ADVERTISEMENT

ಪೂಜಾರಿ ಪುಸ್ತಕ ಆತ್ಮಚರಿತ್ರೆಯಲ್ಲ; ಪಾಪದ ಚರಿತ್ರೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 6:49 IST
Last Updated 10 ಫೆಬ್ರುವರಿ 2018, 6:49 IST

ಮಂಗಳೂರು: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪುಸ್ತಕ ಆತ್ಮಚರಿತ್ರೆಯಲ್ಲ, ಅದು ಪಾಪದ ಚರಿತ್ರೆ ಎಂದು ಯುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಗಾರಪ್ಪನವರು ಇಂದಿರಾ ಗಾಂಧಿಗೆ ಹೊಡೆಯಲು ಮುಂದಾಗಿದ್ದರು. ಬಂಗಾರಪ್ಪ ಭ್ರಷ್ಟಾಚಾರಿ ಎಂದೆಲ್ಲ ಪೂಜಾರಿ ಆರೋಪಿಸಿದ್ದಾರೆ. ಅದೆಲ್ಲ ಶುದ್ಧ ಸುಳ್ಳು. ಬಂಗಾರಪ್ಪ ಅಂತಹ ವ್ಯಕ್ತಿಯೇ ಅಲ್ಲ. ಎಲ್ಲ ಆರೋಪಗಳಿಂದಲೂ ಅವರು ಖುಲಾಸೆ ಆಗಿದ್ದರು. ಅದಾಗ್ಯೂ ಪೂಜಾರಿ ಅವರು ಬಂಗಾರಪ್ಪ ಅವರನ್ನು ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ’ ಎಂದರು.

‘ಒಂದು ವೇಳೆ ಪೂಜಾರಿ ಅವರು ಬರೆದಿದ್ದು ನಿಜವೇ ಆಗಿದ್ದರೆ, ರಾಜೀವ್‌ ಗಾಂಧಿ ಅವರೇ ಬಂಗಾರಪ್ಪ ಅವರನ್ನು ಕರೆದು ಮುಖ್ಯಮಂತ್ರಿ ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದ ಅವರು, ಪೂಜಾರಿ ಅವರದ್ದು ಕೇವಲ ಕಾಲ್ಪನಿಕ ಕತೆ ಎಂದರು.

ADVERTISEMENT

‘ಪೂಜಾರಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಎಚ್.ಡಿ. ದೇವೇಗೌಡ, ಎಂ. ವೀರಪ್ಪ ಮೊಯಿಲಿ ಸೇರಿದಂತೆ ಅನೇಕರ ವಿರುದ್ಧ ಆರೋಪ ಮಾಡಿದ್ದಾರೆ. ಒಂದೋ ಪೂಜಾರಿ ಅವರಿಗೆ ಅರಳು ಮರಳಾಗಿರಬಹುದು. ಇಲ್ಲವೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ’ ಎಂದು ದೂರಿದರು.

‘ಕರಾವಳಿಯಲ್ಲಿ ಬಿಲ್ಲವ ಯುವಕರು ದಾರಿ ತಪ್ಪಲು ಹಾಗೂ ಗಲಾಟೆಗಳು ಸಂಭವಿಸಲು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಅವರೇ ಕಾರಣ. ಬಿಲ್ಲವ ಯುವಕರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನಾರ್ದನ ಪೂಜಾರಿ ಒಬ್ಬ ನಿಜವಾದ ಆರ್‌ಎಸ್‌ಎಸ್‌ ವ್ಯಕ್ತಿ’ ಎಂದು ಆರೋಪಿಸಿದರು.

‘ತಮ್ಮ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡಿದ್ದರು. ಕಾಂಗ್ರೆಸ್‌ ಪಕ್ಷದೊಳಗೆ ಇದ್ದು, ಪಕ್ಷದ ಮುಖಂಡರನ್ನೇ ಟೀಕಿಸುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ, ಇಂತಹ ಅನುಮಾನ ಮೂಡುವುದು ಸಹಜ’ ಎಂದರು.

ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಅವರ ವಿರುದ್ಧ ಹಲವು ಆರೋಪಗಳಿದ್ದರೂ, ಅವರ ಮೇಲೆ ಪ್ರಕರಣ ದಾಖಲಿಸಲು ಕಾಂಗ್ರೆಸ್‌ ಸರ್ಕಾರ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.