ADVERTISEMENT

ಷಾ, ಮೋದಿ ಆಟ ರಾಜ್ಯದಲ್ಲಿ ನಡೆಯಲ್ಲ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 5:23 IST
Last Updated 19 ನವೆಂಬರ್ 2017, 5:23 IST
ಚನ್ನಗಿರಿಯಲ್ಲಿ ಶನಿವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಚನ್ನಗಿರಿಯಲ್ಲಿ ಶನಿವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು   

ದಾವಣಗೆರೆ: ‘ಜಾತಿ, ಧರ್ಮಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡುವ ನರೇಂದ್ರ ಮೋದಿ, ಅಮಿತ್ ಷಾ ಆಟ ಕರ್ನಾಟಕದಲ್ಲಿ ನಡೆಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚನ್ನಗಿರಿಯ ಸರ್ಕಾರಿ ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇದು ಬಸವಣ್ಣ, ಕನಕ ಹಾಗೂ ಕುವೆಂಪು ಅವರ ನಾಡು. ಶರಣರು, ಸಂತರು, ಸೂಫಿಗಳ ಭೂಮಿ. ಇಲ್ಲಿ ಜಾದೂ ಮಾಡಲು ಆಗುವುದಿಲ್ಲ. ರಾಜಕೀಯ ಪ್ರಜ್ಞಾವಂತಿಕೆ ಇರುವ ಜನ ಇಲ್ಲಿದ್ದಾರೆ. ಜಾತಿವಾದಿಗಳನ್ನು ಬೆಂಬಲಿಸುವುದಿಲ್ಲ;  ಜಾತ್ಯತೀತರನ್ನು ಬೆಂಬಲಿಸುತ್ತಾರೆ ಎಂದರು.

ಕರ್ನಾಟಕದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಜೈಲಿಗೆ ಹೋದ ಉದಾಹರಣೆ ಇಲ್ಲ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿಯದ್ದು ಪರಿವರ್ತನೆ ಯಾತ್ರೆ ಅಲ್ಲ; ಅದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಪಶ್ಚಾತ್ತಾಪದ ಯಾತ್ರೆ. ಇವರ ಯಾತ್ರೆ ಸಂಸತ್‌ ಭವನಕ್ಕೆ ಹೋಗಿ ರೈತರ ಸಾಲ ಮನ್ನಾಕ್ಕೆ ಒತ್ತಡ ಹಾಕಲಿ ಎಂದರು.

‘ಹಿಂದೆ ಮನಮೋಹನ್ ಸಿಂಗ್ ‌ನೇತೃತ್ವದ ಕಾಂಗ್ರೆಸ್ ಸರ್ಕಾರ ₹ 73 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ನಾವು ₹ 8,165 ಕೋಟಿ ರೈತರ ಸಾಲ ಮನ್ನಾ ಮಾಡಿರುವುದನ್ನು ಬಿಜೆಪಿ ರಾಜ್ಯ ಉಸ್ತುವಾರಿ ಜಾವಡೇಕರ್ ರೈತರಿಗೆ ಲಾಲಿಪಪ್ಪು ನೀಡಿದ್ದಾರೆ ಎಂದಿದ್ದಾರೆ, ನೀವು ಕೂಡ ಸಾಲ ಮನ್ನಾ ಮಾಡಿ ಲಾಲಿಪಪ್ಪು ಕೊಡಿ’ ಎಂದು ಛೇಡಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ವಿಧಾನ ಪರಿಷತ್‌ನಲ್ಲಿ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿದಾಗ ನಾವು ನೋಟ್ ಪ್ರಿಂಟ್ ಮಾಡುವ ಮಷಿನ್ ಇಟ್ಟುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು. ಈಚೆಗೆ ನಾನೇ ದೆಹಲಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ದಾಗ ಬಿಜೆಪಿ ಗಿರಾಕಿಗಳು ಒಬ್ಬರೂ ತುಟಿ ಬಿಚ್ಚಲಿಲ್ಲ. ಇದು ಸತ್ಯ; ಪ್ರಚಾರ ಅಥವಾ ಟೀಕೆಗಾಗಿ ಈ ಮಾತನ್ನು ಹೇಳುತ್ತಿಲ್ಲ’ ಎಂದು ಹೇಳಿದರು.

