ADVERTISEMENT

ಹೆಚ್ಚು ಹಣ ವಸೂಲಿ: ಪರವಾನಗಿ ರದ್ದು

ಮರಳು ಗುತ್ತಿಗೆದಾರರಿಗೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:00 IST
Last Updated 25 ಮೇ 2017, 6:00 IST

ಹೊನ್ನಾಳಿ: ಪ್ರತಿ ಲೋಡ್ ಮರಳಿಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದವರ ಪರವಾನಗಿ ರದ್ದುಪಡಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮರಳು ಗಣಿಗಾರಿಕೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮರಳು ವಿಲೇವಾರಿ ಕುರಿತು ಗುತ್ತಿಗೆ
ದಾರರು ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಬಾರದು.

ಮರಳು ಗಣಿಗಾರಿಕೆ ಗುತ್ತಿಗೆ ಪಡೆದವರು ತಮ್ಮ ಕ್ವಾರಿಗಳ ಮುಂದೆ ಸರ್ಕಾರ ನಿಗದಿಪಡಿಸಿದ ದರವನ್ನು ಫಲಕದಲ್ಲಿ ನಮೂದಿಸಬೇಕು. ಕ್ವಾರಿಯ ಗಡಿಭಾಗವನ್ನು ಕೂಡಾ ಬಣ್ಣದಿಂದ ಗುರುತು ಹಾಕಬೇಕು. ತಮ್ಮ ಗಡಿ ಮೀರಿ ಮರಳು ತೆಗೆದು ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದ ನಿಯಮದ ಪ್ರಕಾರ ನದಿಗೆ ಹಿಟಾಚಿಯಂತಹ ಯಂತ್ರಗಳನ್ನು ಇಳಿಸಿ ಮರಳು ಗಣಿಗಾರಿಕೆ ಮಾಡಬಾರದು. ಈ ನಿಯಮ ಉಲ್ಲಂಘಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನ ಬಿದರಗಡ್ಡೆ, ಅಚ್ಯುತಾಪುರ, ಬೇಲಿಮಲ್ಲೂರು ಹಾಗೂ ಬೀರಗೊಂಡನಹಳ್ಳಿ ಕ್ವಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಈಗಾಗಲೇ ಮರಳು ವಿತರಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಕ್ವಾರಿಗಳಲ್ಲೂ ಅನುವು ಮಾಡಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ‘ತಾಲ್ಲೂಕಿನ ಜನಸಾಮಾನ್ಯರಿಗೆ ಮೊದಲು ಮರಳು ಸಿಗುವಂತೆ ನೋಡಿಕೊಳ್ಳಬೇಕು. ಟಾಸ್ಕ್‌ ಫೋರ್ಸ್ ಸಮಿತಿಯ ಸದಸ್ಯರು ರಾತ್ರಿ ವೇಳೆ ಮರಳು ಸಾಗಿಸದಂತೆ ಗಸ್ತು ತಿರುಗಬೇಕು. ಮರಳು ತುಂಬಿದ ವಾಹನಗಳು ತಾಲ್ಲೂಕು ಕೇಂದ್ರ ಬಿಟ್ಟು ಹೊರ
ಜಿಲ್ಲೆಗಳಿಗೆ ಹೋಗುವ ಮುನ್ಸೂಚನೆ ಸಿಕ್ಕಿದರೆ, ಅಂತಹ ವಾಹನಗಳನ್ನು ತಡೆದು ಪೊಲೀಸರಿಗೆ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಲ್ಲೇಶಪ್ಪ ಹಾಗೂ ರವಿ ಮಾತನಾಡಿದರು. ತಹಶೀಲ್ದಾರ್ ಎನ್.ಜೆ.ನಾಗರಾಜ್, ತಾಲ್ಲೂಕು ಪಂಚಾಯ್ತಿ ಇಒ ಡಾ.ಶಿವಪ್ಪ ಹುಲಿಕೆರೆ, ಪಿಎಸ್ಐ ನಾಗಯ್ಯ ಕಾಡದೇವರ ಮಠ, ನ್ಯಾಮತಿ ಪಿಎಸ್ಐ ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರದ ವಿನಯ್, ತಾಲ್ಲೂಕಿನ ಕಂದಾಯ ಅಧಿಕಾರಿಗಳು, ಹಾಗೂ ಮರಳು ಗುತ್ತಿಗೆದಾರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.