ADVERTISEMENT

ಸಾಸ್ವೆಹಳ್ಳಿ ಏತ ನೀರಾವರಿ: ಸ್ವಾಗತಾರ್ಹ ಆದರೂ ಗಿಮಿಕ್‌ : ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 7:34 IST
Last Updated 20 ನವೆಂಬರ್ 2017, 7:34 IST

ಚನ್ನಗಿರಿ: 135 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಶಾಸಕರಾದ ವಡ್ನಾಳ್ ರಾಜಣ್ಣ, ಕೆ. ಶಿವಮೂರ್ತಿ ಹಾಗೂ ಡಿ.ಜಿ. ಶಾಂತನಗೌಡ ಅವರ ಪ್ರಯತ್ನದಿಂದಾಗಿ ಆರಂಭಗೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿರುವುದು ಅಭಿನಂದನಾರ್ಹ ವಿಚಾರ. ಆದರೆ ಚುನಾವಣೆ ಹತ್ತಿರ ಬರುವಾಗ ಮಾಡಿರುವುದು ಮಾತ್ರ ಗಿಮಿಕ್‌ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ನಂತರ ಚುನಾವಣೆ ನಡೆದಾಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆಗ ಈ ಯೋಜನೆ ಆರಂಭಕ್ಕೆ ಒತ್ತಾಯಿಸಿ ಎರಡು ಮೂರು ಬಾರಿ ಜಲಸಂಪನ್ಮೂಲ ಸಚಿವರನ್ನು ನಾನೂ ಭೇಟಿ ಮಾಡಿದ್ದೆ’ ಎಂದು ಹೇಳಿದರು.

ಈಗ ಕಾಮಗಾರಿ ಆರಂಭಿಸಿದ್ದು, ಯೋಜನೆ ಮುಕ್ತಾಯಗೊಳ್ಳಲು ಕನಿಷ್ಠವೆಂದರೂ ಒಂದು ವರ್ಷ ಬೇಕಾಗುತ್ತದೆ. ಅಂದರೆ ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸ ಬೇಕಾಗುತ್ತದೆ. ಆದ್ದರಿಂದ ಆರು ತಿಂಗಳಲ್ಲಿ ಕಾಮಗಾರಿ ಮುಕ್ತಾಯ ಮಾಡಿ ರೈತರ ಬದುಕು ಹಸನು ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಾಗಿ 2013–14ರಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗ ಆರಂಭಿಸಲಾಗುತ್ತಿದೆ. ಸೂಳೆಕೆರೆ ಸೇರಿ ತಾವರೆಕೆರೆ ಹಾಗೂ ಚನ್ನೇಶಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಸಿಕ್ಕಿತ್ತು. ಆದರೆ ಕಾಮಗಾರಿಗಳನ್ನು ಆರಂಭಿಸಲು ಈ ಸರ್ಕಾರಕ್ಕೆ ನಾಲ್ಕೂವರೆ ವರ್ಷ ಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್ ಕಾರ್ಯಕರ್ತರ ಕಗ್ಗೊಲೆ ರಾಜ್ಯದಲ್ಲಿ ನಡೆಯುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಿದೆ. ಬಿಜೆಪಿ ಎಂದಿಗೂ ಮುಸ್ಲಿಂ ವಿರೋಧಿಯಾಗಿಲ್ಲ. ಹಿಂದೂ ವಿರೋಧಿಯಾಗಿರುವ ಟಿಪ್ಪು ಜಯಂತಿ ಆಚರಿಸುವ ಬದಲು ಅಬ್ದುಲ್ ಕಲಾಂ ಅಥವಾ ಸಂತ ಶಿಶುನಾಳ್‌ ಶರೀಫ್ ಅವರ ಜಯಂತಿಯನ್ನು ಆಚರಿಸಿದರೆ ಸಾರ್ಥಕತೆ ಇರುತ್ತದೆ ಎಂಬುದು ಬಿಜೆಪಿ ನಿಲುವು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿ ದಿನ ಅನಂತಕುಮಾರ್ ಹೆಗಡೆ, ಯಡಿಯೂರಪ್ಪ, ಈಶ್ವರಪ್ಪ ಮುಂತಾದ ಬಿಜೆಪಿ ನಾಯಕರನ್ನು ನಿಂದಿಸುವುದೇ ದಿನಚರಿಯಾಗಿದೆ. ಇದು ಅವರ ಹತಾಶ ಮನೋಭಾವನೆಯನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿಗೆ ಬಿಜೆಪಿ ಕಾರ್ಯಕರ್ತರು ಬಾರದಂತೆ ಪೊಲೀಸರನ್ನು ಬಳಸಿಕೊಂಡು ಸರ್ಕಾರ ಷಡ್ಯಂತ್ರ ನಡೆಸಿತು. ಆದರೆ ನಂತರ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಸಭೆಗಳಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ತುಮ್ಕೋಸ್ ನಿರ್ದೇಶಕರಾದ ಟಿ.ವಿ. ರಾಜು ಪಟೇಲ್, ಎಂ.ಎನ್. ಮರುಳಪ್ಪ, ಎಪಿಎಂಸಿ ಅಧ್ಯಕ್ಷ ಎಂ.ಬಿ. ರಾಜಪ್ಪ, ಸದಸ್ಯ ಟಿ. ನಾಗರಾಜ್, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ವಾಗೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.