ADVERTISEMENT

ಸಾಸ್ವೆಹಳ್ಳಿ ಯೋಜನೆಯಿಂದ 120 ಕೆರೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:45 IST
Last Updated 14 ಸೆಪ್ಟೆಂಬರ್ 2017, 9:45 IST
ಕಾಂಗ್ರೆಸ್ ಚನ್ನಗಿರಿ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರಾಗಿ ಮರು ಆಯ್ಕೆಯಾದ ಸಿ.ಎಚ್. ಶ್ರೀನಿವಾಸ್‌ ಅವರಿಗೆ ಶಾಸಕ ವಡ್ನಾಳ್ ರಾಜಣ್ಣ ಪಕ್ಷದ ಧ್ವಜ ನೀಡಿದರು.
ಕಾಂಗ್ರೆಸ್ ಚನ್ನಗಿರಿ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರಾಗಿ ಮರು ಆಯ್ಕೆಯಾದ ಸಿ.ಎಚ್. ಶ್ರೀನಿವಾಸ್‌ ಅವರಿಗೆ ಶಾಸಕ ವಡ್ನಾಳ್ ರಾಜಣ್ಣ ಪಕ್ಷದ ಧ್ವಜ ನೀಡಿದರು.   

ಚನ್ನಗಿರಿ: ₹ 446 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ತಾಲ್ಲೂಕಿನ ಭಗೀರಥ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೊಗಳಿದರು. ಪಟ್ಟಣದ ಜವಳಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಸ್ವೆಹಳ್ಳಿ ಯೋಜನೆಯಿಂದ ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಮಾಯಕೊಂಡ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರದ 120 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದರು.

ಇತಿಹಾಸದಲ್ಲಿಯೇ ಹೆಚ್ಚು ಅನುದಾನವನ್ನು ಈ ಕ್ಷೇತ್ರಕ್ಕೆ ತರಲಾಗಿದೆ. ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಗೆ ₹ 316 ಕೋಟಿ, ಚಿತ್ರದುರ್ಗ–ಚನ್ನಗಿರಿ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ₹ 371 ಕೋಟಿ, ಚನ್ನಗಿರಿ–ಭದ್ರಾವತಿ ₹ 9.5 ಕೋಟಿ, ತಾವರೆಕೆರೆ–ಮಸಣಿಕೆರೆ ₹ 10 ಕೋಟಿ, ದೇವರಹಳ್ಳಿ–ನಲ್ಲೂರು ₹ 9 ಕೋಟಿ, ತ್ಯಾವಣಗಿ–ದುಮ್ಮಿ ₹ 15 ಕೋಟಿ, ಚನ್ನಗಿರಿ–ಸೂಳೆಕೆರೆ ₹ 25 ಕೋಟಿ, ಪಾಂಡೋಮಟ್ಟಿ–ಬೆಟ್ಟಕಡೂರು ₹ 3 ಕೋಟಿ, ವಡ್ನಾಳ್‌ ರಸ್ತೆಗೆ ₹ 2 ಕೋಟಿ ಅನುದಾನವನ್ನು ತರಲಾಗಿದೆ ಎಂದರು.

ADVERTISEMENT

113 ಗ್ರಾಮಗಳಿಗೆ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ₹ 73 ಕೋಟಿ... ಹೀಗೆ ಸಾವಿರಾರು ಕೋಟಿ ಅನುದಾನವನ್ನು ತರಲಾಗಿದೆ. ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ರೈತರಿಗೆ ಹಾಗೂ ಜನರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಸ್.ಶ್ರೀನಾಥ್ ಮಾತನಾಡಿ, ಸಾಮಾನ್ಯವಾಗಿ ರಾಜ್ಯ ಚುನಾವಣೆ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಆದರೆ ಕೇಂದ್ರ ಸರ್ಕಾರದ ಯೋಜನೆಯಂತೆ ಫೆಬ್ರವರಿ ತಿಂಗಳಲ್ಲಿಯೇ ರಾಜ್ಯದ ಚುನಾವಣೆ ನಡೆಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ ಎಂಬದು ಕೇಳಿ ಬಂದಿದೆ ಎಂದರು.

ಕಾಂಗ್ರೆಸ್‌ ಸರ್ಕಾರದ ಸಾಧನೆಯ ಪಟ್ಟಿಗಳನ್ನು ಅಧಾರವಾಗಿಟ್ಟುಕೊಂಡು ಚುನಾವಣೆ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಸನ್ನದ್ಧರಾಗಿರಬೇಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ.ದಿನೇಶ್, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ಎಸ್‌.ಶರೀನಾಥ್‌, ಜಿ.ಎಂ.ತಿಪ್ಪೇಸ್ವಾಮಿ, ಕೆ.ಜಿ.ಡಿ.ಬಸವರಾಜಪ್ಪ, ಎಂ.ಸಿದ್ದಪ್ಪ, ಬಿ.ಆರ್.ಹಾಲೇಶ್, ಲೋಕೇಶ್ವರಪ್ಪ, ಕೆ.ಆರ್.ಮಂಜುನಾಥ್, ಎಚ್.ಅಶೋಕ್, ಬಸವರಾಜಪ್ಪಗೌಡ್ರು, ಎಚ್.ಕೃಷ್ಣಪ್ಪ. ಸಿ.ನಾಗರಾಜ್, ಉಮಾ ಬಸವರಾಜ್, ಜೆ.ರಂಗಸ್ವಾಮಿ, ಜಬೀವುಲ್ಲಾ, ಅಬ್ದುಲ್ ಖದೀರ್, ಟಿ.ರಾಜಪ್ಪ ಉಪಸ್ಥಿತರಿದ್ದರು.

ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾಮೂರ್ತಿ ಪ್ರಾರ್ಥಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ವೈ.ಶಿವರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.