ADVERTISEMENT

‘ವೈಯಕ್ತಿಕ ಸೌಲಭ್ಯ ಒದಗಿಸಲು ಆದ್ಯತೆ ಕೊಡಿ’

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 4:43 IST
Last Updated 28 ಮಾರ್ಚ್ 2017, 4:43 IST
ಚನ್ನಗಿರಿ: ‘2016–17 ನೇ ಸಾಲಿನ 14 ನೇ ಹಣಕಾಸು ಯೋಜನೆ ಅಡಿ ₹ 81.83 ಲಕ್ಷ ಹಾಗೂ ಎಸ್ಎಫ್‌ಸಿ ಮುಕ್ತನಿಧಿ ಯೋಜನೆ ಅಡಿ ₹ 97.83 ಲಕ್ಷ ಅನುದಾನ ಪುರಸಭೆಗೆ ಬರಲಿದ್ದು, ಈ ಅನುದಾನದಲ್ಲಿ ಎಲ್ಲಾ ವಾರ್ಡ್‌ಗಳ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ವೈಯಕ್ತಿಕ ಸೌಲಭ್ಯ ನೀಡಲು ಅಗತ್ಯವಾದ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಿಕೊಡಿ’ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಹಾಲೇಶ್ ಮುಖ್ಯಾಧಿಕಾರಿಗೆ ಸೂಚಿಸಿದರು.
 
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
‘2016–17ನೇ ಸಾಲಿನ ಎಸ್ಎಫ್‌ಸಿ ಮುಕ್ತನಿಧಿ ಯೋಜನೆ ಅಡಿ ₹ 97.83 ಲಕ್ಷ ಅನುದಾನ ಜೂನ್‌ ತಿಂಗಳಲ್ಲಿ ಬರುವ ನಿರೀಕ್ಷೆ ಇದ್ದು, ಮುಂದುವರಿದ ಕಾಮಗಾರಿಗಳಿಗೆ ₹ 35 ಲಕ್ಷ ಮೀಸಲಿಟ್ಟಿದ್ದು, ಇದನ್ನು ₹ 45 ಲಕ್ಷಕ್ಕೆ ಹೆಚ್ಚಿಸಲಾಗುವುದು.

ಶೇ 24.10ರ ಯೋಜನೆಗಳಿಗೆ ₹ 15.14 ಲಕ್ಷ. ಶೇ 7.25ರ ಯೋಜನೆಗಳಿಗೆ ₹ 4.55 ಲಕ್ಷ ಶೇ 3ರ ಯೋಜನೆಗಳಿಗೆ ₹ 1.88 ಲಕ್ಷ, ವೇತನ ಅನುದಾನಕ್ಕೆ ಕೊರತೆ ಬೀಳುವ ಹಣ ₹ 14.96 ಲಕ್ಷ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರ ವೇತನ ಪಾವತಿಗಾಗಿ ₹ 25.30 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. 14 ನೇ ಹಣಕಾಸು ಯೋಜನೆ ಅಡಿ ಎಲ್ಲಾ ವಾರ್ಡ್‌ಗಳಿಗೂ ₹ 2 ಲಕ್ಷ ಅನುದಾನ ನೀಡಲಾಗುವುದು. ವೈಯಕ್ತಿಕ ಸೌಲಭ್ಯದ ಅಡಿ ಹೊಲಿಗೆ ಯಂತ್ರಗಳನ್ನು ನೀಡಬೇಕೆಂಬುದು ಸದಸ್ಯರ ಒತ್ತಾಸೆಯಾಗಿದೆ’ ಎಂದು ತಿಳಿಸಿದರು.
 
‘ಸಂತೆ ಮೈದಾನದಲ್ಲಿ ಮಳೆಗಾಲದ ಸಮಯದಲ್ಲಿ ಮಳೆಯ ನೀರು ನಿಂತು ಸಂತೆಗೆ ಬಂದ ಜನರು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡುವುದು ಅಗತ್ಯವಾಗಿ ಆಗಬೇಕಾಗಿದೆ.
 
ಅದೇ ರೀತಿ ಯುಗಾದಿ ಹಬ್ಬ ಬಂದಿದ್ದು, ಈ ಸಮಯದಲ್ಲಿ ಪಟ್ಟಣದಲ್ಲಿನ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
 
ನೀರನ್ನು ಸಮರ್ಪಕವಾಗಿ ಪೂರೈಸದಿದ್ದರೆ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಸದಸ್ಯರಾದ ಕೆ.ಆರ್. ಮಾಲತೇಶ್, ಮಂಜುನಾಥ್, ಅಸ್ಲಾಂಬೇಗ್, ಎಚ್‌.ಬಿ.ರುದ್ರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ. ರವಿಕುಮಾರ್ ಒತ್ತಾಯಪಡಿಸಿದರು.
 
‘ಕಳೆದ ಒಂದು ವರ್ಷದಿಂದ ಯಾವುದೇ ಕಾಮಗಾರಿ ನಡೆದಿರುವು ದಿಲ್ಲ. ಕೇವಲ ಅನುದಾನ ಬರುತ್ತದೆ ಎಂಬ ಭರವಸೆ ನೀಡುತ್ತಿದ್ದೀರಿ. ಸಭೆಗೆ ಬಂದು ನಿಮ್ಮ ಸಿದ್ಧ ಉತ್ತರವನ್ನು ಕೇಳಿ ಹೋಗುವಂತಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಮಗೆ ಭರವಸೆ ಬೇಡ. ಮೊದಲು ವಾರ್ಡ್‌ಗಳಲ್ಲಿ ಕಾಮಗಾರಿಗಳನ್ನು ಮಾಡುವ ಕಡೆಗೆ ಗಮನಹರಿಸಬೇಕು’ ಎಂದು ಹೇಳಿದರು.
 
ಉಪಾಧ್ಯಕ್ಷೆ ಸುನೀತಾ ಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ. ರವಿಕುಮಾರ್, ಮುಖ್ಯಾಧಿಕಾರಿ ಎನ್. ನಾಗೇಂದ್ರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.