ADVERTISEMENT

ಅಕ್ಕಿ, ರಾಗಿ ಬದಲು ಪಿಜ್ಜಾ, ಬರ್ಗರ್‌

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ. ಹೊಯ್ಸಳ ಚಾಣಕ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:05 IST
Last Updated 20 ಜನವರಿ 2017, 9:05 IST
ಪಿ.ಸಿ. ಜಾಬಿನ್‌ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಗುಣಮಟ್ಟದ ಆಹಾರ, ಔಷಧ ಮತ್ತು ಸುರಕ್ಷಿತ ಪರಿಸರಕ್ಕಾಗಿ ಕೃಷಿ ಹಾಗೂ ಅರಣ್ಯ ಜೀವವೈವಿದ್ಯತೆ’ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಐ.ಐ.ಎಸ್‌.ಸಿ. ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ. ಹೊಯ್ಸಳ ಚಾಣಕ್ಯ ಉದ್ಘಾಟಿಸಿದರು. ಕೆ.ಎಲ್‌.ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಸ್‌.ಐ. ಮುನವಳ್ಳಿ, ಡಾ. ಎಸ್‌.ವಿ. ಹಿರೇಮಠ, ಸಂಯೋಜಕ ಡಾ. ಬಿ.ಎಸ್‌. ಅಗಡಿ ಇದ್ದರು.
ಪಿ.ಸಿ. ಜಾಬಿನ್‌ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಗುಣಮಟ್ಟದ ಆಹಾರ, ಔಷಧ ಮತ್ತು ಸುರಕ್ಷಿತ ಪರಿಸರಕ್ಕಾಗಿ ಕೃಷಿ ಹಾಗೂ ಅರಣ್ಯ ಜೀವವೈವಿದ್ಯತೆ’ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಐ.ಐ.ಎಸ್‌.ಸಿ. ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ. ಹೊಯ್ಸಳ ಚಾಣಕ್ಯ ಉದ್ಘಾಟಿಸಿದರು. ಕೆ.ಎಲ್‌.ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಸ್‌.ಐ. ಮುನವಳ್ಳಿ, ಡಾ. ಎಸ್‌.ವಿ. ಹಿರೇಮಠ, ಸಂಯೋಜಕ ಡಾ. ಬಿ.ಎಸ್‌. ಅಗಡಿ ಇದ್ದರು.   

ಹುಬ್ಬಳ್ಳಿ: ‘ಬದಲಾದ ಜೀವನಶೈಲಿಯಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರ ಪರಿಣಾಮ ಮರೆತಿದ್ದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ದುಬಾರಿ ಹಣ ಕೊಟ್ಟು ಅಳವಡಿಸಿಕೊಳ್ಳುತ್ತಿದ್ದೇವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸುಸ್ಥಿರ ತಂತ್ರಜ್ಞಾನ ಕೇಂದ್ರದ ಮುಖ್ಯ ಸಂಶೋಧನಾ ವಿಜ್ಞಾನಿ ಪ್ರೊ. ಹೊಯ್ಸಳ ಚಾಣಕ್ಯ ಹೇಳಿದರು.

ಪಿ.ಸಿ. ಜಾಬಿನ್‌ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬುಧವಾರ ಆಯೋಜಿಸಲಾಗಿದ್ದ ‘ಗುಣಮಟ್ಟದ ಆಹಾರ, ಔಷಧ ಮತ್ತು ಸುರಕ್ಷಿತ ಪರಿಸರಕ್ಕಾಗಿ ಕೃಷಿ ಹಾಗೂ ಅರಣ್ಯ ಜೀವವೈವಿದ್ಯತೆ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಅಕ್ಕಿ, ರಾಗಿ, ಧಾನ್ಯಗಳನ್ನು ನಾವು ಮರೆತುಹೋಗಿದ್ದೇವೆ. ಅತ್ಯಂತ ಸುಲಭವಾಗಿ ಬೆಳೆಯುವಂತಹ ಇಂತಹ ಧಾನ್ಯಗಳನ್ನು ಇಂದು ಜೀವನಶೈಲಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಮತ್ತೆ ಬಳಸಲು ಆರಂಭಿಸುತ್ತಿದ್ದೇವೆ. ಆದರೆ ಇದಕ್ಕೆ ಅತಿ ಹೆಚ್ಚಿನ ಹಣವನ್ನು ನಾವು ನೀಡುತ್ತಿದ್ದೇವೆ. ಇದು ಆತಂಕಕಾರಿ. ಇದನ್ನು ನಾವು ಸರಿಯಾಗಿ ಬಳಸಿಕೊಳ್ಳುವತ್ತ ಆಲೋಚಿಸಬೇಕು’ ಎಂದು ಅವರು ಹೇಳಿದರು.

