ADVERTISEMENT

‘ಅಂಬೇಡ್ಕರ್‌ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕೀಯ’

ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶೆಟ್ಟರ್, ಜೋಶಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 8:15 IST
Last Updated 15 ಏಪ್ರಿಲ್ 2018, 8:15 IST

ಹುಬ್ಬಳ್ಳಿ: ‘ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಅಲ್ಲದೆ, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ಅಂಬೇಡ್ಕರ್‌ ಜಯಂತಿ ನಿಮಿತ್ತವಾಗಿ ನಗರದಲ್ಲಿ ಅವರ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಯಾವತ್ತೂ ದಲಿತರ ಪರ. ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಗೊಳಿಸಲಾಗುವುದು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ದೇಶದಲ್ಲಿ ಅಸಮಾನತೆ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೆ ಮೀಸಲಾತಿ ಇರಬೇಕೆಂಬುದು ಪಕ್ಷದ ನಿಲುವು’ ಎಂದು ಅವರು ಹೇಳಿದರು.

‘ಇಡೀ ಜಗತ್ತಿನಲ್ಲಿ ಮಾದರಿಯಾದ ಸಂವಿಧಾನವಿದ್ದರೆ ಅದು ಭಾರತದ ಸಂವಿಧಾನ ಮಾತ್ರ. ಚಹಾ ಮಾರುವ ಹುಡುಗ ದೇಶದ ಪ್ರಧಾನಮಂತ್ರಿಯಾಗಲು ಅಂಬೇಡ್ಕರ್‌ ರಚಿಸಿರುವ ಸಂವಿಧಾನವೇ ಕಾರಣ’ ಎಂದರು.

ADVERTISEMENT

ಮುಖ್ಯಮಂತ್ರಿಗೆ ಸೋಲಿನ ಭಯ: ‘ಸೋಲಿನ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎರಡು ಕಡೆಯಲ್ಲ, ನಾಲ್ಕು ಕಡೆ ಸ್ಪರ್ಧಿಸಿದರೂ ಈ ಬಾರಿ ಸಿದ್ದರಾಮಯ್ಯ ಪರಾಭವಗೊಳ್ಳಲಿದ್ದಾರೆ’ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂಬ ಸಮೀಕ್ಷಾ ವರದಿಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಚುನಾವಣೆ ಸಂದರ್ಭದಲ್ಲಿ ಇಂತಹ ಸಮೀಕ್ಷಾ ವರದಿಗಳು ಬರುವುದು ಸಹಜ. ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅ‌ವರು ಇನ್ನೂ ಪ್ರಚಾರ ಮಾಡಿಲ್ಲ. ಶಾ ಅವರೂ ಕೆಲವೇ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ರಾಜ್ಯ ನಾಯಕರು ಎಲ್ಲ ಕಡೆ ಪ್ರಚಾರ ನಡೆಸಲಿದ್ದು, ಮಿಷನ್‌ 150 ಗುರಿ ಮುಟ್ಟುವುದರಲ್ಲಿ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಸ್ತಿನಿಂದ ನಡೆದುಕೊಳ್ಳಬೇಕು: ಚಿತ್ರದುರ್ಗದ ಮೊಳಕಾಲ್ಮುರಿನಲ್ಲಿ ಶಾಸಕ ಎಸ್. ತಿಪ್ಪೇಸ್ವಾಮಿ ಬೆಂಬಲಿಗರು ಗಲಾಟೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ‘ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತದೆಯೋ ಅವರ ಪರ ಪ್ರಚಾರ ಮಾಡಬೇಕು. ಯಾರೇ ಆಗಲಿ ಪಕ್ಷದ ಶಿಸ್ತಿಗೆ ಬದ್ಧರಾಗಿರಬೇಕು’ ಎಂದರು. ‘ಶ್ರೀರಾಮುಲು ಆಶೀರ್ವಾದ ದಿಂದಲೇ ತಿಪ್ಪೇಸ್ವಾಮಿ ಗೆದ್ದಿದ್ದರು. ಈಗ ಅವರಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಹೇಳಿದರು.

ಸೀಮಾ ಮಸೂತಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಶ್ನೆಗೆ, ‘ಚುನಾವಣೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಆದರೆ, ಸಮೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿದರು. ಮೇಯರ್‌ ಸುಧೀರ ಸರಾಫ್, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಡಿ.ಕೆ. ಚವ್ಹಾಣ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮಾ. ನಾಗರಾಜ, ರಂಗಾ ಬದ್ದಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.