ADVERTISEMENT

ಸಾಸ್ವೆಹಳಿ ಏತ ನೀರಾವರಿ ಕಾಮಗಾರಿಗೆ ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:15 IST
Last Updated 23 ಏಪ್ರಿಲ್ 2017, 8:15 IST

ಚನ್ನಗಿರಿ: ‘ತಾಲ್ಲೂಕಿನ ಕಸಬಾ, ಸಂತೇಬೆನ್ನೂರು ಹಾಗೂ ಬಸವಾಪಟ್ಟಣ ಹೋಬಳಿಗಳ ರೈತರ ಬದುಕನ್ನು ಹಸನು ಮಾಡುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ’ ಎಂದು ಶಾಸಕ ವಡ್ನಾಳ್‌ ರಾಜಣ್ಣ ತಿಳಿಸಿದರು.ಪಟ್ಟಣದ ತಾಲ್ಲೂಕು ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಕಸಬಾ ಹೋಬಳಿ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘₹ 460 ಕೋಟಿ ವೆಚ್ಚದ ಈ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಈ ವಾರ ಮುಕ್ತಾಯಗೊಳ್ಳಲಿದೆ. ಕಾಮಗಾರಿ ಮುಂದಿನ ತಿಂಗಳು ಪ್ರಾರಂಭವಾಗಲಿದೆ’ ಎಂದರು.‘ನಮೂನೆ 50, 53ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಬಗರ್‌ಹುಕುಂ ಸಾಗುವಾಳಿದಾರರಿಗೆ ಸರ್ಕಾರದ ಆದೇಶದ ಪ್ರಕಾರ 4 ಎಕರೆವರೆಗೆ ಜಮೀನು ನೀಡಲು ಕ್ರಮ ಕೈಗೊಳ್ಳ ಲಾಗಿದೆ. ಇದುವರೆಗೆ 900 ಅರ್ಜಿಗಳನ್ನು ಸಲ್ಲಿಸಿದ್ದು, ಈ ಪೈಕಿ 490 ಫಲಾನು ಭವಿಗಳಿಗೆ ಇಂದು ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಕಚೇರಿಗಳಿಗೆ ಅಲೆದಾಡಿಸಬಾರದು. ಭೀಕರ ಬರಗಾಲ ಪರಿಸ್ಥಿತಿಯಲ್ಲಿ ಇದುವರೆಗೆ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಕೂಡಾ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ರೈತರಿಗೆ ಈಗ ನೀರಿನ ಬಳಕೆಯ ಬಗ್ಗೆ ಪ್ರಕೃತಿಯು ಪಾಠವನ್ನು ಕಲಿಸಿದೆ. ನೀರನ್ನು ಹಿತಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ಉಳಿಸಿ ಹೋಗುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಹಿಂದೆಂದೂ ತಾರದಷ್ಟು ಅನುದಾನವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ತರಲಾಗಿದೆ. ಇನ್ನೂ ಒಂದು ವರ್ಷ ಅಧಿಕಾರ ಅವಧಿ ಇದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. 4 ವರ್ಷದಲ್ಲಿ 4 ಸಾವಿರ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ.ಎನ್. ಪುಷ್ಪಾವತಿ, ಸದಸ್ಯ ಆರ್. ಷಡಾಕ್ಷರಿ, ಎಪಿಎಂಸಿ ಅಧ್ಯಕ್ಷ ಎಂ.ಬಿ. ರಾಜಪ್ಪ, ಪುರಸಭೆ ಅಧ್ಯಕ್ಷ ಬಿ.ಆರ್. ಹಾಲೇಶ್, ಸದಸ್ಯರಾದ ಮಂಜುನಾಥ್, ಅಸ್ಲಾಂಬೇಗ್, ಜಬೀವುಲ್ಲಾ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಂಜುಳಾ ಟಿ.ವಿ. ರಾಜು, ಯಶೋದಮ್ಮ ಮರುಳಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಆರ್. ಮಂಜುನಾಥ್, ತಾಲ್ಲೂಕು ಪಂಚಾಯ್ತಿ ಇಒ ಜಿ.ಎನ್.ಕುಮಾರ್ ಉಪಸ್ಥಿತರಿದ್ದರು.ಕಾವ್ಯ ಪ್ರಾರ್ಥಿಸಿದರು. ತಹಶೀಲ್ದಾರ್ ಎಸ್. ಪದ್ಮಕುಮಾರಿ ಸ್ವಾಗತಿಸಿದರು. ಎಂ.ಬಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.