ADVERTISEMENT

ಸಾಮೂಹಿಕ ವಿವಾಹ ಮಹೋತ್ಸವಕ್ಕೆ ತ್ಯಾವಣಿಗೆ ಸಜ್ಜು

ಹೊರ ಬೀರಲಿಂಗೇಶ್ವರ, ಕರಿಯಮ್ಮದೇವಿ ದೇವಾಲಯ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 5:56 IST
Last Updated 15 ಫೆಬ್ರುವರಿ 2017, 5:56 IST
ತ್ಯಾವಣಿಗೆಯಲ್ಲಿ ಇಂದು ಉದ್ಘಾಟನೆಗೆ ಸಜ್ಜಾಗಿರುವ ಹೊರಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ.
ತ್ಯಾವಣಿಗೆಯಲ್ಲಿ ಇಂದು ಉದ್ಘಾಟನೆಗೆ ಸಜ್ಜಾಗಿರುವ ಹೊರಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ.   
ತ್ಯಾವಣಿಗೆ: ಕುರುಬ (ಹಾಲುಮತದ) ಸಮಾಜದವರು ಗ್ರಾಮದ ಹೊರ ವಲಯದಲ್ಲಿ ನೂತನವಾಗಿ ನಿರ್ಮಿಸಿದ ಹೊರ ಬೀರಲಿಂಗೇಶ್ವರ ಸ್ವಾಮಿ ಮತ್ತು ಕರಿಯಮ್ಮದೇವಿ ದೇವಾಲಯಗಳ ಉದ್ಘಾಟನೆ, ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಫೆಬ್ರುವರಿ 15ರಂದು ನಡೆಯಲಿವೆ.
 
ಇದರ ಅಂಗವಾಗಿ ಕನಕ ಸಮುದಾಯ ಭವನದ ಶಂಕುಸ್ಥಾಪನೆ, ಧರ್ಮ ಸಭೆ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ವನ್ನೂ ಹಮ್ಮಿಕೊಳ್ಳಲಾಗಿದ್ದು, ಗ್ರಾಮ ತಳಿರು ತೋರಣ, ಫ್ಲೆಕ್ಸ್‌ ಹಾಗೂ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. 
 
ಗ್ರಾಮದ ಹೊರಭಾಗದ ದಾವಣಗೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 10 ಎಕರೆ ಜಮೀನು ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‌ಗೆ ಸೇರಿದೆ. ಈ ಜಾಗದಲ್ಲಿ ಪೂರ್ವಾಭಿಮುಖವಾಗಿ ಹೊರ ಬೀರಲಿಂಗೇಶ್ವರ ನೂತನ ದೇವಾಲಯವನ್ನು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. 
 
ಹಿನ್ನೆಲೆ: ಈ ಹಿಂದೆ ತ್ಯಾವಣಿಗೆ ಗ್ರಾಮ ಹೊರ ಬೀರಲಿಂಗೇಶ್ವರ ದೇವಾಲಯ ಕಟ್ಟಿಸಿರುವ ಜಾಗದಲ್ಲಿತ್ತು. ಇದು ಮೊದಲು 25 ಕುಟುಂಬಗಳ ಸಣ್ಣ ಊರಾಗಿತ್ತು. ಸುತ್ತಲೂ ಬಂಡೆಗಳಿಂದ ಕೂಡಿತ್ತು. ಅಲ್ಲಿಂದ ಈಗಿರುವ ಸ್ಥಳಕ್ಕೆ ತೆವಳುತ್ತಾ ಬಂತು; ಹೀಗಾಗಿ ಈ ಗ್ರಾಮಕ್ಕೆ ‘ತ್ಯಾವಣಿಗೆ’ ಎಂದು ಹೆಸರು ಬಂದಿದೆ ಎಂಬುದು ಒಂದು ಕಥೆ.
 
ಇನ್ನು ಕೆಲವರ ಪ್ರಕಾರ ಇಲ್ಲಿ ಕುರುಬ ಜನಾಂಗ ಹೆಚ್ಚಿತ್ತು. ಬೆಳಿಗ್ಗೆಯಿಂದ ದುಡಿದು ಸಂಜೆ ಅಲ್ಲಿದ್ದ ಬಂಡೆಯ ಮೇಲೆ ನಿಂತು ತಾವು ದುಡಿದ ಆಣೆಗಳನ್ನು (ನಾಣ್ಯ) ಮೇಲಕ್ಕೆ ತೂರುತ್ತಿದ್ದರು. ಬಂಡೆಗಳ ಮೇಲೆ ನಿಂತ ನಾಣ್ಯಗಳು ಮಾತ್ರ ಗಟ್ಟಿ; ನಾವು ದುಡಿದಿರುವುದು ಇಷ್ಟೇ ಎಂದು ತಿಳಿದು, ಅವನ್ನಷ್ಟೇ ತೆಗೆದುಕೊಳ್ಳುತ್ತಿದ್ದರು.

