ADVERTISEMENT

ಹೂವು ಕೊಯ್ಯುವ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:19 IST
Last Updated 22 ಅಕ್ಟೋಬರ್ 2017, 5:19 IST

ಸಾಸ್ವೆಹಳ್ಳಿ: ಇಲ್ಲಿನ ಲಂಬಾಣಿ ಬುಡಕಟ್ಟು ಸಮುದಾಯದ ಯುವತಿಯರು ಶುಕ್ರವಾರ ಶ್ರದ್ಧಾಭಕ್ತಿಯಿಂದ ಸುಗ್ಗಿ ಹಬ್ಬದಂತೆ ದೀಪಾವಳಿಯನ್ನು ಆಚರಿಸಿದರು.
ಹೋಬಳಿಯ ಚನ್ನೇನಹಳ್ಳಿ, ಚೀಲಾಪುರ, ಚಿಕ್ಕಬಾಸೂರು, ತ್ಯಾಗದಕಟ್ಟೆ, ಮಾವಿನಕೋಟೆ, ಅರಸನಘಟ ಸೇರಿ ವಿವಿಧ ಬಂಜಾರ ತಾಂಡಾಗಳಲ್ಲಿ ದೀಪಾವಳಿ ಹಬ್ಬದಲ್ಲಿ ವರಸೆ, ದಾಡು, ಕೋರದವಾಳಿ, ಸೇವಾಲಾಲ್ ಮರಿಯಮ್ಮ, ಬಾಪು, ತೋನೆ, ಮೇರ, ದೇವರುಗಳನ್ನು ಪ್ರಾರ್ಥಿಸಿದರು.

ಹಟ್ಟಿ ನಾಯಕರ ಹೆಣ್ಣು ಮಕ್ಕಳ ನೇತೃತ್ವದಲ್ಲಿ ಗ್ರಾಮದ ಯುವತಿಯರು ಉಪವಾಸ ವ್ರತಗೈದು ಪೂಜೆ ಸಲ್ಲಿಸಿದರು. ನಂತರ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ತೆಲೆಯ ಮೇಲೆ ಹೂವು ತರುವ ಪುಟ್ಟಿ ಇಟ್ಟುಕೊಂಡು ತಮ್ಮ ಸಂಸ್ಕೃತಿ ಬಿಂಬಿಸುವ ಗೀತೆಗಳನ್ನು ರಾಗಬದ್ಧವಾಗಿ ಹಾಡುತ್ತ ಊರಾಚೆಯ ಬೆಟ್ಟದ ತಪ್ಪಲಿಗೆ ಹೋಗಿ ಒಣರಕೆ ಗಿಡಿದ ಹೂವುಗಳನ್ನು ಕೊಯ್ದು ತಂದರು.

ನಂತರ ಹಟ್ಟಿ ನಾಯಕರ ಮನೆಗೆ ಹೋಗಿ ಸಗಣಿ ಬೆನಕನನ್ನು ಇಟ್ಟು ವಲ್ಲೇಣಾ ಹೂವುಗಳಿಂದ ಅಲಂಕರಿಸಿ (ಹಟ್ಟಿ) ಗೋದ್ನಾ ತಯಾರಿಸಿದರು. ಮನೆ ಬಾಗಿಲ ಬಳಿ ಇಟ್ಟು, ಮನೆಯಲ್ಲಿ ಸದಾ ಶಾಂತಿ, ಸುಖ ನೆಲೆಸಿರಲಿ ಎಂದು ಪ್ರಾರ್ಥಿಸಿ ದೀಪ ಹಚ್ಚಿದರು. ಬಳಿಕ ಮನೆಯ ಎಲ್ಲಾ ಹಿರಿಯ ಸದಸ್ಯರನ್ನು ಸ್ಮರಿಸುವ ಪೂಜೆ ಸಲ್ಲಿಸಿದರು.

ADVERTISEMENT

ಅಮವಾಸ್ಯೆಯ ರಾತ್ರಿ ಎಲ್ಲರ ಮನೆಯಲ್ಲಿ ಹಣತೆ ಹಚ್ಚಿ ಗೋವುಗಳನ್ನು ಪೂಜಿಸಲಾಯಿತು. ಗ್ರಾಮದ ಸೇವಾಲಾಲ್ ದೇವಸ್ಥಾನದ ಬಳಿ ಹಟ್ಟಿನಾಯ್ಕ ಕಾರುಬಾರಿ, ಡಾವು ಹಾಗೂ ಗ್ರಾಮದ ಹಿರಿಯರು ಸೇರಿ ಹೋಮ, ಹವನ, ಮಾಡಿ, ನಗಾರಿ ಬಾರಿಸುತ್ತ ಲಚ್ಚಿ ರಾಂಡಾಬಾ ದೇವರ ಸ್ಮರಣೆ ಮಾಡಿ ಪ್ರಾರ್ಥಿಸಿದರು. ಈ ಪದ್ಧತಿಯನ್ನು ನಾಲ್ಕೈದು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಚೀಲಪುರ ಗ್ರಾಮದ ಹಟ್ಟಿನಾಯ್ಕ ಬಡಗಿ, ಲಕ್ಷ್ಮಣನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.