ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಸಿರಿಧಾನ್ಯ ಪ್ರೀತಿ

‘ಸಿರಿಧಾನ್ಯ ಗೀತೆ’ ರಚಿಸಿದ ಅಧಿಕಾರಿ ಶ್ರೀಧರಮೂರ್ತಿ

ಜಿ.ಜಗದೀಶ
Published 1 ಜನವರಿ 2018, 7:04 IST
Last Updated 1 ಜನವರಿ 2018, 7:04 IST

ಮಾಯಕೊಂಡ: ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೂ ಸಿರಿಧಾನ್ಯ ಕೃಷಿಯನ್ನು ರೈತರಿಗೆ ಮುಟ್ಟಿಸಲು ಅಧಿಕಾರಿಯೊಬ್ಬರು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಿ.ಎಂ.ಶ್ರೀಧರ ಮೂರ್ತಿ ಇಂತಹ ವಿಭಿನ್ನ ಯತ್ನಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ. ಸ್ವತಃ ‘ಸಿರಿಧಾನ್ಯ ಕುರಿತು ಗೀತೆ’ ರಚಿಸಿ, ಹಾಡಿ, ಚಿತ್ರೀಕರಿಸಿದ್ದಾರೆ. ಯುಟ್ಯೂಬ್ ನಲ್ಲಿ ಗೀತೆಯನ್ನು ಅಪ್‌ಲೋಡ್‌ ಮಾಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ಮಂದಿ ಲೈಕ್ಸ್ ಒತ್ತಿದ್ದಾರೆ.

ಸಿರಿಧಾನ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಹಾಗೂ ಸಿರಿಧಾನ್ಯ ಬಳಕೆಯ ಕುರಿತು ನಾಗರಿಕರರಿಗೆ ಅರಿವು ಮೂಡಿಸಲು ಡಿ.ಎಂ.ಶ್ರೀಧರ ಮೂರ್ತಿ ಕೃಷಿ ಇಲಾಖೆಯ ಸಾಂಪ್ರದಾಯಿಕ ಪ್ರಚಾರ ಕೈಬಿಟ್ಟು ತಂತ್ರಜ್ಞಾನದ ಮೊರೆಹೋಗಿದ್ದಾರೆ.

ADVERTISEMENT

ಸಿರಿಧಾನ್ಯ ಬೆಳೆಯುವಂತೆ ರೈತರನ್ನು ಉತ್ತೇಜಿಸಲು, ಅದನ್ನು ಬಳಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸಲು ನಿರ್ಧರಿಸಿದ ಅವರು, ಸಾಮಾಜಿಕ ಜಾಲತಾಣವನ್ನು ಆಯ್ಕೆ ಮಾಡಿಕೊಂಡರು. ಅವರ ಪ್ರಯತ್ನಕ್ಕೆ ಸಂಗೀತ ಜ್ಞಾನವೂ ನೆರವಾಯಿತು.

ಸುಮಾರು 5.20 ನಿಮಿಷ ಇರುವ ಹಾಡಿನ ಚಿತ್ರೀಕರಣದಲ್ಲಿ ಪತ್ನಿ, ಮಗಳು ಹಾಗೂ ಅಧಿಕಾರಿ ವರ್ಗ, ಅನುವುಗಾರರು ಹಾಗೂ ರೈತರನ್ನು ಬಳಸಿಕೊಂಡಿದ್ದಾರೆ. ಸಿರಿಧಾನ್ಯ ಬೆಳೆದ ತಾಕುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂಪಾದ ಸಂಗೀತ ಅಳವಡಿಸಿಕೊಂಡಿದ್ದು, ಹಿಂದೂಸ್ಥಾನಿ, ಶಾಸ್ತ್ರೀಯ ಮತ್ತು ರಾಕ್ ಪ್ರಕಾರಗಳನ್ನು ಬಳಸಿಕೊಂಡಿದ್ದಾರೆ. ಈ ಹಾಡು ವಾರದಲ್ಲಿ 5 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ ಎಂದರು.

