲಾಗುವುದು.
– ಶೈಲಾ ನಾಗರಾಜ್‌, 41ನೇ ವಾರ್ಡ್‌ ಸದಸ್ಯೆ
 
ನಾವು ಪ್ರಜೆಗಳಲ್ವೆ ?
ಸರ್ಕಾರಕ್ಕೆ ನಾವೂ ಪ್ರಜೆಗಳು ಎಂಬುದೇ ಗೊತ್ತಿಲ್ಲ. 40 ವರ್ಷ ದಿಂದ ವಾಸಿಸುತ್ತಿದ್ದರೂ ಹಕ್ಕು ಪತ್ರ ಇಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಇಲ್ಲಿಗೆ ನೀಡಿದ ಅನುದಾನವನ್ನೂ ಬೇರೆ ಕಡೆ ಬಳಸುತ್ತಾರೆ ಎಂದು ಸುಬ್ರಹ್ಮಣ್ಯ ನಗರ ನಿವಾಸಿಗಳಾದ ಜೆ.ದುರ್ಗಪ್ಪ, ಗಣೇಶ್‌, ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
* ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ಎಲ್ಲ ಕಡೆ ಇದೆ. ಕೊಳವೆಬಾವಿ ನೀರು ಬರುತ್ತಿದೆ; ಆದರೆ, ಕುಡಿಯುವ ನೀರು ಸರಿಯಾಗಿ ಸಿಗದಿರುವುದೇ ಸಮಸ್ಯೆ. ಹಿಂದೆ ನೀರೆ ಬರುತ್ತಿರಲಿಲ್ಲ. ಈಗ ಪೂರೈಕೆ ವ್ಯವಸ್ಥೆ ಸರಿ ಆಗುವ ಹೊತ್ತಿಗೆ ನೀರು ಬತ್ತಿದೆ.
– ನಾಗರಾಜ್‌, ವಿಮಾನ್‌ ಮಟ್ಟಿ ಪ್ರದೇಶ

* 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಹೋರಾಟ ಮಾಡಿದರೂ, ಗೋಮಾಳ ಪ್ರದೇಶ ಎಂಬ ಕಾರಣ ನೀಡಿ ಹಕ್ಕುಪತ್ರ ನೀಡುತ್ತಿಲ್ಲ.
– ಶಿವಕುಮಾರ್‌, ಸುಬ್ರಹ್ಮಣ್ಯ ನಗರ

* ಟ್ಯಾಂಕ್‌ ಇದೆ. ಆದರೆ, ಕುಡಿಯುವ ನೀರಿಲ್ಲ. ಕೊಳವೆಬಾವಿಯಲ್ಲಿ ಮಣ್ಣಿನೊಂದಿಗೆ ನೀರು ಬರುತ್ತಿದೆ. ಮೊದಲು ನೀರಿನ ಸಮಸ್ಯೆ ನಿವಾರಿಸಬೇಕು.
– ಮಹಾದೇವನ್‌, ಬಸವ ಬುದ್ಧ ಭೀಮನಗರ

* ಆಶ್ರಯ ಮನೆ ಪಡೆದ ಕೆಲವರು ಬಾಡಿಗೆಗೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಮಾರಾಟ ಮಾಡುತ್ತಿ ದ್ದಾರೆ. 15 ವರ್ಷಗಳಿಂದ ಪ್ರಯತ್ನಿಸಿದರೂ ನಮಗೆ ಮನೆ ಸಿಕ್ಕಿಲ್ಲ. ನಿವೇಶನ ತೋರಿಸಿದರೆ ನಾವೇ ಗುಡಿಸಲು ಕಟ್ಟಿ ಕೊಂಡು ನೆಲೆಸುತ್ತೇವೆ.
– ನಾಗವೇಣಿ, ಎಸ್‌ಒಜಿ  ಕಾಲೊನಿ

* ಸಮುದಾಯ ಭವನ ಇಲ್ಲದಿರುವುದರಿಂದ ಮನೆಯ ಎದುರೇ ಕಾರ್ಯಕ್ರಮ ಮಾಡಬೇಕಾಗಿದೆ. ಮದುವೆಯಂತಹ ಸಮಾರಂಭವನ್ನು ನಗರದ ಛತ್ರಗಳಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ.
– ಕಾಳಮ್ಮ, ಎಸ್‌ಒಜಿ ಕಾಲೊನಿ

* ವಿದ್ಯೆ ಇಲ್ಲದ ಮಹಿಳೆಯರಿಗೆ ಅಕ್ಷರ ಕಲಿಸಲು ಜಾಗವಿಲ್ಲ. ಶಾಲೆಯಲ್ಲಿ ಸಂಜೆ ಹೊತ್ತು ಕೆಲ ದಿನ ಅವಕಾಶ ನೀಡಿದರು. ಈಗ ನೀಡುತ್ತಿಲ್ಲ. ಮತ್ತೆ ಅಕ್ಷರ ಕಲಿಸಲು ಅವಕಾಶ ಕಲ್ಪಿಸಿಕೊಡಬೇಕು.
–ಶಂಸದ್‌ಬೇಗಂ, ಎಸ್‌ಒಜಿ ಕಾಲೊನಿ

ADVERTISEMENT
* ಎಸ್‌ಒಜಿ ಕಾಲೊನಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿದರೆ ಇನ್ನೂ 100 ಮನೆಗಳನ್ನು ನೀಡಬಹುದು. ಈ ವಾರ್ಡ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ.
–ಹದಡಿ ವೆಂಕಟೇಶ್‌, ಎಸ್‌ಒಜಿ ಕಾಲೊನಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.