ADVERTISEMENT

ಸಿರಿಧಾನ್ಯ ಬೆಳೆಗಳತ್ತ ರೈತರ ಚಿತ್ತ

ಡಿ.ಶ್ರೀನಿವಾಸ
Published 20 ನವೆಂಬರ್ 2017, 7:33 IST
Last Updated 20 ನವೆಂಬರ್ 2017, 7:33 IST

ಜಗಳೂರು: ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕಿನಲ್ಲಿ ಮಳೆಯ ಅನಿಶ್ಚತತೆಯಿಂದ ರೈತರು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಕಳೆದ ಮೂರು ವರ್ಷಗಳ ಬರದಿಂದ ಕಂಗೆಟ್ಟಿರುವ ರೈತರು ಅನಿವಾರ್ಯವಾಗಿ ಬರ ಪ್ರತಿರೋಧಕ ಪರ್ಯಾಯ ಬೆಳೆಗಳತ್ತ ಆಸಕ್ತಿ ವಹಿಸುತ್ತಿದ್ದಾರೆ. ಶೇಂಗಾ, ಮೆಕ್ಕೆಜೋಳ ಮುಂತಾದ ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದ ರೈತರು ಇದೇ ಮೊದಲ ಬಾರಿ ಅತಿಹೆಚ್ಚು ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆದಿದ್ದಾರೆ.

ಕಡಿಮೆ ಮಳೆಯಲ್ಲೂ ಉತ್ತಮ ಇಳುವರಿ ಕೊಡುವ ನವಣೆ, ಸಜ್ಜೆ, ಆರಕ, ಸಾಮೆ, ಕೊರಲು, ಬರಗು, ಊದಲು ಮತ್ತು ರಾಗಿಯನ್ನು ಈ ವರ್ಷ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ. ಮೆಕ್ಕೆಜೋಳ ಬೆಳೆಯುವ ಧಾವಂತದಲ್ಲಿ ಬಹುತೇಕ ಕಣ್ಮರೆಯಾಗಿದ್ದ ನವಣೆ, ಸಜ್ಜೆ, ಗುರೆಳ್ಳು, ರಾಗಿ ಈಗ ಎಲ್ಲೆಡೆ ನಳನಳಿಸುತ್ತಿವೆ.

‘ಮಳೆಯ ಕೊರತೆ ಕಾರಣ ರೈತರು ಕಿರುಧಾನ್ಯಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ. ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಸಿರಿಧಾನ್ಯಗಳು ಸೂಕ್ತವಾಗಿದೆ. ಹೆಚ್ಚು ಪೌಷ್ಟಿಕವಾಗಿರುವ ಸಿರಿಧಾನ್ಯಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ಏಕ ಪದ್ದತಿ ಬೆಳೆ ಬದಲು ಈ ರೀತಿಯ ಮಿಶ್ರ ಬೆಳೆ ಪದ್ಧತಿ ಸೂಕ್ತವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

ದಾವಣಗೆರೆ –ಚಿತ್ರದುರ್ಗ ಸಾವಯವ ಸಹಕಾರ ಸಂಘಗಳ ಒಕ್ಕೂಟದಿಂದ ತಾಲ್ಲೂಕಿನ ರೈತರಿಗೆ ಬೀಜಗಳನ್ನು ವಿತರಿಸುವ ಮೂಲಕ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ನಿಧಾನವಾಗಿ ರೈತರು ಬರ ಪ್ರತಿರೋಧದ ಬೆಳೆಗಳತ್ತ ಆಸಕ್ತಿ ವಹಿಸುತ್ತಿದ್ದಾರೆ.

‘ಸಂಘದಿಂದ ಮೊದಲ ಬಾರಿಗೆ ಈ ವರ್ಷ ತಾಲ್ಲೂಕಿನ ಆಕನೂರು, ಮಲೆಮಾಚಿಕೆರೆ ಮುಂತಾದ ಗ್ರಾಮಗಳಲ್ಲಿ ರೈತರಿಗೆ ಪ್ರಾಯೋಗಿಕವಾಗಿ ಬೀಜ ವಿತರಿಸಲಾಗಿದೆ. ಉತ್ತಮ ಇಳುವರಿ ನಿರೀಕ್ಷೆ ಇದೆ. ಸಂಘದಿಂದಲೇ ಧಾನ್ಯಗಳನ್ನು ಖರೀದಿಸಲಾಗುವುದು. 530ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗಿದೆ’ ಎಂದು ಸಂಘದ ಕ್ಷೇತ್ರ ಸಹಾಯಕ ಎಚ್‌. ಮಂಜಣ್ಣ ತಿಳಿಸಿದರು.

ಸಿರಿಧಾನ್ಯಗಳ ಈಚೆಗೆ ಬೇಡಿಕೆ ಹೆಚ್ಚುತ್ತಿದೆ. ಮಧುಮೇಹಿಗಳಿಗೆ ಮಾತ್ರವಲ್ಲ, ಆರೋಗ್ಯವಂತರಿಗೂ ಉತ್ತಮ ಪೌಷ್ಟಿಕ ಆಹಾರವಾಗಿದೆ. ಅಕ್ಕಿ, ಗೋಧಿ ಸೇವನೆಯ 40 ನಿಮಿಷದಲ್ಲಿ ಗ್ಲುಕೋಸ್‌ ರಕ್ತಕ್ಕೆ ಸೇರುತ್ತದೆ. ಆದರೆ ಸಿರಿಧಾನ್ಯಗಳ ಸೇವನೆಯ ಮೂರು, ನಾಲ್ಕು ತಾಸುಗಳ ನಂತರ ನಿಧಾನವಾಗಿ ಗ್ಲುಕೋಸ್‌ ಆಗಿ ಪರಿವರ್ತನೆಯಾಗುತ್ತದೆ. ಅಲ್ಲದೆ ನಾರಿನ ಅಂಶವೂ ಹೆಚ್ಚಿರುವುದರಿಂದ ಅತ್ಯುತ್ತಮ ಮತ್ತು ಆರೋಗ್ಯಕರ ಆಹಾರ ಇದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಹಕಾರ ಸಂಘದಿಂದ ಹೆಚ್ಚು ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮಂಜಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.