ADVERTISEMENT

ಸಾವಯವ ಕೃಷಿಕನ ಕೊರ್ಲೆ ಪ್ರಯೋಗ

ಎಂ.ನಟರಾಜನ್
Published 21 ನವೆಂಬರ್ 2017, 7:52 IST
Last Updated 21 ನವೆಂಬರ್ 2017, 7:52 IST
ಮಲೇಬೆನ್ನೂರು ಸಮೀಪದ ನಿಟ್ಟೂರು ಗ್ರಾಮದ ಸಾವಯವ ಕೃಷಿಕ ಇಟಗಿ ಮರುಳಸಿದ್ದಪ್ಪನವರ ಜಮೀನಿನಲ್ಲಿ ಕಟಾವಿಗೆ ಸಿದ್ಧವಾಗಿರುವ ಕೊರ್ಲೆ ಬೆಳೆ.
ಮಲೇಬೆನ್ನೂರು ಸಮೀಪದ ನಿಟ್ಟೂರು ಗ್ರಾಮದ ಸಾವಯವ ಕೃಷಿಕ ಇಟಗಿ ಮರುಳಸಿದ್ದಪ್ಪನವರ ಜಮೀನಿನಲ್ಲಿ ಕಟಾವಿಗೆ ಸಿದ್ಧವಾಗಿರುವ ಕೊರ್ಲೆ ಬೆಳೆ.   

ಮಲೇಬೆನ್ನೂರು: ಪ್ರಸಕ್ತ ಮಳೆಗಾಲದ ಹಂಗಾಮಿಗೆ ಭದ್ರಾ ಅಚ್ಚುಕಟ್ಟಿಗೆ ನಾಲೆ ನೀರು ಹರಿಯದ ಕಾರಣ ಕಡಿಮೆ ಖರ್ಚಿನಲ್ಲಿ ಕೊರ್ಲೆ ಬೆಳೆ ತೆಗೆಯುವಲ್ಲಿ ಸಾವಯವ ಕೃಷಿಕರ ಪ್ರಯೋಗ ಸಫಲವಾಗಿದೆ.

‘ಭತ್ತದ ಗದ್ದೆ ಖಾಲಿ ಬಿಟ್ಟರೆ ಕಳೆ ಬೆಳೆಯುತ್ತದೆ. ಹೊಲ ಹಾಳಾಗುತ್ತದೆ ಎಂದು ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಮಾರ್ಗದರ್ಶನದಲ್ಲಿ ಪ್ರಾಯೋಗಿಕವಾಗಿ ಬೆಳೆ ಪರಿವರ್ತನೆಗೆ ಎಂಟು ಜನ ರೈತರು ಮುಂದಾದೆವು’ ಎಂದು ಇಟಗಿ ಮರುಳಸಿದ್ದಪ್ಪ ತಿಳಿಸಿದರು.

ಒಂದು ಎಕರೆ ಪ್ರದೇಶದಲ್ಲಿ ಬಿಳಿಜೋಳ, ಒಂದು ಎಕರೆ ಕೊರ್ಲೆ ಬಿತ್ತನೆ ಪ್ರಯೋಗ ಇಲ್ಲಿ ಯಶಸ್ವಿಯಾಗಿದೆ. ಕೊರ್ಲೆ ಬೀಜವನ್ನು ಹೊಲದಲ್ಲಿ ಬಿತ್ತನೆ ಮಾಡುವ ಮುನ್ನ ಹೊಲಕ್ಕೆ ಒಮ್ಮೆ ಮಾತ್ರ ಸಗಣಿ ಗೊಬ್ಬರ ಹಾಕಿದ್ದು ಬಿಟ್ಟರೆ, ನೀರು ಕಟ್ಟಲಿಲ್ಲ, ಕಳೆ ತೆಗೆಯಲಿಲ್ಲ. ಯಾವುದೇ ಕ್ರಿಮಿನಾಶಕ, ಔಷಧ ಸಿಂಪರಣೆ ಮಾಡಿಲ್ಲ. ಜೀವಾಮೃತ ಬಳಸಿಲ್ಲ ಎಂದು ವಿವರಿಸಿದರು. ಕಡಿಮೆ ನೀರು ಇದ್ದಾಗ ಚೆನ್ನಾಗಿ ಈ ಬೆಳೆ ಬೆಳಯುತ್ತದೆ. ಅದಕ್ಕೆ ಪೂರಕ ವಾತಾವರಣ ಇದ್ದ ಕಾರಣ ಬೆಳೆ ಹುಲುಸಾಗಿ ಬೆಳೆಯಿತು.

ADVERTISEMENT

‘ಕಳೆದ ತಿಂಗಳಲ್ಲಿ ಒಮ್ಮೆ ಮೂರು ದಿನ ಮಳೆ ಚೆನ್ನಾಗಿ ಸುರಿದ ಕಾರಣ ಬಹುತೇಕ ಕಡೆ ಪ್ರಯೋಗ ವಿಫಲವಾಯ್ತು. ಬೆಳೆ ಉಳಿಸಿಕೊಳ್ಳಲು ಇಲ್ಲಿನ ಜಮೀನಿನಲ್ಲಿ ಸಂಗ್ರಹವಾಗಿದ್ದ ನೀರನ್ನು ಕಾಲುವೆ ಮಾಡಿ ಹೊರಹಾಕಿದೆ. ನೀರು ಹೆಚ್ಚಾದ ಕಾರಣ ಭತ್ತದಗದ್ದೆಯಲ್ಲಿ ಬಿತ್ತಿದ್ದ ಬಿಳಿಜೋಳ (ಬಿಜಾಪುರ) ಶೀತಬಾಧೆ ಹೆಚ್ಚಾಗಿ ಬೆಳೆ ನಾಶವಾಗಿದೆ.ಎಂಟು ಕೆಜಿ ಬಿತ್ತನೆ ಬೀಜ ಬಳಸಿ ಬೆಳೆದ ಕೊರ್ಲೆ ಬೆಳೆ ಸುಮಾರು ಆರರಿಂದ ಎಂಟು ಕ್ವಿಂಟಲ್ ಇಳುವರಿ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಹುರುಳಿ, ನವಣೆ, ರಾಗಿ, ಸಜ್ಜೆ ಮಾದರಿಯ ಹೆಚ್ಚಿನ ಪೋಷಕಾಂಶಯುಕ್ತ ಧಾನ್ಯ. ಹುಲ್ಲಿಗೂ ಸಾಕಷ್ಟು ಬೇಡಿಕೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.