ADVERTISEMENT

3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ

ಹರಪನಹಳ್ಳಿ ಪಟ್ಟಣ ಸೌಂದರ್ಯಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 3:43 IST
Last Updated 22 ಏಪ್ರಿಲ್ 2017, 3:43 IST
ಹರಪನಹಳ್ಳಿ: ಪಟ್ಟಣದ ಸೌಂದರ್ಯ ಮತ್ತು ಅಭಿವೃದ್ಧಿ ಕಾಮಗಾರಿಗೆ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ₹ 3 ಕೋಟಿ ವೆಚ್ಚದ 8 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಪಿ.ರವೀಂದ್ರ ಶುಕ್ರವಾರ ಶಂಕುಸ್ಥಾಪನೆ ಮಾಡಿದರು.
 
‘1.50 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ವೃತ್ತದಿಂದ ಅರಸಿಕೆರೆ ರಸ್ತೆಯ ವಾಲ್ಮೀಕಿ ಭವನದವರೆಗೆ ರಸ್ತೆ ಅಭಿವೃದ್ಧಿ ಮತ್ತು ವಿಭಜಕ, ವಿದ್ಯುತ್‌ ಬೆಳಕಿಗೆ ಎಲ್‌ಇಡಿ ಬಲ್ಬ್‌ ಬಳಕೆ, 20ಲಕ್ಷ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಸರ್ಕಾರಿ ಪದವಿ ಕಾಲೇಜುವರೆಗೆ ರಸ್ತೆ ಡಾಂಬರೀಕರಣ, 28ಲಕ್ಷ ವೆಚ್ಚದಲ್ಲಿ ಆರ್‌ಕೆ ಬೇಕರಿಯಿಂದ ಫಾರ್ಮಸಿ ಕಾಲೇಜುವರೆಗೆ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಯಲಿದೆ’ ಎಂದು ಶಾಸಕ ರವೀಂದ್ರ ಹೇಳಿದರು.
 
‘ಕೃಷಿ ಇಲಾಖೆ ಹಿಂಭಾಗ ಬಾಲಕಿರಯರ ವಸತಿ ನಿಲಯದಿಂದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮನೆ ಹಿಂಬಾಗದ ವರೆಗೆ ರಸ್ತೆ ಡಾಂಬರೀಕರಣ, ಹಡಗಲಿ ರಸ್ತೆ ಎಂ.ಪಿ.ನಾಯ್ಕ ಕಟ್ಟಡದಿಂದ ಕಾಶಿ ಮಠದವರೆಗೆ ₹ 40 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ₹ 38 ಲಕ್ಷ ವೆಚ್ಚದಲ್ಲಿ ಸಿದ್ದೇಶ್ವರ ಬುಕ್‌ ಹೌಸ್‌ನಿಂದ ತಾಯಮ್ಮ ಹುಣಸೆ ರಸ್ತೆ ಮಾರ್ಗವಾಗಿ ಕೊಟ್ಟೂರು ರಸ್ತೆವರೆಗೆ ಕಾಂಕ್ರೀಟ್‌ ರಸ್ತೆ, ₹ 22 ಲಕ್ಷ ವೆಚ್ಚದಲ್ಲಿ ಟಿ.ಎಂ.ಚಂದ್ರಶೇಖರಯ್ಯ ಅವರ ಮನೆಯಿಂದ ಅರಸೀಕೆರೆ ರಸ್ತೆಯವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.
 
ಇದೇ ಸಂದರ್ಭದಲ್ಲಿ ಹಡಗಲಿ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಮೇಗಳ ಉಪ್ಪಾರಗೇರಿಯಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
 
ಪುರಸಭೆ ಸದಸ್ಯರಾದ ಕವಿತಾ ವಾಗೀಶಯ್ಯ, ಅರುಣ್‌ ಪೂಜಾರ್‌, ನಜೀರ್‌ ಅಹಮದ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಚ್‌.ಪರಶುರಾಮಪ್ಪ, ಮುಖಂಡರಾದ ಎಂ.ರಾಜಶೇಖರ್‌, ಎಂ.ವಿ ಅಂಜಿನಪ್ಪ, ಕೆ.ಎಂ.ವಾಗೀಶ್‌, ರೆಹಮಾನ್‌ ಸಾಬ್‌, ವಕೀಲ ವೆಂಕಟೇಶ್‌, ಗುತ್ತಿಗೆದಾರ ಚಿದಾನಂದಪ್ಪ ಇ.ಬಸವರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.