ಕೃಷಿ ಅಧಿಕಾರಿಯ ವಿಶಿಷ್ಟ ಪ್ರಯತ್ನ ಹೋಬಳಿಯ ರೈತರಲ್ಲಿ ಸಂತಸ ಮೂಡಿಸಿದೆ. ತಂತ್ರಜ್ಞಾನ ಬಳಸಿ ಸಿರಿಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ. ಎಲ್ಲ ಅಧಿಕಾರಿಗಳು ಈರೀತಿ ವಿನೂತನ ಯತ್ನ ನಡೆಸಬೇಕು ಎನ್ನುತ್ತಾರೆ ಹೋಬಳಿಯ ರೈತರು ಮತ್ತು ಯುವಕರು.

**

ಸಿರಿಧಾನ್ಯ ಗೀತೆಗೆ ಗರಿ…

‘ವಿಶ್ವ ಸಿರಿಧಾನ್ಯ ಮೇಳ’ಕ್ಕೆ ಹಾಡನ್ನು ಬಳಸಲು ಬೇಡಿಕೆ ಬಂದಿದೆ. ಈಚೆಗೆ ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಫಾರ್ ಸೆಮಿ ಏರಿಡ್ ಟ್ರಾಪಿಕ್ಸ್ (ಇಕ್ರಿಸ್ಯಾಟ್) ನಿರ್ದೇಶಕಿ ಜೋಹಾನಾ ಇಂಗ್ಲಿಷ್ ನಲ್ಲಿ ಸಬ್ ಟೈಟಲ್ ಅಳವಡಿಸಿದ್ದಾರೆ. ವಿಶ್ವ ಸಿರಿಧಾನ್ಯ ಮೇಳದಲ್ಲೂ ಇದನ್ನು ಬಳಸಲು ಪ್ರಸ್ತಾವ ಬಂದಿದೆ ಎಂದರು ಶ್ರೀಧರ ಮೂರ್ತಿ.

ಸಿರಿಧಾನ್ಯ ಗೀತೆ ಹುಟ್ಟಿದ್ದು...

ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸುವ ಪ್ರಚಾರಕ್ಕೆ ಹೋದಾಗ ಅನಾಯಾಸ ಅನಿಸಿದ್ದನ್ನು ಬರೆದು ವಾಟ್ಸಪ್ ಗ್ರೂಪ್‌ಗೆ ಹಾಕಿದೆ. ಓದಿದ ಕೆಲವರು ಪ್ರೋತ್ಸಾಹಿಸಿ ಮ್ಯೂಸಿಕ್ ಅಳವಡಿಸಿ ಹಾಡಿದರೆ ಚೆನ್ನಾಗಿರುತ್ತೆ ಎಂದರು. ಸಂಗೀತ ಕಲಿಯುತ್ತಿರುವ ಮಗಳು ಪ್ರಕೃತಿ ಜತೆ ಸೇರಿ ಹಾಡನ್ನು ಹಾಡಲಾಯಿತು. ಜಂಟಿ ನಿರ್ದೇಶಕರು ಚಿತ್ರೀಕರಣ ಮಾಡಲು ಆಸಕ್ತಿವಹಿಸಿ ಪ್ರೋತ್ಸಾಹಿಸಿದರು ಎಂದು ಸ್ಮರಿಸಿದರು.

ದಾವಣಗೆರೆಯ ರೈಸಿಂಗ್ ಟಾಲೆಂಟ್ ಸ್ಟುಡಿಯೋದದಲ್ಲಿ ರೇಕಾರ್ಡಿಂಗ್ ಮಾಡಲಾಯಿತು. ಬೆಂಗಳೂರಿನಲ್ಲಿ ಮ್ಯೂಸಿಕ್ ಕಂಪೋಸ್‌ ಮಾಡಲಾಯಿತು. ಸಾಮಾಜಿಕ ಜಾಲ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ಶ್ರೀಧರಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.