ADVERTISEMENT

ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 9:43 IST
Last Updated 12 ಡಿಸೆಂಬರ್ 2017, 9:43 IST

ನ್ಯಾಮತಿ: ‘ವೀರಶೈವ ಲಿಂಗಾಯತ ಧರ್ಮವು ಸನಾತನವಾಗಿದ್ದು, ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕು’ ಎಂದು ಕೇದಾರ ಪೀಠದ ಭೀಮಾ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು. ಗ್ರಾಮದಲ್ಲಿ ಭಾನುವಾರ ಅಡ್ಡಪಲ್ಲಕ್ಕಿ ಉತ್ಸವ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.

ವೀರಶೈವ ಧರ್ಮ ಸನಾತನ ಧರ್ಮ. ವೀರಶೈವ ಮತ್ತು ಲಿಂಗಾಯತ ಎನ್ನುವುದು ಒಂದೇ. ವೇದ, ಆಗಮ ಉಪನಿಷತ್‌ಗಳಿಂದ ಕೂಡಿದ್ದಾಗಿದೆ. ಪಂಚಾಚಾರ್ಯರು ಅಗಸ್ತ್ಯ ಮುನಿಯವರಿಗೆ ಶಿವತತ್ವ ಉಪದೇಶ ಮಾಡಿದ ಸಂಗ್ರಹ ಗ್ರಂಥವೇ ವೀರಶೈವ ಧರ್ಮ ಗ್ರಂಥ ‘ಸಿದ್ಧಾಂತ ಶಿಖಾಮಣಿ’ ಎಂದರು.

ಪ್ರಧಾನ ಮಂತ್ರಿ ಮೋದಿ ಅವರು ಕೇದಾರ ಪೀಠಕ್ಕೆ ಬಂದಾಗ ಜೈನ, ಬೌದ್ಧ ಧರ್ಮಗಳಿಗೆ ನೀಡಿದ ರೀತಿಯಲ್ಲಿಯೇ ವೀರಶೈವ–ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಲು ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಂಸದ ಜಿ.ಎಂ. ಸಿದ್ದೇಶ್ವರ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಕೀಯದಲ್ಲಿ ಧರ್ಮ ಬೆರೆಯಬಾರದು, ನಾವು ರಾಜಕರಣದಲ್ಲಿದ್ದರೂ ನಮಗೆ ಧರ್ಮವೇ ಮುಖ್ಯ ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಧರ್ಮದಿಂದ ಭ್ರಷ್ಟಾಚಾರ ಅಳಿಯಬೇಕಾಗಿದೆ, ಆಗಾಗ ಇಂತಹ ಧಾರ್ಮಿಕ ಸಭೆಗಳು ನಡೆದು ಜಾಗೃತಿ ಉಂಟಾದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ‘ನ್ಯಾಮತಿ ನನಗೆ ರಾಜಕೀಯ ಜೀವ ಕೊಟ್ಟ ಊರು. ಇದರ ಋಣ ತೀರಿಸಲು ಜಗದೀಶ ಶೆಟ್ಟರ ಅವಧಿಯಲ್ಲಿ ನ್ಯಾಮತಿಯನ್ನು ತಾಲ್ಲೂಕು ಕೇಂದ್ರ ಮಾಡಿ ಘೋಷಣೆ ಮಾಡಿಸಿದೆ’ ಎಂದರು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಎಂ. ಶಿವಶಂಕರಯ್ಯ ಮಾತನಾಡಿದರು.
ಹಲಗೇರಿ ವೀರೇಶ ಸ್ವಾಗತಿಸಿದರು, ಕಂಬಾಳಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.