ದೇಶದ 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಎಲ್ಲಿಯೂ ಉಚಿತವಾಗಿ ಏಳು ಕೆ.ಜಿ. ಅಕ್ಕಿ ಕೊಡುತ್ತಿಲ್ಲ ಎಂದ ಅವರು, ನರೇಂದ್ರ ಮೋದಿ ಅವರ ಅಚ್ಚೇದಿನ್ ಯಾರಿಗೆ ಬಂದಿದೆ? ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಬಂದಿಲ್ಲ. ಅಂಬಾನಿ, ಅದಾನಿ, ರಾಮ್ ದೇವ್, ಷಾ ಪುತ್ರ ಜೈ ಷಾಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರೇ ಟಿಪ್ಪು ದೇಶಭಕ್ತ ಎಂದಿದ್ದಾರೆ. ಆದರೆ, ಬಿಜೆಪಿಯವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಇವರು ಗೋಡ್ಸೆ ಸಂತತಿಯವರು. ದೇಶದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾದ ಅನಂತ ಕುಮಾರ ಹೆಗಡೆ ಧರ್ಮಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ, ಕ್ರೈಸ್ತರು ಈ ದೇಶದ ಜನರಲ್ವಾ ಎಂದು ಸಿ.ಎಂ ಪ್ರಶ್ನಿಸಿದರು.

ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಾತನಾಡಿದರು. ಶಾಸಕ ವಡ್ನಾಳ್‌ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

‘ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ’
ಚನ್ನಗಿರಿ ಇತಿಹಾಸದಲ್ಲಿ ಶನಿವಾರ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುಮಾರು ₹800 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದು ಇದೇ ಮೊದಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದು ನನಗೆ ಬಹಳ ತೃಪ್ತಿ, ಸಮಾಧಾನ ತಂದಿದೆ. ಚನ್ನಗಿರಿ ಕ್ಷೇತ್ರವೊಂದೇ ಅಲ್ಲ; ಇಡೀ ರಾಜ್ಯದಲ್ಲಿ ಇದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.

‘ಶಾಸಕ ವಡ್ನಾಳ್‌ ರಾಜಣ್ಣ ಸಜ್ಜನ ರಾಜಕಾರಣಿ. ಅವರೆಂದೂ ಚನ್ನಗಿರಿ ಅಭಿವೃದ್ಧಿ ಕೆಲಸಬಿಟ್ಟು ಬೇರೆ ಯಾವ ಕೆಲಸಕ್ಕೂ ಒಂದೇ ಒಂದು ಬಾರಿಯೂ ನನ್ನನ್ನು ಭೇಟಿ ಮಾಡಿದ ನಿದರ್ಶನ ಇಲ್ಲ. ಅಭಿವೃದ್ಧಿ ಪರ ಚಿಂತನೆ ಮಾಡುವ ರಾಜ್ಯದ ಶಾಸಕರಲ್ಲಿ ಇವರೂ ಒಬ್ಬರು’ ಎಂದು ಹೇಳಿದರು.

ಸೀರೆ, ಸೈಕಲ್‌ ಹಾಗೂ ಸಿ.ಎಂ ಅಭಿನಯ
ಜನರ ಚಪ್ಪಾಳೆ, ಜೈಕಾರಗಳಿಂದ ಸ್ಫೂರ್ತಿಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಂದ್ರ ಮೋದಿ, ಅಮಿತ್‌ ಷಾ ಹಾಗೂ ಯಡಿಯೂರಪ್ಪ ಅವರನ್ನು ಟೀಕಿಸುವಾಗ ಬಹಳಷ್ಟು ಸಲ ಅಂಗಿಕ ಅಭಿನಯ ಮಾಡಿದರು. ಧ್ವನಿ ಏರಿಳಿತ ಮಾಡಿ ಅಣುಕಿಸಿದರು.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕೊಟ್ಟಿದ್ದೇನು? ಬರೀ ಸೀರೆ, ಸೈಕಲ್ ಎಂದು ಪದೇ, ಪದೇ ಹೇಳಿದರು. ವಿದೇಶದಲ್ಲಿದ್ದ ಕಪ್ಪು ಹಣ ತಂದು ಇಲ್ಲಿನ ಪ್ರತಿಯೊಬ್ಬರ ಅಕೌಂಟಿಗೂ ₹ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಆದರೆ, ಇಷ್ಟು ದಿವಸವಾದರೂ 15 ಪೈಸೆಯೂ ಬಂದಿಲ್ಲ ಎಂದು ವ್ಯಂಗ್ಯ ಮಾಡಿದರು. ಈ ಮಾತನ್ನು ಪದೇ ಪದೇ ಹೇಳಿ ಕೈಯಾಡಿಸಿದರು.

ಭಿನ್ನಾಭಿಪ್ರಾಯ ಸಹಜ: ಎಂ.ಬಿ.ಪಾಟೀಲ
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕುರಿತಂತೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ ಎಂದು ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು. ಚನ್ನಗಿರಿಯ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಿನ್ನಾಭಿಪ್ರಾಯಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಶಾಮನೂರು ಶಿವಶಂಕರಪ್ಪ ಅವರು ತಂದೆ ಸಮಾನ. ನಾವೆಲ್ಲರೂ ಕಾಂಗ್ರೆಸ್‌ನಲ್ಲಿ ಒಟ್ಟಿಗೆ ಇದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.