ADVERTISEMENT

ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆತಂಕ

ಚನ್ನಗಿರಿ ತಾಲ್ಲೂಕಿನ ಶಾಲೆಗಳಲ್ಲಿ ಸಕಲ ಸವಲತ್ತುಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ

ಕೆ.ಎಸ್.ವೀರೇಶ್ ಪ್ರಸಾದ್
Published 29 ಮೇ 2017, 3:54 IST
Last Updated 29 ಮೇ 2017, 3:54 IST
ಸಂತೇಬೆನ್ನೂರು: ಜಿಲ್ಲೆಯಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಲು ಓಡಾಟ ನಡೆಸಿದ್ದಾರೆ. ಆದರೆ, ಚನ್ನಗಿರಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಸಕಲ ಸೌಲಭ್ಯಗಳ ಹೊರತಾಗಿಯೂ ದಾಖಲಾತಿ ಸಂಖ್ಯೆ ಕಡಿಮೆ ಆಗಿರುವುದು ಶಿಕ್ಷಕರ ಚಿಂತೆಗೆ ಕಾರಣವಾಗಿದೆ.
 
‘ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಬಿಸಿಯೂಟ, ಸಮವಸ್ತ್ರು, ಶೂ, ಪುಸ್ತಕಗಳ ಕೊಡುಗೆ ಇದೆ. ಗುಣಮಟ್ಟದ ಶಿಕ್ಷಣ ನೀಡಲು ಹಲವು ಕಾರ್ಯಕ್ರಮಗಳ ನಿಯೋಜನೆ ಮಾಡಲಾಗುತ್ತಿದೆ. ಪ್ರತಿಭಾನ್ವಿತ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಆದರೂ ಪೋಷಕರು ಮಕ್ಕಳನ್ನು ದಾಖಲಾತಿ ಮಾಡಿಸಲು ಮುಂದಾಗದಿರುವುದು ಕಳವಳಕಾರಿ’ ಎನ್ನುತ್ತಾರೆ ಇಲ್ಲಿನ ಶಾಲೆಯೊಂದರ ಶಿಕ್ಷಕ ಬಸವರಾಜ್.
 
ಆಂಗ್ಲ ಮಾಧ್ಯಮದ ವ್ಯಾಮೋಹ:  ‘ಕೆಲವು ವರ್ಷಗಳ ಹಿಂದೆ ಆರ್ಥಿಕವಾಗಿ ಸಧೃಡರಾದವರು ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಶಕ್ತರಾಗಿದ್ದರು. ಇಂದು ಕೆಳ ಮಧ್ಯಮ ವರ್ಗದ ಪೋಷಕರು ಕಷ್ಟವಾದರೂ ದುಬಾರಿ ವಂತಿಗೆ, ಶುಲ್ಕ ನೀಡಲು ಮುಂದಾಗುತ್ತಾರೆ.
 
ಮಕ್ಕಳ ಶಿಕ್ಷಣದ ವಿಷಯದಲ್ಲಿ ಹಣಕ್ಕೆ ರಾಜಿಯೇ ಇಲ್ಲ. ಆಂಗ್ಲ ಮಾಧ್ಯಮದ ವ್ಯಾಮೋಹವೇ ಇದಕ್ಕೆ ಕಾರಣ. ಒಂದಿಷ್ಟು ಆಕರ್ಷಕ ಯೂನಿಫಾರಂ, ವಾಹನ ಸೌಲಭ್ಯ, ಅವೈಜ್ಞಾನಿಕವಾಗಿ ಹೇರುವ ಹೋಂ ವರ್ಕ್‌ಗಳು. ಪರೀಕ್ಷೆಗಳಲ್ಲಿ ಗಳಿಸುವ ಉತ್ತಮ ಅಂಕಗಳು ಪೋಷಕರನ್ನು ಸೆಳೆಯುತ್ತಿವೆ’ ಎನ್ನುವುದು ಶಿಕ್ಷಕ ಮಂಜುನಾಥ್ ಅವರ ವಿಶ್ಲೇಷಣೆ.
 
ಗುಣಾತ್ಮಕ ಪರಿವರ್ತನೆಯ ಅಗತ್ಯತೆ:  ಈ ಬಗ್ಗೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ ಅವರು ಹೇಳುವುದು ಹೀಗೆ. ‘ಖಾಸಗಿ ಶಾಲೆಗಳ ಶಿಕ್ಷಣ ಪದ್ಧತಿಯ ಯಶಸ್ಸಿನ ಗುಟ್ಟು ಮೆಲ್ನೋಟಕ್ಕೆ ಗ್ರಹಿಸಬಹುದು.
 
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಸಿದ್ಧಗೊಳಿಸಲು ಪ್ರಯೋಗಾತ್ಮಕ ಬದಲಾವಣೆಯ ಪ್ರಯತ್ನ ನಡೆದಿಲ್ಲ. ಕನ್ನಡ ಮಾಧ್ಯಮದ ಜತೆಯಲ್ಲೇ ಆಂಗ್ಲ ಭಾಷೆ ಕಲಿಸಲು ವ್ಯಾಪಕ ಪ್ರಯತ್ನ ಬೇಕು. ಸರ್ಕಾರಿ ಶಾಲೆಗಳು ಉಳಿಯಬೇಕು.
 
ಅಲಲ್ಲಿ ವಿರೋಧಗಳು ಕಂಡುಬಂದರೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಬೇಕು. ಪ್ರತಿಭೆಯ ಮಾನದಂಡದಲ್ಲಿ ನೇಮಕಗೊಂಡ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಬದಲಾವಣೆಗಳ ಬಗ್ಗೆ  ಚಿಂತಿಸಬೇಕು’ ಎನ್ನುತ್ತಾರೆ. 
 
ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಚನ್ನಗಿರಿ ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಐದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. 
 
ಆರು ಹಾಗೂ ಏಳನೇ ತರಗತಿಗಳಲ್ಲಿ ಈ ಸೌಲಭ್ಯವಿದೆ. ಇಲಾಖೆಯ ಆದೇಶದಂತೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಅವಕಾಶ ಇದೆ. ಶಿಕ್ಷಕರು ಆಸಕ್ತಿ ವಹಿಸಿದರೆ ಈ ಶೈಕ್ಷಣಿಕ ವರ್ಷದಿಂದ ಅವಕಾಶ ನೀಡಲಾಗುವುದು’ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.