ADVERTISEMENT

‘ಸಮಾನತೆ ಸಾರುವ ಸಾಂಸ್ಕೃತಿಕ ನಾಡು ಅಗತ್ಯ’

ಹರಪನಹಳ್ಳಿ: ಬೃಹನ್ಮಠದ ಹಾಲಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:23 IST
Last Updated 22 ಮಾರ್ಚ್ 2017, 6:23 IST

ಹರಪನಹಳ್ಳಿ: ‘ಜಾತಿ, ಧರ್ಮ, ಅಸಹಕಾರ, ಕ್ರೌರ್ಯ, ಅಸೂಯೆ ತುಂಬಿರುವ ಶರಣರ ನಾಡಿನಲ್ಲಿ ಕಟ್ಟುಪಾಡಿಲ್ಲದ ಸಾಂಸ್ಕೃತಿಕ ನಾಡನ್ನು ಸೃಷ್ಟಿಸುವ  ಅನಿವಾರ್ಯತೆ ಇದೆ’  ಎಂದು ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸಂಸ್ಥೆ ಅಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಿಚ್ಚವ್ವನಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ನಿಚ್ಚವ್ವನಹಳ್ಳಿ ಬೃಹನ್ಮಠದ ಹಾಲಸ್ವಾಮೀಜಿ ಅವರ ಪಟ್ಟಾಧಿಕಾರದ  ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಧಾರಿಗಳು ಪುರುಷ–ಮಹಿಳೆ ಭೇದವಿಲ್ಲದೆ ಸಮಾನತೆಯ ಭಾವ ಹೊಂದಿರಬೇಕು. 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ ಕುರಿತು ಕಲ್ಪನೆ ಹೊಂದಿದ್ದ ಶರಣರ ನಾಡಿನಲ್ಲಿ  ಸಮಾನತೆ ಮರಿಚೀಕೆಯಾಗಿದೆ. ಶರಣರು ಸಾರಿದ ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ ಎಂದರು.

ನಟಿ ಅಪರ್ಣಾ ಮಾತನಾಡಿ, ಹಂಪಿ ಉತ್ಸವದ ರೂವಾರಿ ಎಂ.ಪಿ.ಪ್ರಕಾಶ್‌ ಅಪ್ರತಿಮ ಸಾಂಸ್ಕೃತಿಕ ರಾಯಭಾರಿ ಆಗಿದ್ದರು. ಅನ್ನ ಕೊಡುವ ಕೈಗಳಿಗೆ ಗೌರವ ಕೊಡಬೇಕು ಎಂದರು. ವಚನಕಾರರು ತಮ್ಮ ಅನುಭಾವದಿಂದ  ಜೀವನ, ಬದುಕು, ಸತ್ಯ ಸವಾಲುಗಳನ್ನು ಕಂಡುಕೊಂಡಿದ್ದಾರೆ.

ಶರಣರ ತತ್ವಗಳ ಪಾಲನೆ ಇಂದಿಗೂ ಅವಶ್ಯಕವಾಗಿದೆ. ಮೃಗೀಯ ಗುಣದಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ಶಕ್ತಿ ಶರಣರ ವಚನ ಗಳಿಗಿದ್ದು  ವಿಶ್ವ ಮಾನ್ಯತೆ ಹೊಂದಿವೆ ಎಂದರು.

‘ಜಾತಿ, ಧರ್ಮ, ಅಂತಸ್ತು ಆಡಂಬರದ ಜೀವನದಲ್ಲಿ ಇಡೀ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ದಾರ ವಾದಂತೆ ಎಂದರು. ಜಿ.ಪಂ. ಮಾಜಿ ಸದಸ್ಯ ಕೆ.ಪರಶುರಾಮಪ್ಪ, ಎಂ.ವಿ.ಅಂಜಿನಪ್ಪ, ಅಬ್ದುಲ್ ರೆಹಮಾನ್‌, ಪಿಎಸ್‌ಐ ಎಚ್‌.ಪಿ.ಸತೀಶ್‌ ಮಾತನಾಡಿದರು.    

ವೇದಿಕೆಯಲ್ಲಿ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಕಾನಾಮಡುಗು ಧರ್ಮಾಧಿಕಾರಿ ಐಮುಡಿ ಚರಣಾರರು, ಬೃಹನ್ಮಠದ ಹಾಲಸ್ವಾಮೀಜಿ, ಹಾವೇರಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ವೇದಿಕೆಯಲ್ಲಿ ಇದ್ದರು. ಮನೋಹರ್‌ ಕಾರ್ಯಕ್ರಮ ನಿರೂಪಿಸಿದರು.
ಜಮುರಾ ತಂಡದಿಂದ ‘ಮಹಾ ಪ್ರಸಾದಿ ಮಾದಾರ ಚನ್ನಯ್ಯ’ ಎಂಬ ನಾಟಕ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT