ADVERTISEMENT

ಸ್ತನಪಾನದಿಂದ ಭೇದಿ ನಿಯಂತ್ರಣ ಸಾಧ್ಯ

ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆಯಲ್ಲಿ ಡಿಎಚ್‌ಒ ಡಾ.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 9:02 IST
Last Updated 28 ಜುಲೈ 2015, 9:02 IST

ದಾವಣಗೆರೆ: ಮಕ್ಕಳಿಗೆ ತಾಯಂದಿರು ಎದೆ ಹಾಲುಣಿಸುವುದರಿಂದ ಅತಿಸಾರ ಭೇದಿ ನಿಯಂತ್ರಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಡಿ.ವಿಶ್ವನಾಥ್‌ ಹೇಳಿದರು.

ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದ ಅಪೌಷ್ಟಿಕ ಮಕ್ಕಳ ಪುನರ್‌ವಸತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

0–5 ವರ್ಷದ ಮಕ್ಕಳಲ್ಲಿ ಅತಿಸಾರ ಭೇದಿ ಹೆಚ್ಚಾಗಿ ಕಂಡು ಬರುತ್ತದೆ. ವಿಶ್ವದಲ್ಲಿ ಪ್ರತಿ ವರ್ಷ 10 ಲಕ್ಷಕ್ಕಿಂತ ಹೆಚ್ಚು ಮಕ್ಕಳು ಅತಿಸಾರ ಭೇದಿಯಿಂದ ಮೃತಪಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ ಎಂದು ತಿಳಿಸಿದರು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅತಿಸಾರ ಭೇದಿ ಪ್ರಕರಣಗಳು ಶೇ 25ರಷ್ಟು ಕಂಡು ಬಂದರೆ, ಭಾರತದಲ್ಲಿ ಶೇ 17ರಷ್ಟು ಈ ಪ್ರಕರಣಗಳು ದಾಖಲಾಗಿವೆ ಎಂದರು.

ಮಕ್ಕಳಿಗೆ ಆಹಾರ ಪದಾರ್ಥಗಳ ಜತೆಗೆ ನೀರಿನಾಂಶ ಇರುವ ಪದಾರ್ಥಗಳನ್ನು ಹೆಚ್ಚಾಗಿ ನೀಡುವುದರಿಂದ ಭೇದಿ ನಿಯಂತ್ರಿಸಬಹುದು. ಒಂದು ಗಂಟೆ ಒಳಗೆ ಮಕ್ಕಳಲ್ಲಿ ವಾಂತಿ, ಭೇದಿ ಆದಾಗ ಮಲ ವಿಸರ್ಜನೆಯಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳ ಪೋಷಣೆ ಬಗ್ಗೆ ಪೋಷಕರು ಜಾಗೃತರಾಗಿರಬೇಕು ಎಂದು ಪೋಷಕರಿಗೆ ಹೇಳಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ ಮಾತನಾಡಿ, ಮಕ್ಕಳಿಗೆ ಭೇದಿ ನಿಯಂತ್ರಣ ಜಲನ (ಒಆರ್‌ಎಸ್‌) ಹಾಗೂ ಜಿಂಕ್‌್ ಸಿರಪ್‌ ನೀಡುವುದರಿಂದ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದು. ಮಕ್ಕಳಿಗೆ ಆಹಾರ ಪದಾರ್ಥ ನೀಡುವಾಗ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜುಲೈ 27ರಿಂದ ಆಗಸ್ಟ್ 1ರ ವರೆಗೆ ಅತಿಸಾರ ಭೇದಿ ನಿಯಂತ್ರಣದ ಬಗ್ಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್‌ 3ರಿಂದ ಆಗಸ್ಟ್ 8ರ ವರೆಗೆ ಎದೆ ಹಾಲುಣಿಸು, ಶಿಶು ಮತ್ತು ಮಕ್ಕಳ ಆಹಾರ ಪದ್ಧತಿಗಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಮಯದಲ್ಲಿ ತಾಯಂದಿರಿಗೆ ಭೇದಿ ನಿಯಂತ್ರಣ ಜಲನ (ಒಆರ್‌ಎಸ್‌) ಹಾಗೂ ಜಿಂಕ್‌ ಸಿರಪ್‌ ವಿತರಿಸಲಾಯಿತು. ಡಾ.ರಾಘವೇಂದ್ರಸ್ವಾಮಿ, ಡಾ.ನಂದಾ, ಡಾ.ಸರೋಜಬಾಯಿ, ಡಾ.ಪಾಟೀಲ್‌, ಡಾ.ಚಂದ್ರನಾಯ್ಕ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.