‘ಐಷಾರಾಮಿ ಜೀವನಶೈಲಿಗೆ ಹೊಂದಿಕೊಂಡಿರುವ ನಾವುಗಳು ಇಂದು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಅಡುಗೆ ಮನೆಗಳನ್ನು ಕಟ್ಟುತ್ತಿದ್ದೇವೆ. ಆದರೆ, ಅವುಗಳನ್ನು ಬಳಸುತ್ತಿಲ್ಲ. ಅಡುಗೆ ಮನೆಯಲ್ಲಿ ಸಿದ್ಧಪಡಿಸಲಾಗುವ ಆರೋಗ್ಯದಾಯಕ ಆಹಾರಗಳಿಂದ ದೂರಾಗಿ, ಪಿಜ್ಜಾ, ಬರ್ಗರ್‌ಗಳಂತಹ ಸಿದ್ಧ ಆಹಾರಗಳು ಮನೆ ಬಾಗಿಲಿಗೆ ಬರುವುದಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಿದ್ದೇವೆ’ ಎಂದರು.

‘ಆಹಾರ ಉತ್ಪಾದನೆ ಮತ್ತು ಸಂಸ್ಕರಣೆಯ ರೀತಿ ಬದಲಾಗಿದ್ದು, ಮನೆಯ ಹೊರಗಡೆ ಅಡುಗೆ ಮನೆಗಳು ತಯಾರಾಗಿದ್ದು, ಅವುಗಳನ್ನು ಮನೆಗೇ ತರಿಸಿಕೊಂಡು ತಿನ್ನುತ್ತಿದ್ದೇವೆ. ಒಂದೆರಡು ಬನ್‌ಗಳ ನಡುವೆ ಎಲೆಕೋಸಿನ ಎಲೆಗಳನ್ನು ಇಟ್ಟು ನೀಡುವ ಬರ್ಗರ್‌ಗೆ ನೂರಾರು ರೂಪಾಯಿ ನೀಡಿ ತಿನ್ನುತ್ತೇವೆ. ಬೆಂಗಳೂರಿನ ಕೆಲವು ಭಾಗದಲ್ಲಿ ಅದರ ಬೆಲೆ ಸಾವಿರ ರೂಪಾಯಿ ಆಗಿದೆ’ ಎಂದು ಚಾಣಾಕ್ಯ ಆತಂಕ ವ್ಯಕ್ತಪಡಿಸಿದರು.

‘ಅರಣ್ಯ ಬಳಕೆಯಲ್ಲಿ ನಮ್ಮಲ್ಲಿ ಇತಿಮಿತಿಗಳಿಲ್ಲ. ಒಂದು ಕೆ.ಜಿ ಕಾಗದ ತಯಾರಿಕೆಗೆ 150 ಲೀಟರ್‌ ನೀರು ಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶೇ.70ರಷ್ಟು ನಷ್ಟವಾಗುತ್ತಿದೆ. ಹೀಗಾಗಿ ಅರಣ್ಯ ನಾಶವೂ ಆಗುತ್ತಿದೆ. ಜನವು ತಾವು ಬಳಸುವ ವಸ್ತುಗಳತ್ತ ಕಾಳಜಿ ವಹಿಸಬೇಕಾದ ಅಗತ್ಯ ಇದೆ’ ಎಂದು ಹೇಳಿದರು.

ಕೆ.ಎಲ್‌.ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಸ್‌.ಐ. ಮುನವಳ್ಳಿ ಮಾತನಾಡಿ, ‘ನವಣೆ, ಸಜ್ಜೆ, ಹಾರಕ, ಕೊರ್‍ಲೆಯಂತಹ ಧಾನ್ಯಗಳನ್ನು ನಾವು ಮರೆತಿದ್ದೇವೆ. ಇವುಗಳು ಆರೋಗ್ಯಕರ. ವಿದ್ಯಾರ್ಥಿಗಳು ಬೇರೆ ರೀತಿಯ ಹವ್ಯಾಸಗಳನ್ನು ಬೇಗ ಅನುಸರಿಸುತ್ತಾರೆ. ಆದರೆ ಅವರು, ನಮ್ಮ ಆಹಾರ ಸಂಸ್ಕೃತಿಯನ್ನು ಅನುಸರಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು.

ವೈಜ್ಞಾನಿಕವಾಗಿ ಜ್ಞಾನ ವಿಕಾಸಕ್ಕೆ ತಮ್ಮನ್ನು ತಾವೇ ತೆರೆದುಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಡಾ. ಎಸ್‌.ವಿ. ಹಿರೇಮಠ, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಎ.ಬಿ. ಸೊನಪ್ಪನವರ, ಸಂಯೋಜಕ ಡಾ. ಬಿ.ಎಸ್‌. ಅಗಡಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.