ಇದೇ ರೀತಿ ಹಲವು ವರ್ಷಗಳು ಕಳೆದವು. ಅಲ್ಲಿ ಬಿದ್ದಿರುವ ಆಣೆಗಳು ಒಂದೆಡೆ ಸಂಗ್ರಹವಾಗಿ ಸುಮಾರು ಒಂಬತ್ತು ಕೊಪ್ಪರಿಗೆ ತುಂಬಿದವು. ಈ ನಿಧಿ ಹೊರ ಬೀರದೇವರ ದೇವಸ್ಥಾನದ ಸುತ್ತಲೂ ನೆಲದಲ್ಲಿ ಹೂತುಹೋಯಿತು. ಇದು ದೇವರ ದುಡ್ಡು ‘ತವನಿಧಿ’ ಎಂದು ಕರೆದರು. ಅಲ್ಲಿಂದ ಕಾಲಕ್ರಮೇಣ ಗ್ರಾಮಕ್ಕೆ ‘ತ್ಯಾವಣಿಗೆ’ ಎಂಬ ಹೆಸರು ಬಂತು ಎಂಬ ಪ್ರತೀತಿಯೂ ಇದೆ. ಈ ಸ್ಥಳದಲ್ಲಿ ಹೊರ ಬೀರಲಿಂಗೇಶ್ವರ ಪುರಾತನ ದೇವಾಲಯ ಇರುವುದು ಇದಕ್ಕೆ ಸಾಕ್ಷಿ.
 
ದೇವರ ಮಹಿಮೆ:  ಹೊರ ಬೀರಲಿಂಗೇಶ್ವರ ದೇವರು ಗ್ರಾಮದ ಆರಾಧ್ಯ ದೈವ. ಅನಾದಿ ಕಾಲದಲ್ಲಿ ಪಶುಪಾಲನೆ ಇಲ್ಲಿನ ಜನರ ಮೂಲ ಕಸುಬಾಗಿತ್ತು. ಅಡವಿಗೆ ಹೋದ ಜನ– ಜಾನುವಾರುಗಳನ್ನು ಬೀರಲಿಂಗೇಶ್ವರ ರಕ್ಷಿಸುತ್ತಾನೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಹೊನ್ನಪ್ಪ.
 
ಕಲ್ಲು ಬಂಡೆಗಳಿಂದ ಕೂಡಿದ ದೇವಾಲಯ ಸುತ್ತಲೂ ಮಣ್ಣಿನಿಂದ ಮುಳುಗಡೆಯಾಗಿ ಗುಡ್ಡದಂತಾಗಿದೆ. ಕುರುಬ (ಹಾಲುಮತ) ಸಮಾಜದವರು ಈಗ ಈ ದೇವಸ್ಥಾನವನ್ನು ಕೆಡವಿ ಹೊರ ಬೀರಲಿಂಗೇಶ್ವರ ನೂತನ ದೇವಾಲಯ ನಿರ್ಮಿಸಿದ್ದಾರೆ. ಪ್ರತಿ ವರ್ಷ ಕಾರಹುಣ್ಣಿಮೆ ಮತ್ತು ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ ಎಂದು ಟ್ರಸ್ಟ್‌ನ ಬಿ.ಎಚ್.ಹಾಲಪ್ಪ ಮಾಹಿತಿ ನೀಡಿದರು.
 
ಕಾರ್ಯಕ್ರಮ ವಿವರ: ಬುಧವಾರ ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಪರಮಹಂಸ ಮುರಳೀಧರ ಸ್ವಾಮೀಜಿ, ಬೆಳಲಗೆರೆ ವೇದಮೂರ್ತಿ ಸ್ವಾಮಿ ನೇತೃತ್ವ ವಹಿಸಲಿದ್ದಾರೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಉದ್ಘಾಟಿಸಲಿದ್ದಾರೆ. ಬೀರಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಎ.ಆರ್.ಚಂದ್ರೇಗೌಡ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಕನಕ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸುವರು. 
 
ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಶಿವಮೂರ್ತಿ, ವಡ್ನಾಳ್ ರಾಜಣ್ಣ, ಜಿ.ಎಚ್.ಶ್ರೀನಿವಾಸ್, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಸಿ.ಎಚ್. ವಿಜಯಕುಮಾರ್, ಆರ್.ಪ್ರಸನ್ನ ಕುಮಾರ್, ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್, ಜಿಲ್ಲಾ ಕುರುಬರ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 
– -ರಾಜು ಆರ್.ತ್ಯಾವಣಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.