ADVERTISEMENT

ಹಸಿ ಕಡಲೆ ಗಿಡಗಳಿಗೆ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:46 IST
Last Updated 26 ನವೆಂಬರ್ 2017, 8:46 IST
ಚನ್ನಗಿರಿ ಪಟ್ಟಣದ ಮೇಲಿನ ಬಸ್‌ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಸಿ ಕಡಲೆ ಇರುವ ಗಿಡಗಳನ್ನು ಆಯ್ದು ಕಟ್ಟುವ ಮೂಲಕ ಮಾರಾಟಕ್ಕೆ ಸಿದ್ದ ಮಾಡುತ್ತಿರುವುದು
ಚನ್ನಗಿರಿ ಪಟ್ಟಣದ ಮೇಲಿನ ಬಸ್‌ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಸಿ ಕಡಲೆ ಇರುವ ಗಿಡಗಳನ್ನು ಆಯ್ದು ಕಟ್ಟುವ ಮೂಲಕ ಮಾರಾಟಕ್ಕೆ ಸಿದ್ದ ಮಾಡುತ್ತಿರುವುದು   

ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಸ್‌ನಿಲ್ದಾಣಗಳಲ್ಲಿ ಹಸಿ ಕಡಲೆ ಗಿಡಗಳ ಮಾರಾಟ ಭರದಿಂದ ನಡೆಯುತ್ತಿದೆ. ಆದರೆ ಈ ಬಾರಿ ಹಸಿ ಕಡಲೆ ಗಿಡದ ದರವನ್ನು ಕೇಳಿ ಜನರಿಗೆ ಶಾಕ್ ಹೊಡೆದಂತಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಹಸಿ ಕಡಲೆ ಗಿಡಗಳ ಮಾರಾಟ ಕಾರ್ಯ ನಡೆಯುತ್ತದೆ. ಈ ಹಸಿ ಕಡಲೆಯನ್ನು ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಮೆಕ್ಕೆಜೋಳ ಬೆಳೆ ಕಟಾವು ಮಾಡಿದ ನಂತರ ಈ ಹಸಿ ಕಡಲೆಯನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದ ಕಾರಣದಿಂದಾಗಿ ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.

ಪ್ರತಿ ವರ್ಷ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಕಪ್ಪು ಮಣ್ಣಿನ ಭೂಮಿಯಲ್ಲಿ ಹಸಿ ಕಡಲೆಯನ್ನು ಬೆಳೆಯುತ್ತಿದ್ದರು. ಆದರೆ ಈ ಬಾರಿ 5 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಸಿ ಕಡಲೆ ಬಿತ್ತನೆಯಾಗಿದೆ. ಈ ಕಾರಣದಿಂದಾಗಿ ಮಾರಾಟಗಾರರು ನೆರೆಯ ಜಿಲ್ಲೆಗಳಿಂದ ಹಸಿಕಡಲೆ ಗಿಡಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಕಳೆದ ವರ್ಷ ಒಂದು ಕೆ.ಜಿ. ಹಸಿ ಕಡಲೆ ಗಿಡ ₹ 20ರಿಂದ ₹ 25 ದರ ಇತ್ತು. ಆದರೆ ಈ ಬಾರಿ ಒಂದು ಕೆ.ಜಿ ಹಸಿ ಕಡಲೆ ಗಿಡದ ಬೆಲೆ ₹ 60ಕ್ಕೆ ಮಾರಾಟವಾಗುತ್ತಿದೆ. ಜನರು ಅನಿವಾರ್ಯವಾಗಿ ದರ ಹೆಚ್ಚಿದ್ದರೂ ಹಸಿ ಕಡಲೆ ಗಿಡಗಳನ್ನು ಖರೀದಿಸುತ್ತಿರುವುದರಿಂದ ಭಾರಿ ಬೇಡಿಕೆ ಬಂದಿದೆ.

‘ನೆರೆಯ ಹಾವೇರಿ, ರಾಣೆಬೆನ್ನೂರು ಪಟ್ಟಣದಿಂದ ಹಸಿ ಕಡಲೆಯನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಅಲ್ಲಿ ಒಂದು ಕೆ.ಜಿ. ಹಸಿ ಕಡಲೆ ದರ ₹ 30 ಇದ್ದು, ಅಲ್ಲಿಂದ ತರುವುದಕ್ಕೆ ಸಾರಿಗೆ ವೆಚ್ಚ ಸೇರಿ ನಮಗೆ ₹ 40 ದರ ತಗಲುತ್ತದೆ. ಸ್ಥಳೀಯವಾಗಿ ₹ 60ರ ದರದಲ್ಲಿ ಹಸಿ ಕಡಲೆಯನ್ನು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮಾರಾಟಗಾರ ಅಕ್ರಮ್‌ ಭಾಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.