ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ

ಚನ್ನಗಿರಿಯಲ್ಲಿ ತಾಲ್ಲೂಕು ಮಾದಿಗ ಸಮಾಜದಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 6:43 IST
Last Updated 14 ಜನವರಿ 2017, 6:43 IST
ಚನ್ನಗಿರಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ಮಾದಿಗ ಸಮಾಜದವರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
 
ಮಾದಿಗ ಸಮಾಜ ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದ ಜನಾಂಗವಾಗಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಬಹು ವಿಧದ ಶೋಷಣೆಗೆ ಒಳಗಾಗಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯು ಮಾದಿಗ ಜನಾಂಗಕ್ಕೆ ಗಗನ ಕುಸುಮವಾಗಿದೆ. ರಾಜಕೀಯ ಪ್ರಾತಿನಿಧ್ಯವಾಗಲಿ, ಸರ್ಕಾರಿ ಸೌಕರ್ಯಗಳಾಗಲಿ, ಉದ್ಯೋಗವಾಗಲಿ ಜನಸಂಖ್ಯೆನುಗುಣವಾಗಿ ಮಾದಿಗ ಜನಾಂಗಕ್ಕೆ ಮೀಸಲಾತಿ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮಾದಿಗ ಸಮಾಜದವರು ಅವ್ವ ಸಂಸ್ಕೃತಿ ಹಿನ್ನೆಲೆ ಹೊಂದಿರುವವರಾಗಿದ್ದಾರೆ. ರಾಜ್ಯದ ಒಟ್ಟಾರೆ ಪರಿಶಿಷ್ಟರಲ್ಲಿ ಶೇ 57.3ರಷ್ಟು ಮೀಸಲಾತಿ ಇದ್ದು, ಶೇ 15ರ ಮೀಸಲಾತಿಯಲ್ಲಿ ಮಾದಿಗ ಸಮಾಜಕ್ಕೆ ಸಿಗಬೇಕಾದ ಪಾಲು ಶೇ 8. ಆದರೆ ಸಿಕ್ಕಿರುವುದು ಶೇ 2ರಷ್ಟು ಮಾತ್ರ ಎಂದು ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ ಬಿ. ಮಂಜುನಾಥ್ ದೂರಿದರು.
 
‘ಇನ್ನುಳಿದ ಶೇ 6ರಷ್ಟು ಮೀಸಲಾತಿಯನ್ನು ಬೇರೆಯವರು ದೋಚಿದ್ದಾರೆ. ಇದರಿಂದ ಮಾದಿಗ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ನಮ್ಮ ತಟ್ಟೆಯೊಳಗಿನ ಅನ್ನವನ್ನು ಅನ್ಯರು ಕಸಿದುಕೊಳ್ಳುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೂ ಸಮಪಾಲು ಸಿಗಬೇಕೆಂಬುದು ಮಾದಿಗ ಸಮಾಜದವರ ಆಶಯವಾಗಿದೆ.
 
ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ ಫಲವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಿತು. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು 96.66 ಲಕ್ಷ ಇದ್ದು, ಇವರಲ್ಲಿ ಮಾದರ, ಮಾದಿಗ, ಮಾತಂಗ, ಮಾಂಗ, ಆದಿಜಾಂಬವ, ಆದಿ ಕರ್ನಾಟಕ, ಸಮಗಾರ, ಮಚಗಾರ, ಡೋಹರ, ದಕ್ಕಲಿಗ, ಮಾಚಾಳ ಮುಂತಾದ ಸುಮಾರು 40ಕ್ಕಿಂತ ಹೆಚ್ಚು ಮಾದಿಗ ಸಂಬಂಧಿತ ಜಾತಿಗಳ ಜನಸಂಖ್ಯೆ ಶೇ 33.47ರಷ್ಟಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಂಬಂಧಿ ಜಾತಿಗಳೆಲ್ಲ ಸೇರಿ ಶೇ 6ರಷ್ಟು ಮೀಸಲಾತಿಯನ್ನು ನೀಡಬೇಕು ಎಂಬುದು ಸದಾಶಿವ ಆಯೋಗದ ವರದಿಯಲ್ಲಿ ಇದೆ. ಆದ್ದರಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಬಹಿರಂಗಪಡಿಸಿ, ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರವನ್ನು ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದೇವೆ’ ಎಂದು ತಿಳಿಸಿದರು.
 
ಪಟ್ಟಣದ ದುರ್ಗಾಂಬಿಕ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಗಣಪತಿ ವೃತ್ತ, ಕಲ್ಲುಸಾಗರ ರಸ್ತೆ, ಎನ್‌ಎಚ್ 13ರ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ತಲುಪಿತು. ತಹಶೀಲ್ದಾರ್ ಎಸ್. ಪದ್ಮಾಕುಮಾರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
 
ಮಾದಿಗ ಸಮಾಜದ ಮುಖಂಡರಾದ ಎಂ.ಕೆ. ನಾಗಪ್ಪ, ಎಚ್. ಕೃಷ್ಣಪ್ಪ, ಚಿತ್ರಲಿಂಗಪ್ಪ, ಎಚ್.ಎನ್. ಮೂರ್ತಿ, ಎಚ್. ಕುಮಾರ್, ಶ್ರೀನಿವಾಸ್, ನರಸಿಂಹಮೂರ್ತಿ, ಹನುಮಂತಪ್ಪ, ಸಿ.ಆರ್. ನಾಗೇಂದ್ರಪ್ಪ, ಜಿ.ರಂಗಪ್ಪ, ಬಿ. ಕೃಷ್ಣಪ್ಪ, ಜಯ್ಯಪ್ಪ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.