ADVERTISEMENT

ಮಾರ್ಚ್ 2ರಿಂದ ‘ಶರಣ ಸಂಸ್ಕೃತಿ ಉತ್ಸವ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 10:34 IST
Last Updated 22 ಫೆಬ್ರುವರಿ 2018, 10:34 IST
ಶಿವಯೋಗಾಶ್ರಮ
ಶಿವಯೋಗಾಶ್ರಮ   

ದಾವಣಗೆರೆ: ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 61ನೇ ಸ್ಮರಣೋತ್ಸವದ ಅಂಗವಾಗಿ ಮಾರ್ಚ್‌ 2ರಿಂದ ಮೂರು ದಿನಗಳ ಕಾಲ ನಗರದ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ‘ಶರಣ ಸಂಸ್ಕೃತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಉತ್ಸವದಲ್ಲಿ ‘ಜಯದೇವಶ್ರೀ‘ ಮತ್ತು ‘ಶೂನ್ಯಪೀಠ’ ಪ್ರಶಸ್ತಿಗಳ ಪ್ರದಾನ, ಸಹಜ ಶಿವಯೋಗ, ಚಿಂತನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾರ್ಚ್‌ 2ರಂದು ಸಂಜೆ 6.15ಕ್ಕೆ ಬಸವತತ್ವ ಧ್ವಜಾರೋಹಣ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಉತ್ಸವಕ್ಕೆ ಚಾಲನೆ ನೀಡುವರು. ಸಂಜೆ 6.30ಕ್ಕೆ ಪ್ರೇರಣೆ ಮತ್ತು ಪ್ರಚೋದನೆ ಕುರಿತು ಚಿಂತನಾ ಸಮಾವೇಶ ನಡೆಯಲಿದೆ. ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸಮಾವೇಶ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಜಯದೇವ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ADVERTISEMENT

3ರಂದು ಬೆಳಿಗ್ಗೆ 9.45ಕ್ಕೆ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ‘ಜಯದೇವ ಟ್ರೋಫಿ‘ ಆಯೋಜಿಸಲಾಗಿದೆ. ಅದೇ ದಿನ ಸಂಜೆ 6.30ಕ್ಕೆ ಸಾಧಕರ ಸಮಾವೇಶದಲ್ಲಿ ‘ಜಯದೇವಶ್ರೀ’ ಮತ್ತು ‘ಶೂನ್ಯಪೀಠ’ ಪ್ರಶಸ್ತಿಗಳನ್ನು
ಪ್ರದಾನ ಮಾಡಲಾಗುವುದು. ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು ಎಂದರು.

4ರಂದು ಬೆಳಿಗ್ಗೆ 9.30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ನಡೆಯಲಿದೆ. ಸಂಜೆ 6.30ಕ್ಕೆ ‘ಅನುಕರಣೆ ಮತ್ತು ಅನುಸರಣೆ’ ಕುರಿತು ಚಿಂತನಾ ಸಮಾವೇಶ ಆಯೋಜಿಸಲಾಗಿದೆ. ನಟ ಉಪೇಂದ್ರ ‘ಚುನಾವಣೆ ಮತ್ತು ಸುಧಾರಣೆ’ ಕುರಿತು ಮಾತನಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಅವರೂ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಪ್ರತಿ ದಿನ ಬೆಳಿಗ್ಗೆ ಸಹಜ ಶಿವಯೋಗ, ಸಂಜೆ ಜಮುರಾ ಕಲಾಲೋಕದ ಕಲಾವಿದರಿಂದ ವಚನಗಾಯನ ಆಯೋಜಿಸಲಾಗಿದೆ. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇದೇ 24ರಿಂದ ಪ್ರತಿ ದಿನ ಸಂಜೆ 6ರಿಂದ ರಾತ್ರಿ 8ರವರೆಗೆ ‘ ಶ್ರೀಜಯದೇವ ಲೀಲೆ’ ಕುರಿತು →ಪ್ರವಚನ, ಬೆಳಿಗ್ಗೆ 7.30ರಿಂದ 9ರವರೆಗೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಲ್ಲದೇ, ಮಾರ್ಚ್‌ 5 ಮತ್ತು 6ರಂದು ಪ್ರತಿ ದಿನ ಸಂಜೆ 6.30ಕ್ಕೆ ಜಮುರಾ ನಾಟಕೋತ್ಸವ ನಡೆಯಲಿದೆ. 5ರಂದು ‘ಶರಣ ಪಥ–ಕ್ರಾಂತಿಪಥ’, 6ರಂದು ‘ನವಿಲೂರ ನಿಲ್ದಾಣ’ ನಾಟಕಗಳ ಪ್ರದರ್ಶನ ಇದೆ. ಚಿತ್ರದುರ್ಗದ ಜಮುರಾ ಕಲಾಲೋಕದ ಕಲಾವಿದರು ನಾಟಕಗಳನ್ನು ಪ್ರದರ್ಶಿಸುವವರು ಎಂದರು. ಬಸವ ಕೇಂದ್ರ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ಅವರೂ ಇದ್ದರು.

‘ಪ್ರಗತಿಯಲ್ಲಿ ಬಸವ ಪ್ರತಿಮೆ ನಿರ್ಮಾಣ’

ಚಿತ್ರದುರ್ಗದಲ್ಲಿ ಬಸವ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದಿಂದ ಅನುದಾನದ ನೆರವು ಕೇಳಲಾಗಿತ್ತು. ಇದುವರೆಗೂ ಸಿಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಇದನ್ನು ತರಲಾಗಿದೆ ಎಂದು ಶರಣರು ಪ್ರತಿಕ್ರಿಯಿಸಿದರು.

‘ಗಟ್ಟಿ ಧರ್ಮಕ್ಕೆ ಭವಿಷ್ಯ ಇದೆ’

ಗಟ್ಟಿ ವಿಚಾರಗಳಿಂದ ಕೂಡಿದ, ಸ್ಪಷ್ಟ ಸೈದ್ಧಾಂತಿಕ ನೆಲೆಗಳಿಂದ ನಿರ್ಮಾಣಗೊಂಡ ಧರ್ಮಕ್ಕೆ ಉಜ್ವಲ ಭವಿಷ್ಯ ಇದೆ. ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಚರ್ಚೆ ರಾಷ್ಟ್ರಮಟ್ಟದಲ್ಲೂ ನಡೆದಿದೆ. ಎಲ್ಲರನ್ನೂ ಒಳಗೊಳ್ಳುವುದೇ ಬಸವ ತತ್ವ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವುದಕ್ಕೆ ಜನರಿಗೆ ಸಮಯ ಬೇಕಾಗುತ್ತದೆ ಎಂದು ಶರಣರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.