ADVERTISEMENT

ಮಕ್ಕಳೊಂದಿಗೆ ಮಕ್ಕಳಾಗಿ ಕಲಿಸಿ

ಸೋಮೇಶ್ವರೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪುರಸ್ಕೃತ ಸುರೇಶ್‌ ಕುಲಕರ್ಣಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 10:05 IST
Last Updated 15 ಜನವರಿ 2018, 10:05 IST

ದಾವಣಗೆರೆ: ಶಿಕ್ಷಕರು ಮಕ್ಕಳೊಂದಿ ಮಕ್ಕಳಾಗಿ ಕಲಿಸಲು ಮುಂದಾದಾಗ ಮಾತ್ರ ಯಾವುದೇ ವಿಷಯವನ್ನಾದರೂ ಸುಲಭವಾಗಿ ಅರ್ಥೈಸಬಹುದು ಎಂದು ರಾಷ್ಟ್ರಪತಿ ಪುರಸ್ಕೃತ ಅಧ್ಯಾಪಕ ಸುರೇಶ್‌ ಕುಲಕರ್ಣಿ ತಿಳಿಸಿದರು.

ನಗರದ ಸೋಮೇಶ್ವರ ವಿದ್ಯಾಲಯ ಹಮ್ಮಿಕೊಂಡಿರುವ ಸೋಮೇಶ್ವರೋತ್ಸವ–2018 ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಪಠ್ಯಕ್ರಮದಲ್ಲಿ ಮಕ್ಕಳಿಗೆ ಬೇಕಾದ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಹಾಗಾಗಿ ಮಕ್ಕಳು ಆಸಕ್ತಿಯಿಂದ ಕಲಿಯದೇ ಪೋಷಕರ ಒತ್ತಡಕ್ಕೆ ಕಲಿಯುತ್ತಿದ್ದಾರೆ. ಅನೇಕರು ವಿಷಯಗಳನ್ನು ಕಂಠಪಾಠ ಮಾಡಿ ಪರೀಕ್ಷೆ ಮುಗಿಸುತ್ತಿದ್ದಾರೆ ಹೊರತು ವಿಷಯಗಳನ್ನು ಚರ್ಚೆ ಮಾಡಿ ಜ್ಞಾನ ಬೆಳೆಸಿಕೊಳ್ಳಲು ಆದ್ಯತೆ ನೀಡುತ್ತಿಲ್ಲ. ಹಾಗಾಗಿ ಈ ವ್ಯವಸ್ಥೆ ಬದಲಾಗಿ ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತಹ ವಿಷಯಗಳನ್ನು ಕಲಿಸುವತ್ತ ಶಾಲೆಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.

ADVERTISEMENT

ವೈದ್ಯೆ ಡಾ.ಶಾರದ ಶೆಟ್ಟಿ ಮಾತನಾಡಿ, ‘ಮಕ್ಕಳಿಗೆ ವಿದ್ಯೆ ಜತೆಗೆ ಬುದ್ಧಿ, ಸಂಸ್ಕೃತಿ ಅಶ್ಯಕವಿದ್ದು, ಅವುಗಳನ್ನು ಕಲಿಸುವ ನಿಟ್ಟಿನಲ್ಲಿ ಪೋಷಕರು ಶಿಕ್ಷಕರು ಮುಂದಾಗಬೇಕು. ಇಂದಿನ ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು, ಅದನ್ನು ಅರಿತು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕು. ಇನ್ನು 10ವರ್ಷಗಳ ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಈ ಸಮಯದಲ್ಲಿ ಕಲಿತ ಜೀವನ ಮೌಲ್ಯಗಳು ಜೀವನವಿಡಿ ಸಹಕಾರಿಯಾಗುತ್ತವೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕ ಸುರೇಶ್‌ ಕುಲಕರ್ಣಿ ಅವರಿಗೆ ‘ಸೋಮೇಶ್ವರ ಶಿಕ್ಷಣಸಿರಿ’ ಪ್ರಶಸ್ತಿ, ಹಾಗೂ ವೈದ್ಯರಾದ ಡಾ.ಶಾಂತಾಭಟ್‌, ಡಾ.ಶ್ರೀಪಾದ್‌ ಭಟ್‌ ಅವರಿಗೆ ‘ಸೋಮೇಶ್ವರ ಸಿರಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಎಸ್‌.ಎ.ರವೀಂದ್ರನಾಥ್‌, ಉದ್ಯಮಿ ಮುರುಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.