ADVERTISEMENT

ಸಂತೇಬೆನ್ನೂರಿಗೆ ಬೇಕು ಪಟ್ಟಣ ಪಂಚಾಯ್ತಿ ಸ್ಥಾನ

ಕೆ.ಎಸ್.ವೀರೇಶ್ ಪ್ರಸಾದ್
Published 18 ನವೆಂಬರ್ 2017, 7:00 IST
Last Updated 18 ನವೆಂಬರ್ 2017, 7:00 IST

ಸಂತೇಬೆನ್ನೂರು: ಐದಾರು ಶತಮಾನಗಳ ಐತಿಹಾಸಿಕ ನೆಲೆ, ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ ಸಂತೇಬೆನ್ನೂರಿಗೆ  ಪಟ್ಟಣ ಪಂಚಾಯ್ತಿ ಸ್ಥಾನಮಾನ ನೀಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಈಗಾಗಲೇ ಪಟ್ಟಣದ ಸ್ವರೂಪ ಪಡೆದಿರುವ ಗ್ರಾಮವನ್ನು ಪಟ್ಟಣ ಪಂಚಾಯ್ತಿ ಎಂದು ಶೀಘ್ರ ಘೋಷಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಪಟ್ಟಣ ಪಂಚಾಯ್ತಿ ಘೋಷಣೆಗೆ ಇರುವ ಕನಿಷ್ಠ ಅರ್ಹತೆಗಳನ್ನು ಸಂತೇಬೆನ್ನೂರು ಹೊಂದಿದೆ. ವೇಗವಾಗಿ ಬೆಳೆಯುತ್ತಿರುವ ಕಾರಣ ಪ್ರಸ್ತುತ ಜನಸಂಖ್ಯೆ 18 ಸಾವಿರ. ನಾಲ್ಕು ಸಾವಿರ ಮನೆಗಳ ಬೃಹತ್ ಗ್ರಾಮ. ಹೊಸ ಬಡಾವಣೆಗಳ ನಿರ್ಮಾಣದಿಂದ ಜನಸಾಂದ್ರತೆಯೂ ಹೆಚ್ಚುತ್ತಿದೆ. 2012 ಜನಗಣತಿಯಲ್ಲಿ 12 ಸಾವಿರ ಜನಸಂಖ್ಯೆ ಮಿತಿ ಪರಿಗಣಿಸಿ ಪಟ್ಟಣ ಪಂಚಾಯ್ತಿ ನೀಡಲಾಗಿದೆ. ಸರ್ಕಾರಕ್ಕೆ ಪೂರಕ ದಾಖಲೆಗಳನ್ನು ನೀಡಲಾಗಿದೆ. ನಕ್ಷೆ ತಯಾರಿ ತಡವಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಲೆಕ್ಕಾಧಿಕಾರಿ ಭೈರಪ್ಪ.

‘ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ವಾರ್ಷಿಕ ₹ 50 ಲಕ್ಷ ಮಂಜೂರಾಗುತ್ತದೆ. ಗ್ರಾಮ ಪಂಚಾಯ್ತಿ ವಿದ್ಯುತ್ ಪಾವತಿ, ಸಿಬ್ಬಂದಿ ವೇತನಕ್ಕೆ ಖರ್ಚಾಗುತ್ತಿದೆ. ಪ್ರಸ್ತುತ ಗ್ರಾಮ ಪಂಚಾಯ್ತಿಯಲ್ಲಿ 17 ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಸಿಬ್ಬಂದಿ ಕೊರತೆ ಇದೆ. ಘನ ತ್ಯಾಜ್ಯ ವಿಲೇವಾರಿ, ಸ್ವಚ್ಛತೆಗೆ ನೌಕರರ ಕೊರತೆ ಇದೆ. ಹಾಗಾಗಿ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿಗಳು ಬಿದ್ದಿರುತ್ತವೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಜಿ.ದೇವೇಂದ್ರಪ್ಪ.

ADVERTISEMENT

ನಿತ್ಯ ನಾಲ್ಕು ಸಾವಿರ ಗ್ಯಾಲನ್‌ಗಳಿಗಿಂತ ಹೆಚ್ಚು ನೀರು ಪೂರೈಸುವ ಹೊಣೆ ಇದೆ. ಸೂಳೆಕೆರೆ, ಕೊಳವೆ ಬಾವಿ ಯೋಜನೆಗಳಿಂದ ಪೂರೈಕೆ ನಡೆದಿದೆ. ರಿಪೇರಿ ಹಾಗೂ ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿ ಆದಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ಸಿಗಬಹುದು. ನಿಯಮಬದ್ಧ ನೌಕರರ ನೇಮಕಗೊಳ್ಳುವರು. ನಿರ್ವಹಣೆ ಸುಲಭವಾಗುತ್ತದೆ ಎನ್ನುತ್ತಾರೆ ಅವರು.

ಗ್ರಾಮದಲ್ಲಿ 1.4 ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ. ಪೂರ್ವ, ಪಶ್ಚಿಮಾಭಿಮುಖವಾಗಿ 2 ಕಿ.ಮೀ. ಉತ್ತರ ದಕ್ಷಿಣಾಭಿಮುಖವಾಗಿ 1.5 ಕಿ.ಮೀವರೆಗೆ ಗ್ರಾಮ ವ್ಯಾಪಿಸಿದೆ. ಕುಮುಟಾ–ಕಡಮಡಗಿ, ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗಳು ಸಂಪರ್ಕ ಹಾದುಹೋಗಿವೆ. ರಾಜ್ಯದಲ್ಲಿಯೇ ಅತ್ಯಂತ ಸುಂದರ ಸ್ಮಾರಕ ಪುಷ್ಕರಣಿ ನೆಲಸಿದೆ. ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ.

ನಾಡ ಕಚೇರಿ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸರ್ಕಾರಿ ಪದವಿ ಕಾಲೇಜು, ಪಿಯು ಕಾಲೇಜು, 3 ಪ್ರೌಢಶಾಲೆಗಳು, 8 ಪ್ರಾಥಮಿಕ ಶಾಲೆಗಳು ಗ್ರಾಮದಲ್ಲಿವೆ. ಒಟ್ಟಾರೆ 3,500 ವಿದ್ಯಾರ್ಥಿಗಳು ಇದ್ದಾರೆ.  ನಿತ್ಯ ವ್ಯಾಪಾರ–ವಹಿವಾಟಿಗಾಗಿ ಸಾವಿರಾರು ಜನರ ಭೇಟಿ ನೀಡುತ್ತಾರೆ. ಇಷ್ಟೆಲ್ಲಾ ಚಟುವಟಿಕೆ ಇರುವ ಸಂತೇಬೆನ್ನೂರನ್ನು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ಪಟ್ಟಣ ಪಂಚಾಯ್ತಿ ಆಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.